Advertisement
ಕೀನ್ಯಾದ ನೈರೋಬಿಯ ಲ್ಯಾಂಗ್‌ಟಾ ಉಪನಗರದಲ್ಲಿರುವ ಜಿರಾಫೆ ಮ್ಯಾನರ್ ಹೋಟೆಲ್‌ನಲ್ಲಿ ಗ್ರಾಹಕರು ಜಿರಾಫೆಯ ಜೊತೆ ಭೋಜನ ಸವಿಯಬಹುದು. ಒಂದು ಶರತ್ತು ಏನೆಂದರೆ ಇಲ್ಲಿ ಊಟ ಮಾಡಲು, ತಂಗಲು ಒಂದು ವರ್ಷ ಮೊದಲೇ ಕಾಯ್ದಿರಿಸಬೇಕು. ಅಷ್ಟು ಬೇಡಿಕೆ ಈ ಹೋಟೆಲ್‌ಗೆ. ಬೇರೆ ಬೇರೆ ದೇಶಗಳಿಂದ ಜಿರಾಫೆಗಳ ಜೊತೆಗೆ ಉಪಾಹಾರ ಸ್ವೀಕರಿಸಲು ಪ್ರವಾಸಿಗರು ಸಾಲುಸಾಲಾಗಿ ಬರುತ್ತಿದ್ದರೂ ಇಲ್ಲಿ ಇರುವುದು ಕೇವಲ ಹನ್ನೆರಡು ಕೊಠಡಿಗಳು ಮಾತ್ರ.
1930ರ ದಶಕದಲ್ಲಿ ಇಲ್ಲಿ ಹನ್ನೆರಡು ಎಕರೆ ಜಾಗ ಖರೀದಿ ಮಾಡಿ ಹೋಟೆಲ್ ನಿರ್ಮಿಸಿದರೂ ಅಷ್ಟೊಂದು ವ್ಯಾಪಾರ ಇರಲಿಲ್ಲ. 1960ರ ಬಳಿಕ ಹಲವು ಮಂದಿಗೆ ಅದು ಮಾರಾಟವಾದರೂ ಯಾರೂ ಲಾಭ ಮಾಡಿಕೊಳ್ಳಲಿಲ್ಲ. 1974ರಲ್ಲಿ ಜಾಕ್ ಲೆಸ್ಲಿ ಮೆಲ್ವಿಲೆ ಎಂಬವನು ತನ್ನ ಅಮೆರಿಕನ್ ಪತ್ನಿ ಜೆಟ್ಟಿಯ ಜೊತೆಗೂಡಿ ಹೋಟೆಲನ್ನು ಖರೀದಿಸಿದ. ವ್ಯಾಪಾರದಲ್ಲಿ ಲಾಭವಾಗಬೇಕಿದ್ದರೆ ಏನಾದರೂ ಹೊಸತು ಮಾಡಬೇಕೆಂಬ ಯೋಚನೆಯಿಂದ ಎರಡು ರೋಥ್ ಚೈಲ್ಡ್ ತಳಿಯ ಜಿರಾಫೆ ಮರಿಗಳನ್ನು ತಂದ. ಅಳಿವಿನಂಚಿನಲ್ಲಿರುವ ಅಪರೂಪದ ತಳಿಯಾದ್ದರಿಂದ ಅದನ್ನು ನೋಡಲು ಜನರು ಬರತೊಡಗಿದರು. ಈಗ ಹೋಟೆಲಿನ ಜಿರಾಫೆ ಸಂಸಾರ ಹತ್ತರ ಸಂಖ್ಯೆ ತಲುಪಿದೆ. ಸನಿಹದಲ್ಲೇ ಅಭಯಾರಣ್ಯ
ಈಗ ವನ್ಯಜೀವಿ ಸಂರಕ್ಷಣೆಯ ಇಲಾಖೆ ಈ ಜಿರಾಫೆ ಹೋಟೆಲಿನ ಬಳಿ 140 ಎಕರೆ ಅರಣ್ಯ ಬೆಳೆಸಿ ವಿವಿಧ ಪ್ರಾಣಿ, ಪಕ್ಷಿಗಳಿರುವ ಅಭಯಾರಣ್ಯವನ್ನು ರೂಪಿಸಿದೆ. ಹೋಟೆಲ್‌ನಲ್ಲಿ ಒಂದು ದಿನ ಮಾತ್ರ ತಂಗಲು ಅವಕಾಶವಿರುವ ಕಾರಣ ಜಿರಾಫೆಗಳೊಂದಿಗೆ ಇನ್ನಷ್ಟು ಕಾಲ ಇರಬೇಕೆಂದು ಬಯಸುವವರು ಮತ್ತೆ ಮತ್ತೆ ಅಲ್ಲಿಗೆ ಬರುತ್ತಲೇ ಇರುತ್ತಾರೆ. ಜಿರಾಫೆಗಳ ಜೀವನಕ್ರಮವನ್ನು ಅಧ್ಯಯನ ಮಾಡುವವರು ಕೂಡ ಬರುತ್ತಾರೆ.
Related Articles
ಇಲ್ಲಿನ ಜಿರಾಫೆಗಳು ಮನುಷ್ಯನನ್ನು ತುಂಬ ಪ್ರೀತಿಸುತ್ತವೆ. ಕಿಟಕಿ, ಬಾಗಿಲುಗಳ ಒಳಗೆ ನೀಳವಾದ ಕೊರಳು ತೂರಿಸಿ ತಿಂಡಿಗಾಗಿ ನಾಲಗೆ ಚಾಚುತ್ತವೆ. ಪ್ರವಾಸಿ ಬಯಸಿದರೆ ಅವನ ತಟ್ಟೆಯಲ್ಲಿರುವ ಆಹಾರವನ್ನು ಜೊತೆಗೆ ಹಂಚಿಕೊಳ್ಳಬಹುದು ಅಥವಾ ಅವುಗಳಿಗಾಗಿ ತಯಾರಿಸಿದ ಹುಲ್ಲಿನ ಉಂಡೆಗಳನ್ನು ಖರೀದಿ ಮಾಡಿ ತಿನ್ನಲು ಕೊಡಬಹುದು. ಬೆಳಗ್ಗೆ ಮತ್ತು ಮಧ್ಯಾಹ್ನ ಜಿರಾಫೆಗಳು ಹೋಟೆಲಿನ ಊಟದ ಕೋಣೆಯ ಕಿಟಕಿಯ ಬಳಿ ತಪ್ಪದೆ ಹಾಜರಾಗಿ, ಅತಿಥಿಗಳು ಕೊಡುವ ಸತ್ಕಾರವನ್ನು ಸ್ವೀಕರಿಸುತ್ತವೆ. ಮಾಲೀಕ ಸನ್ನೆ ಮಾಡಿದರೆ ಮುತ್ತನ್ನೂ ಕೊಡುತ್ತವೆ ಇವು.
Advertisement
– ಪ. ರಾಮಕೃಷ್ಣ ಶಾಸ್ತ್ರಿ