ಗುಂಡ್ಲುಪೇಟೆ(ಚಾಮರಾಜನಗರ): ಎದೆ ನೋವು ಕಾಣಿಸಿಕೊಂಡ ವ್ಯಕ್ತಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಆಗಮಿಸಿದ ವೇಳೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನೆ ತಾಲೂಕಿನ ತೆರಕಣಾಂಬಿ ಆಸ್ಪತ್ರೆಯಲ್ಲಿ ಭಾನುವಾರ (ಆ.7) ಬೆಳಗ್ಗೆ ನಡೆದಿದೆ.
ತಾಲೂಕಿನ ತೆರಕಣಾಂಬಿ ಗ್ರಾಮದ ಮಹೇಶ ನಾಯಕ (32) ಮೃತ ವ್ಯಕ್ತಿ.
ಈತನಿಗೆ ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಆಗಮಿಸಿದಾಗ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.
ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ: ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆ ಆಸ್ಪತ್ರೆಯಲ್ಲಿ ಮಹೇಶ ನಾಯಕ ಮೃತಪಟ್ಟ ಪರಿಣಾಮ ರೊಚ್ಚಗೆದ್ದ ಪೋಷಕರು ಹಾಗೂ ಗ್ರಾಮಸ್ಥರು ಗುಂಡ್ಲುಪೇಟೆ-ಚಾಮರಾಜನಗರ ಹೆದ್ದಾರಿ ತಡೆದು ಆತನ ಶವವನ್ನು ರಸ್ತೆ ಮಧ್ಯೆದಲ್ಲಿಟ್ಟು ಪ್ರತಿಭಟನೆ ನಡೆಸಿದರು. ಈ ವೇಳೆ ತಾಲೂಕು ಆಡಳಿತ ಹಾಗೂ ಶಾಸಕ ಸಿ.ಎಸ್.ನಿರಂಜನ ಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ತೆರಕಣಾಂಬಿ ಆಸ್ಪತ್ರೆಯಲ್ಲಿ ಕಳೆದ 5 ತಿಂಗಳಿಂದಲೂ ಖಾಯಂ ವೈದ್ಯರಿಲ್ಲದೆ ದಿನದ ಪಾಳಿಯಲ್ಲಿ ಬೇರೆ ಆಸ್ಪತ್ರೆ ವೈದ್ಯರು ಬಂದು ಹೋಗುತ್ತಾರೆ. ಅದರ ಜೊತೆಗೆ ನರ್ಸ್‍ಗಳು ಕೂಡ ಸಮರ್ಪಕವಾಗಿಲ್ಲ. ಇದರಿಂದ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಘಟನೆ ಸಂಭವಿಸಿದ್ದು, ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
108 ಆ್ಯಂಬುಲೆನ್ಸ್ ವಾಹನ ಇದ್ರೂ ಪಯೋಜನವಿಲ್ಲ: ತೆರಕಣಾಂಬಿ ಆಸ್ಪತ್ರೆಯಲ್ಲಿ 108 ಆ್ಯಂಬುಲೆನ್ಸ್ ವಾಹನವಿದ್ದು, ಇದಕ್ಕೆ ಚಾಲಕನಿಲ್ಲದ ಕಾರಣ ಹಲವು ತಿಂಗಳುಗಳಿಂದ ವ್ಯರ್ಥವಾಗಿ ನಿಂತಿದೆ. ಸಕಾಲದಲ್ಲಿ ಆ್ಯಂಬುಲೆನ್ಸ್ ಸೇವೆ ದೊರಕಿದ್ದರೆ ಮೃತ ಬದುಕುಳಿಯುತ್ತಿದ್ದ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಈ ಸಂದರ್ಭದಲ್ಲಿ ತೆರಕಣಾಂಬಿ ಗ್ರಾಮಸ್ಥರು ಹಾಗೂ ಮೃತನ ಸಂಬಂಧಿಕರು ಹಾಜರಿದ್ದರು.