Advertisement

ಗ್ರಾಹಕನೆಂದು ನಂಬಿಸಿ 9.45 ಕೋಟಿ ರೂಪಾಯಿ ದೋಚಿದ ವಂಚಕ

09:53 AM Dec 17, 2019 | Team Udayavani |

ದುಬಾಯಿ: ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್ ಅಕೌಂಟಿ ನಲ್ಲಿ ತಾವು ಇರಿಸಿದ್ದ 4.9 ಮಿಲಿಯನ್ ಧಿರ್ಹಾಮ್ ಕಾಣೆಯಾದ ಕುರಿತಂತೆ ದಾಖಲಿಸಿದ್ದ ವಂಚನೆ ಪ್ರಕರಣದ ದೂರಿಗೆ ಸಂಬಂಧಿಸಿದಂತೆ ಆ ಗ್ರಾಹಕರಿಗೆ ಪೂರ್ತಿ ಮೊತ್ತವನ್ನು ಹಿಂತಿರುಗಿಸುವಂತೆ ದುಬಾಯ್ ಗ್ರಾಹಕ ನ್ಯಾಯಾಲಯವು ಸದರಿ ಬ್ಯಾಂಕಿಗೆ ಆದೇಶ ನೀಡಿದೆ.

Advertisement

ಸೌದಿ ಅರೇಬಿಯಾದ ವ್ಯಕ್ತಿಯೊಬ್ಬರು ಇಲ್ಲಿನ ಸ್ಥಳೀಯ ಬ್ಯಾಂಕೊಂದರಲ್ಲಿ 2015ರಲ್ಲಿ ಖಾತಯೊಂದನ್ನು ತೆರೆದಿದ್ದರು ಮತ್ತು ಆಸ್ತಿ ಮೇಲಿನ ಹೂಡಿಕೆಯ ಉದ್ದೇಶದಿಂದ ತಮ್ಮ ಖಾತೆಯಲ್ಲಿ 4.9 ಮಿಲಿಯನ್ ಧಿರ್ಹಾಮ್ ಗಳನ್ನು (9.45 ಕೋಟಿ ರೂಪಾಯಿ) ಜಮೆ ಮಾಡಿದ್ದರು. ಬಳಿಕ 2017ರಲ್ಲಿ ತಮ್ಮ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು ಬಂದ ಆ ವ್ಯಕ್ತಿಗೆ ಆಘಾತ ಕಾದಿತ್ತು. ಅವರ ಅಕೌಂಟ್ ಬ್ಯಾಲೆನ್ಸ್ ಶೂನ್ಯವಾಗಿತ್ತು!

ಆಘಾತಕ್ಕೊಳಗಾದ ಗ್ರಾಹಕ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರನ್ನು ಸಲ್ಲಿಸಿದ್ದರು. ಮತ್ತು ಈ ಕುರಿತಾಗಿ ವಿಚಾರಣೆ ನಡೆಸಿದಾಗ ಈ ಹಣ ನಾಪತ್ತೆಯ ಹಿಂದೆ ಗ್ರಾಹಕ ಸೇವಾ ಸಿಬ್ಬಂದಿಯೊಬ್ಬರ ಕೈವಾಡ ಇರುವುದನ್ನು ಪತ್ತೆ ಹಚ್ಚಿತ್ತು.

ಈ ವಂಚಕ ಗ್ರಾಹಕ ಸೇವಾ ಸಿಬ್ಬಂದಿ ಈ ಬ್ಯಾಂಕ್ ಗ್ರಾಹಕರ ಗುರುತಿನ ದಾಖಲೆಯನ್ನು ನಕಲು ಮಾಡಿಕೊಂಡು ಬ್ಯಾಂಕಿನ ಶಾಖಾ ಪ್ರಬಂಧಕರ ಬಳಿಗೆ ಹೋಗಿ ತನ್ನ ಗ್ರಾಹಕರು ಯುಎಇ ತೊರೆಯುತ್ತಿರುವ ಕಾರಣದಿಂದ ತಮ್ಮ ಖಾತೆಯನ್ನು ಮುಚ್ಚಲು ಬಯಸಿದ್ದಾರೆ ಮತ್ತು ಅದರಲ್ಲಿರುವ ಮೊತ್ತವನ್ನು ಹಿಂಪಡೆಯಲು ಉದ್ದೇಶಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

