ಬೆಂಗಳೂರು: ವಿದೇಶಗಳಿಂದ ಅಕ್ರಮವಾಗಿ ಚಿನ್ನಾಭರಣ ಸಾಗಿಸಿದ್ದ ಮೂರು ಪ್ರತ್ಯೇಕ ಪ್ರಕರಣಗಳನ್ನು ಪತ್ತೆಹಚ್ಚಿರುವ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 69.75 ಲಕ್ಷ ರೂ. ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ಪ್ರತ್ಯೇಕ ಪ್ರಕರಣಗಳಲ್ಲಿ ಪೈಕಿ ದುಬೈನಿಂದ ಸೆ.16ರಂದು ಬೆಂಗಳೂರಿಗೆ ಆಗಮಿಸಿದ ಇಬ್ಬರು ವ್ಯಕ್ತಿಗಳು ಚಪ್ಪಲಿಯಲ್ಲಿ 1 ಕೆ.ಜಿಗೂ ಅಧಿಕ ಚಿನ್ನ ಸಾಗಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಸೆ.16ರಂದು ದುಬೈನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಪುತಾನ್ ವೀದುಶಂಶೀರ್ ಹಾಗೂ ಸಲ್ಮಾನ್ ಫರೀಸ್ ಎಂಬುವವರನ್ನು ಅನುಮಾನದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಚಪ್ಪಲಿಯಲ್ಲಿ ಚಿನ್ನ ಬಚ್ಚಿಟ್ಟಿರುವುದು ಗೊತ್ತಾಗಿದೆ. ಬಳಿಕ ಚಪ್ಪಲಿಯಲ್ಲಿದ್ದ 41.34 ಲಕ್ಷ ರೂ. ಮೌಲ್ಯದ 1ಕೆ.ಜಿ. 319 ಗ್ರಾಂ ಚಿನ್ನವನ್ನು ಜಪ್ತಿ ಮಾಡಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಪ್ರಮುಖ ಆರೋಪಿಯಾಗಿರುವ ಪುತಾನ್ ದುಬೈನಿಂದ ಅಕ್ರಮವಾಗಿ ಚಿನ್ನ ತಂದಿದ್ದು, ಎರಡು ಚಪ್ಪಲಿಯ ಮೇಲ್ಮದವರನ್ನು ಬಿಚ್ಚಿ ಅದರೊಳಗಡೆ ಚಿನ್ನವನ್ನಿಟ್ಟು ಬಳಿಕ ಅದರ ಮೇಲೆ ಮೇಲ್ಮದರವನ್ನು ಅಂಟಿಸಿದ್ದ. ಬಳಿಕ ಗೋವಾದಲ್ಲಿ ವಿಮಾನ ಹತ್ತಿಕೊಂಡಿದ್ದ ಪಕ್ಕದ ಸೀಟಿನಲ್ಲಿ ಕುಳಿತುಕೊಂಡ ಸಹಪ್ರಯಾಣಿಕ ಸಲ್ಮಾನ್ ಫರೀಸ್‌ಗೆ ನೀಡಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಕುರಿತು ತನಿಖೆ ಮುಂದುವರಿದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಚ್ಚಿಟ್ಟುಕೊಂಡಿದ್ದ ಚಿನ್ನದ ಕಡಗ!: ಮತ್ತೂಂದು ಪ್ರಕರಣದಲ್ಲಿ ಸೆ. 15ರಂದು ಮಲೇಷ್ಯಾದ ಕೌಲಾಲಂಪುರದಿಂದ ಆಗಮಿಸಿದ ವಿಮಾನದಿಂದ ಒಬ್ಬ ಪ್ರಯಾಣಿಕ ಅರ್ಧ ಕೆ.ಜಿಗೂ ಅಧಿಕ ಕಚ್ಚಾ ಚಿನ್ನದ ಕಡಗ ಹಾಗೂ ಚಿನ್ನದ ಸರ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ. ಮೊಯಿದ್ದೀನ್ ಕುಂಜು ಮೊಹಮದ್ ಶಫೀ (47) ಆರೋಪಿ.
ವಿಮಾನ ನಿಲ್ದಾಣದಲ್ಲಿ ಆರೋಪಿ ಮೊಯಿದ್ದೀನ್‌ನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಆತ ತಾನು ಧರಿಸಿದ್ದ ಬಟ್ಟೆಯೊಳಗಡೆ ಒಂದು ಚಿನ್ನದ ಕಡಗ ಹಾಗೂ ಚಿನ್ನದ ಸರವನ್ನು ಬಚ್ಚಿಟ್ಟುಕೊಂಡಿರುವುದು ಕಂಡುಬಂದಿದೆ. ಆತನಿಂದ ವಶಪಡಿಸಿಕೊಂಡ ಚಿನ್ನದ ವಸ್ತುಗಳ ಬೆಲೆ 17.91 ಲಕ್ಷ ರೂ.ಗಳದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈ ತೋಳಿನ ಕೆಳಗೆ ಕಡಕ್ ಚಿನ್ನ: ಸೆ.13ರಂದು ದುಬೈನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರು ಕೈ ತೋಳಿನ ಬಟ್ಟೆಯೊಳಗಡೆ ಬಚ್ಚಿಟ್ಟುಕೊಂಡು ತಂದಿದ್ದ 300 ಗ್ರಾಂ ತೂಕದ ಎರಡು ಚಿನ್ನದ ಗಟ್ಟಿಗಳನ್ನು ಸಾಗಿಸುವಾಗ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಒಮನ್ ಏರ್‌ಫ್ಲೈಟ್‌ನಿಂದ ಬಂದಿಳಿದ ವಿನೋದ್‌ಕುಮಾರ್ ಪರಸ್ಮಾಲ್ ಜೈನ್ ಹಾಗೂ ಪಿಂಟೋ ಕುಮಾರ್ ಬಂಧಿತರು. ಇಬ್ಬರೂ ಆರೋಪಿಗಳು ತಲಾ ಒಂದೊಂದು ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಆಗಮಿಸಿದ್ದು, ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಮೂರು ಪ್ರಕರಣಗಳ ತನಿಖೆ ಮುಂದುವರಿದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
* ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ
* ಮೂರು ಪ್ರತ್ಯೇಕ ಪ್ರಕರಣ, ಐವರು ಆರೋಪಿಗಳು
* ಚಪ್ಪಲಿಯಲ್ಲಿತ್ತು 1 ಕೆ.ಜಿಗೂ ಅಧಿಕ ಚಿನ್ನ
* 2.ಕೆ.ಜಿಗೂ ಅಧಿಕ ಚಿನ್ನ ಸಾಗಾಟ, ಚಿನ್ನದ ಮೌಲ್ಯ 69.75 ಲಕ್ಷ ರೂ.
* ಬಟ್ಟೆಯೊಳಗೆ ಬಚ್ಚಿಟ್ಟುಕೊಂಡಿದ್ದ ಚಿನ್ನದ ಕಡಗ