Advertisement
ಅಮಾಯಕನ ಮೇಲೆ ಲಾರಿ ಹರಿಸಿ ಕೊಲೆ ಮಾಡಿಸಿದ್ದ ಆರೋಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಮುನಿಸ್ವಾಮಿಗೌಡ (49) ಮತ್ತು ಲಾರಿ ಹರಿಸಿದ ಚಾಲಕ ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿ ಹೋಬಳಿಯ ಕರಕುಚ್ಚಿಯ ದೇವೇಂದ್ರ ನಾಯಕ (38)ನನ್ನು ಗಂಡಸಿ ಪೊಲೀಸರು ಬಂಧಿಸಿದ್ದಾರೆ. ಲಾರಿ ಹರಿದು ಸತ್ತವನು ತನ್ನ ಗಂಡನೇ ಎಂದು ಪೊಲೀಸರ ಬಳಿ ನಾಟಕವಾಡಿದ ಮುನಿಸ್ವಾಮಿ ಗೌಡನ ಪತ್ನಿ ಶಿಲ್ಪಾರಾಣಿ ತಲೆಮರೆಸಿಕೊಂಡಿದ್ದಾಳೆ.
ಎಂಆರ್ಎಫ್ ಟಯರ್ ವ್ಯಾಪಾರ ಮಾಡಿಕೊಂಡಿದ್ದ ಮುನಿಸ್ವಾಮಿ ಸಾಲದಿಂದಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ. ಆತ ಡಬಲ್ ಆಕ್ಸಿಡೆಂಟ್ ಬೆನಿಫಿಟ್(ಡಿಎಬಿ) ಜೀವ ವಿಮೆ ಸೇರಿ ಹಲವು ವಿಮಾ ಪಾಲಿಸಿ ಮಾಡಿಸಿದ್ದ. ತನ್ನನ್ನೇ ಹೋಲುವ ಅಮಾಯಕ ವ್ಯಕ್ತಿಯೊಬ್ಬನನ್ನು ಗುರುತಿಸಿ ಆತನೊಂದಿಗೆ ವಿಶ್ವಾಸ ಬೆಳೆಸಿ ಆ. 10 ರಂದು ಹೊಸಕೋಟೆಯಿಂದ ಕಾರಿನಲ್ಲಿ ಕರೆದುಕೊಂಡು ಮಂಗಳೂರಿಗೆ ಹೋಗಿ ಅಲ್ಲಿಂದ ಬಂದು ಗಂಡಸಿ ಸಮೀಪ ಮೊದಲೇ ಯೋಜಿಸಿದಂತೆ ದೇವೇಂದ್ರ ನಾಯಕ್ ಲಾರಿ ತಂದು ಅಪರಿಚಿತನ ಮೇಲೆ ಹರಿಸಿದ್ದ.
ಆನಂತರ ಮುನಿಸ್ವಾಮಿಯ ಪತ್ನಿ ಗಂಡಸಿ ಠಾಣೆಗೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ತನ್ನ ಗಂಡನೇ ಎಂದು ಹೇಳಿದ್ದಳು. ಶವವನ್ನು ತೆಗೆದು ಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿ ನಾಟಕವಾಡಿದ್ದಳು.ಲಾರಿ ಹರಿಸಿ ಕೊಲೆಯಾದ ಅಮಾಯಕ ಭಿಕ್ಷುಕ ನಿರಬಹುದು ಎಂದು ಹೇಳಲಾಗುತ್ತಿದೆ.