ಧಾರವಾಡ: ಕಲೆಯೊಂದಿಗೆ ಸಾಹಿತ್ಯ ಬೆರೆತರೆ ಜೀವನ ಅರ್ಥ ಪೂರ್ಣವಾಗುವುದು ಎಂದು ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ್ ಹೇಳಿದರು. ನಗರದ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಕಲಾವಿದ ವಿ.ಡಿ. ಬಡಿಗೇರರ ಪ್ರಕೃತಿ ಕಲಾ ಸಂಭ್ರಮ ಹಾಗೂ ಜಲವರ್ಣ ಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬೊಬ್ಬ ಕವಿಗೆ ಒಂದೊಂದು ವಿಮಶಾìತ್ಮಕ ಭಾವಗಳು ಹುಟ್ಟಿಕೊಳ್ಳಲು ಸಾಧ್ಯ. ಚಿತ್ರಕಲೆ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಲಾವಿದ ಮೊದಲು ವೀಕ್ಷಿಸುವ ಗುಣಗಳನ್ನು ಬೆಳೆಸಿಕೊಂಡು ವಿವಿಧ ವರ್ಣಗಳಿಂದ ಅಭಿವ್ಯಕ್ತ ಪಡಿಸುತ್ತಾನೆ. ಅದು ಅವನ ಹೃದಯ ಭಾಷೆ.
ಹಾಗೆಯೇ ಒಬ್ಬ ಸಾಹಿತಿ ಪ್ರಕೃತಿಯ ಸೊಬಗಿನ ಸಂಭ್ರಮ ಕಾವ್ಯ, ಗದ್ಯ ಹಾಗೂ ಲೇಖನ ಮೂಲಕ ಅಭಿವ್ಯಕ್ತಿ ವ್ಯಕ್ತಪಡಿಸಲು ಶಕ್ತನಾಗುತ್ತಾನೆ. ಕಲೆಯೊಂದಿಗೆ ಸಾಹಿತ್ಯವೂ ಒಂದುಗೂಡಿದಾಗ ಅದರಲ್ಲಿರುವ ಆನಂದ, ಸುಖವೇ ಬೇರೆಯಾಗಿರುತ್ತದೆ ಎಂದರು. ಅತಿಥಿಯಾಗಿದ್ದ ಕವಿವಿ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ|ಶಿವಾನಂದ ಶೆಟ್ಟರ್ ಮಾತನಾಡಿ, ಇತ್ತೀಚೆಗೆ ಜಲವರ್ಣದಲ್ಲಿ ರಚಿಸುವ ಕಲಾವಿದರ ಸಂಖ್ಯೆ ಕ್ಷೀಣಿಸುತ್ತಿದೆ.
ಆದರೆ ಹಿರಿಯ ಕಲಾವಿದ ವಿ.ಡಿ. ಬಡಿಗೇರ ಎಂಬಂತ್ತರ ಹೊಸ್ತಿಲಲ್ಲಿದ್ದರೂ ಅವರ ಉತ್ಸಾಹ ಬತ್ತಿಲ್ಲ. ಇವರು ಎಲ್ಲ ಯುವ ಕಲಾವಿದರಿಗೆ ಆದರ್ಶವಾಗಿದ್ದಾರೆ ಎಂದರು. ಕಲಾವಿದ ವಿ.ಡಿ. ಬಡಿಗೇರ ಅವರು, ತಮ್ಮ 34 ಜಲವರ್ಣ ಕಲಾಕೃತಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಎಂ.ಆರ್. ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಈಶ್ವರ ಜೋಶಿ, ಡಾ|ವಿರೂಪಾಕ್ಷ ಬಡಿಗೇರ, ಗಂಗಾಧರ ಪತ್ತಾರ, ನವಮಿ ಬಡಿಗೇರ, ಪ್ರಾಚಾರ್ಯ ಎಸ್.ಕೆ. ಪತ್ತಾರ, ಬಸವರಾಜ ಕುರಿ ಇತರರು ಇದ್ದರು. ನಂತರ ಜಲವರ್ಣ ಕಲಾಕೃತಿಗಳ ಪ್ರದರ್ಶನ ಜರುಗಿತು.