ಮದ್ದೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಮದ್ದೂರು ಪಟ್ಟಣದ ತಾಲೂಕು ಕಚೇರಿ ಹೊರ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದ್ದು ಸ್ಥಳೀಯರಲ್ಲಿ ಆತಂಕ ವಾತಾವರಣ ಮೂಡಿಸಿದೆ. ಮದ್ದೂರು ತಾಲೂಕು ಕೊಪ್ಪ ಹೋಬಳಿ ಮರಳಿಗ ಗ್ರಾಮದ ಎಂ. ಚನ್ನಯ್ಯ ಅವರ ಪುತ್ರ ಚನ್ನರಾಜು (45) ಹಲ್ಲೆಗೊಳಗಾದ ವ್ಯಕ್ತಿ.
ಎರಡು ವರ್ಷಗಳ ಹಿಂದೆ ಚನ್ನರಾಜು ಅವರ ಪುತ್ರಿ ಮಂಡ್ಯ ಮೂಲದ ಯುವಕನೊಡನೆ ಪ್ರೇಮ ವಿವಾಹವಾಗಿದ್ದ ಸಂಬಂಧ ಸ್ಥಳೀಯ ಕೆಲ ಯುವಕರು ಇದಕ್ಕೆ ಸಾಥ್ ನೀಡಿದ್ದು ಈ ವಿಚಾರವಾಗಿ ಗ್ರಾಮದಲ್ಲಿ ವಿರಸ ಉಂಟಾಗಿತ್ತೆನ್ನಲಾಗಿದೆ. ತಮ್ಮ ಮಗಳ ವಿವಾಹ ಸಂಬಂಧ ಚನ್ನರಾಜು ಮತ್ತು ಕುಟುಂಬದವರು ಸ್ಥಳೀಯ ಯುವಕ ನಂದನ್ ಮತ್ತು ಇತರರ ವಿರುದ್ಧ ಪದೇಪದೆ ದೂರುತ್ತಿದ್ದ ಹಿನ್ನೆಲೆಯಲ್ಲಿ ಹಲವು ಬಾರಿ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ದ್ವೇಷ ಮರುಕಳಿಸಿದ್ದು ಕಾರ್ಯನಿಮಿತ್ತ ಮದ್ದೂರು ತಾಲೂಕು ಕಚೇರಿಗೆ ಆಗಮಿಸಿದ್ದ ಚನ್ನರಾಜು ಅವರನ್ನು ಗುರಿಯಾಗಿರಿಸಿಕೊಂಡು ಕಚೇರಿಯಿಂದ ಹೊರಬಂದ ತಕ್ಷಣ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ತೀವ್ರ ಗಾಯಗೊಂಡ ಚನ್ನರಾಜು ಅವರನ್ನು ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಹಾಡಹಗಲೇ ನಡೆದ ಹಲ್ಲೆ ಕೃತ್ಯವನ್ನು ತಾಲೂಕು ಕಚೇರಿ ಹೊರ ಆವರಣದಲ್ಲಿದ್ದ ಸಾರ್ವಜನಿಕರು ತಡೆಯಲು ಮುಂದಾದ ವೇಳೆ ಅವರ ವಿರುದ್ಧವೂ ಆರೋಪಿ ನಂದನ್ ತಿರುಗಿಬಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕರ ಹಲ್ಲೆಯಿಂದ ಗಾಯಗೊಂಡ ಆರೋಪಿ ನಂದನ್ ಕೂಡ ಮದ್ದೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.