ಮಾತ್ರವಲ್ಲದೇ ಆ ಗ್ರಾಹಕರನ್ನೇ ಹೋಲುವ ಆಫ್ರಿಕಾ ದೇಶದ ಪ್ರಜೆಯೊಬ್ಬನನ್ನೂ ಸಹ ತನ್ನ ಜೊತೆ ಕರೆದುಕೊಂಡು ಹೋಗಿ ಬ್ಯಾಂಕಿನ ಮ್ಯಾನೇಜರ್ ಗೆ ಈತನೇ ನಿಜವಾದ ಖಾತೆದಾರನೆಂದೂ ಸಹ ಪರಿಚಯಿಸಿದ್ದಾನೆ. ಮಾತ್ರವಲ್ಲದೆ ಈ ಸಂದರ್ಭದಲ್ಲಿ ಗುರುತಿನ ಚೀಟಿಯ ಮೂಲಪ್ರತಿ ತೋರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಉದ್ಯೋಗಿ ಮತ್ತು ವಂಚಕ ವ್ಯಕ್ತಿಯ ನಡುವೆ ವಿವಾದ ಉಂಟಾದ ವಿಷಯವೂ ಬಹಿರಂಗಗೊಂಡಿದೆ.

Advertisement

ಖಾತೆದಾರ ವ್ಯಕ್ತಿಯು ಈ ಮೊದಲೇ ತನ್ನ ಗುರುತಿನ ಚೀಟಿಯ ಮೂಲಪ್ರತಿಯನ್ನು ಬ್ಯಾಂಕಿಗೆ ಸಲ್ಲಿಸಿದ್ದರಿಂದ ಮತ್ತೆ ಅದನ್ನು ಸಲ್ಲಿಸುವ ಅಗತ್ಯ ಇಲ್ಲವೆಂದು ಬ್ಯಾಂಕ್ ಸಿಬ್ಬಂದಿ ಹೇಳಿ ಗುರುತಿನ ಚೀಟಿಯ ನಕಲು ಪ್ರತಿಗೆ ತನ್ನ ಸಹಿ ಹಾಕಿ ವಂಚಕ ವ್ಯಕ್ತಿಗೆ ದೊಡ್ಡ ಮೊತ್ತದ ಹಣ ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದ್ದಾನೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಬ್ಯಾಂಕ್ ಸಿಬ್ಬಂದಿ ಮತ್ತು ಆಫ್ರಿಕಾ ವ್ಯಕ್ತಿಯನ್ನು ಬಂಧಿಸಿ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ನಮ್ಮ ಬ್ಯಾಂಕಿನ ಉದ್ಯೋಗಿಯೇ ತನ್ನ ಹುದ್ದೆಯ ದುರುಪಯೋಗ ಮಾಡಿ ವಂಚನೆ ಎಸಗಿರುವುದರಿಂದ ತಾನು ಇದಕ್ಕೆ ಬಾಧ್ಯಸ್ಥನಲ್ಲ ಎಂಬ ಬ್ಯಾಂಕಿನ ವಾದವನ್ನು ತಿರಸ್ಕರಿಸಿದ ದುಬಾಯಿ ಗ್ರಾಹಕ ನ್ಯಾಯಾಲಯವು 12 ಪ್ರತಿಶತ ಬಡ್ಡಿ ಸಹಿತ ಸದರಿ ಮೊತ್ತವನ್ನು ಬ್ಯಾಂಕ್ ಮತ್ತು ಇಬ್ಬರು ಆರೋಪಿಗಳು ಸೇರಿ ನೈಜ ಗ್ರಾಹಕರಿಗೆ ಪಾವತಿಸುವಂತೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next