Advertisement

ಅವನತಿ ಆಹ್ವಾನಿಸುತ್ತಿರುವ ಮನುಷ್ಯ

01:22 PM Apr 23, 2017 | Team Udayavani |

ದಾವಣಗೆರೆ: ತಂತ್ರಜ್ಞಾನದ ಹೆಸರಲ್ಲಿ ಮನುಷ್ಯ ತನ್ನ ಕೆಡುಕನ್ನೇ ತಾನೇ ತಂದು ಕೊಳ್ಳುತ್ತಿದ್ದಾನೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಶ್ರೀದೇವಿ ಅಭಿಪ್ರಾಯಪಟ್ಟರು. ನಗರದ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಕಾಲೇಜಿನಲ್ಲಿ ಶನಿವಾರ ಕಾನೂನು ಸೇವಾ ಪ್ರಾಧಿಕಾರ, ಮಾನವ ಹಕ್ಕು ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು.

Advertisement

ತಂತ್ರಜ್ಞಾನದ ಅಭಿವೃದ್ಧಿಗೆ ಮಾರು ಹೋಗುತ್ತಿರುವ ನಾವು ನಮ್ಮ ಅವನತಿಗೆ ನಾವೇ ದಾರಿ ಮಾಡಿಕೊಡುತ್ತಿದ್ದೇವೆ. ಇದರಿಂದ ಪರಿಸರವನ್ನು ಅಧಃಪತನಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದರು. ನಮ್ಮ ಪೂರ್ವಜರು ನೀರು, ಭೂಮಿ, ಸುಂದರ ಪರಿಸರ ನಮಗೆ ಉಳಿಸಿಕೊಟ್ಟು ಹೋದರು. 

ಆದರೆ, ನಾವು ಅದನ್ನು ಉಳಿಸಿಕೊಳ್ಳುವ ಬದಲು ಅಳಿಸುವ ಕೆಲಸ ಮಾಡುತ್ತಿದ್ದೇವೆ. ಪೂರ್ವಜರು ಪರಿಸರದೊಂದಿಗೆ ಹೊಂದಿಕೊಂಡು ಬದುಕುವ ಬಗೆ ಕಲಿತಿದ್ದರು. ಆದರೆ, ನಮ್ಮ ತಪ್ಪಿನಿಂದ ಇಂದು ತಾಪಮಾನ ಏರುತ್ತಿದೆ. ಮೂರು ತಿಂಗಳಿಗೊಮ್ಮೆ ವಾತಾವರಣದಲ್ಲಿ ವೈಪರೀತ್ಯ ಕಾಣುತ್ತಿದೆ. ದಾವಣಗೆರೆಯಂತಹ ನಗರದಲ್ಲಿ ಇಂದು ತಾಪಮಾನ 40 ಡಿಗ್ರಿ ಸೆಲಿಯಸ್‌ ತಲುಪಿದೆ. 

ಇದೆಲ್ಲಕ್ಕೂ ನಾವೇ ಕಾರಣ ಎಂದು ಅವರು ಹೇಳಿದರು.  ಈಗೀಗ  ನುಷ್ಯ ತನ್ನ ಬೆಳವಣಿಗೆಗಾಗಿ ಇತರೆ ಜೀವಿಗಳ ಜೀವಕ್ಕೆ ಸಂಚಕಾರಿ ಆಗುತ್ತಿದ್ದಾನೆ. ಮೊಬೈಲ್‌ ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಕ್ಕಿ, ಪಕ್ಷಿಗಳು ನಾಶವಾಗುತ್ತಿವೆ. ಮೊಬೈಲ್‌ ವಿಷ ವಸ್ತುವಾಗಿ  ಪರಿಣಮಿಸುತ್ತಿದೆ.

ಅಪಾಯಕಾರಿಯಾಗಿರುವ ಮೊಬೈಲ್‌ ಫೋನ್‌ ಮಿತಿಯಾಗಿ ಬಳಸುವುದು ಸೂಕ್ತ ಎಂದು ಸಲಹೆ ನೀಡಿದರು. ಮನೆಯಲ್ಲಿ ನೋಡುವ ಟಿವಿಯೂ ಸಹ ಮನುಷ್ಯನ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯಗಳು ಪರಿಸರ ಮತ್ತು ಭೂಮಿಯಲ್ಲಿ ನಶಿಸುವುದಿಲ್ಲ. ಇದರ ವಿಲೇವಾರಿಗೆ ಸರ್ಕಾರ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ.

Advertisement

ಅದಷ್ಟು ತ್ಯಾಜ್ಯ ವಸ್ತುಗಳ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿ ಎಂದು ಕಿವಿಮಾತು ಹೇಳಿದರು. ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧಿ ಲಯದ ನ್ಯಾಯಾಧೀಶರಾದ ಎ.ಎಸ್‌. ಸದಲಗಿ ಮಾತನಾಡಿ, ನಾವು ವಿಷಾನಿಲ ಹೊರಸೂಸುವ ವಾಹನ ಬಳಕೆ ಕಡಮೆ ಮಾಡಬೇಕು. ಸೈಕಲ್‌ ಬಳಸುವುದು ಪರಿಸರ ಸ್ನೇಹಿ ಆಗಿದೆ.

ಇದರಿಂದ ನಮ್ಮ ಆರೋಗ್ಯ ಸಹ ಸುಧಾರಣೆ ಆಗುತ್ತದೆ. ಐಶಾರಾಮಿ ಜೀವನಕ್ಕೆ ಕೃಷಿ ಭೂಮಿಯನ್ನು ನಿವೇಶನಗಳನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಉಪನ್ಯಾಸ ನೀಡಿದ ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ ಕುಮಾರ್‌, ನಮ್ಮ ದೇಶದಲ್ಲಿ ಶೇ.47ರಷ್ಟು ಮಕ್ಕಳು ಇದ್ದಾರೆ.

ಅವರಿಗೆ ಬಾಲ್ಯದಲ್ಲಿಯೇ ಭೂಮಿ ವಾತಾವಾರಣದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಪರಿಸರದಲ್ಲಿ ಇಂಧನ, ವಿದ್ಯುತ್‌ ಮಿತ ಬಳಕೆ ಮಾಡಿ ಪ್ರಕೃತಿಯ ಸಂಪನ್ಮೂಲ ವೃದ್ಧಿಸಬೇಕಿದೆ ಎಂದರು. ಮಾಗನೂರು ಬಸಪ್ಪ ಪಬ್ಲಿಕ್‌ ಟ್ರಸ್ಟ್‌ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು, ಜಿಲ್ಲಾ ಕಾನೂನು ಸೇವಾ ಪ್ರಾಧಿಧಿಕಾರದ ಸದಸ್ಯ ಕಾರ್ಯದರ್ಶಿ ಸುವರ್ಣ ಕೆ. ಮಿರ್ಜಿ, ವಕೀಲರ ಸಂಘದ ಅಧ್ಯಕ್ಷ ಟಿ.ಎಚ್‌. ಸಿದ್ದಪ್ಪ ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next