Advertisement

ಹುಡುಕಾಟದಲ್ಲಿ ಸಿಕ್ಕ ಕಳೆದು ಹೋದ ಬದುಕು

10:48 AM Jul 08, 2019 | Team Udayavani |

ಕಾಯಿಲೆಯ ಕೊನೆ ಹಂತದಲ್ಲಿ ನೀವು ಸಂಪೂರ್ಣವಾಗಿ ನಿಮ್ಮನ್ನೇ ಮರೆತಿರುತ್ತೀರಿ ವೈದ್ಯರು ಹೀಗೆ ಹೇಳುವಾಗ ಆಕೆಗೆ ಇಡೀ ಜಗತ್ತೇ ಕುಸಿದಂತಾಗುತ್ತದೆ. ಮಗಳ ಮುಖ ಕಣ್ಣ ಮುಂದೆ ಬರುತ್ತದೆ. ತಾನು ಬದುಕನ್ನೇ ಮರೆತರೆ ತನಗೆ ಬದುಕಾಗಿರುವ ತನ್ನ ಹತ್ತು ವರುಷದ ಮಗಳನ್ನು ನೋಡಿಕೊಳ್ಳುವವರಾರು, ಆಕೆಯ ಮುಂದಿನ ಭವಿಷ್ಯವೇನು … ದೇವಕಿಯ ತಲೆಯಲ್ಲಿ ನೂರಾರು ಪ್ರಶ್ನೆಗಳು.

Advertisement

ಕೊನೆಗೂ ಒಲ್ಲದ ಮನಸ್ಸಿನಿಮದ ಪರಿಹಾರವೊಂದನ್ನು ಕಂಡುಕೊಂಡು ನಿಟ್ಟುಸಿರು ಬಿಡುವ ವೇಳೆಗೆ ದೊಡ್ಡ ಶಾಕ್‌ ದೇವಕಿಗೆ ಎದುರಾಗುತ್ತದೆ. ಮಗಳನ್ನು ಕಿಡ್ನಾಪ್‌ ಮಾಡಲಾಗಿದೆ ಎಂಬ ಸುದ್ದಿ ಬರಸಿಡಿಲಿನಂತೆ ದೇವಕಿ ಕಿವಿಗಪ್ಪಳಿಸುತ್ತದೆ. ಇಷ್ಟು ಹೇಳಿದ ಮೇಲೆ ಇದೊಂದು ತಾಯಿ-ಮಗಳ ಕಥೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

“ಮಮ್ಮಿ’ ಚಿತ್ರದಲ್ಲಿ ಹಾರರ್‌ ಮೊರೆ ಹೋಗಿದ್ದ ನಿರ್ದೇಶಕ ಲೋಹಿತ್‌, ಈ ಬಾರಿ “ದೇವಕಿ’ ಮೂಲಕ ತಾಯಿಯೊಬ್ಬಳ ತೊಳಲಾಟವನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾ ನೋಡುವಾಗ ಮೇಲ್ನೋಟಕ್ಕೆ ನಿಮಗೆ ತಾಯಿ ಹಾಗೂ ಪೊಲೀಸ್‌ ಅಧಿಕಾರಿಯೊಬ್ಬ ಕಳೆದು ಹೋದ ಮಗುವನ್ನು ಹುಡುಕುವಂತೆ ಕಂಡರೂ,

ಚಿತ್ರದಲ್ಲಿ ಅದರಾಚೆ ಹಲವು ಅಂಶಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಮುಖ್ಯವಾಗಿ ಪತಿಯಿಂದ ದೂರವಾದ ಪತ್ನಿಯೊಬ್ಬಳು ಅನುಭವಿಸುವ ಹಿಂಸೆ, ಮಗಳು ಕಾಣದೇ ಹೋದಾಗ ತಾಯಿ ಹೃದಯ ಪಡುವ ಸಂಕಟ, ಸಹಾಯಕ್ಕೆ ನಿಲ್ಲುವ ಪೊಲೀಸ್‌ ಅಧಿಕಾರಿಯ ಮನದ ನೋವು, ವೇಶ್ಯಾವಾಟಿಕೆ, ಮಕ್ಕಳ ಮಾರಾಟ ಜಾಲದಂತಹ ಸರಿಪಡಿಸಲಾಗದ ಕೊಳಕು ವ್ಯವಸ್ಥೆ …

ಹೀಗೆ ಚಿತ್ರ ಹಲವು ಅಂಶಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ. ಚಿತ್ರ ತುಂಬಾ ಫ್ರೆಶ್‌ ಆಗಿ ಕಾಣುತ್ತದೆ ಎಂದರೆ ಅದಕ್ಕೆ ಕಾರಣ ಕೋಲ್ಕತ್ತಾ. “ದೇವಕಿ’ ಚಿತ್ರ ಸಂಪೂರ್ಣವಾಗಿ ಕೋಲ್ಕತ್ತಾದಲ್ಲಿ ಚಿತ್ರೀಕರಣಗೊಂಡಿದೆ. ಇಡೀ ಕಥೆ ನಡೆಯೋದೇ ಅಲ್ಲಿ. ಹಾಗಾಗಿ, ಅಲ್ಲಿನ ಪರಿಸರವನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ. ಜೊತೆಗೆ ಅಲ್ಲಿನ ಒಂದಷ್ಟು ಕಲಾವಿದರನ್ನು ಕೂಡಾ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

Advertisement

ನಿರ್ದೇಶಕ ಲೋಹಿತ್‌ ಯಾವುದೇ ಸಿದ್ಧಸೂತ್ರಗಳಿಗೆ ಅಂಟಿಕೊಳ್ಳದೇ ಸಿನಿಮಾ ಮಾಡಿದ್ದಾರೆ. ಒಂದು ಗಂಭೀರ ವಿಷಯವನ್ನು ಎಷ್ಟು ಗಂಭೀರವಾಗಿ ಕಟ್ಟಿಕೊಡಬಹುದೋ, ಅದನ್ನು ಇಲ್ಲಿ ಮಾಡಲಾಗಿದೆ. ಹಾಗಾಗಿ, ಔಟ್‌ ಅಂಡ್‌ ಔಟ್‌ ಮನರಂಜನೆ ಇಷ್ಟಪಡುವವರಿಗೆ ಈ ಸಿನಿಮಾ ಅಷ್ಟೊಂದು ರುಚಿಸಲಿಕ್ಕಿಲ್ಲ.

ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪ್ರಿಯಾಂಕಾ ಉಪೇಂದ್ರ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ತಾಯಿಯೊಬ್ಬಳ ನೋವು, ಮಗಳು ಸಿಗುತ್ತಾಳೆಂದಾಗಿನ ಖುಷಿ, ಮತ್ತೆ ಕೈ ತಪ್ಪಿದಾಗಿನ ದುಃಖ ಎಲ್ಲವನ್ನು ಪ್ರಿಯಾಂಕಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಪ್ರಿಯಾಂಕಾ ಉಪೇಂದ್ರ ಅವರ ಮಗಳು ಐಶ್ವರ್ಯಾ ಕೂಡಾ ಚಿತ್ರರಂಗಕ್ಕೆ ಬಂದಿದ್ದಾರೆ.

ಐಶ್ವರ್ಯಾ ಆಗಾಗ ಕಾಣಿಸಿಕೊಂಡರೂ, ನಟನೆಯಲ್ಲಿ ಗಮನಸೆಳೆಯುತ್ತಾರೆ. ಉಳಿದಂತೆ ಕಿಶೋರ್‌ ಪೊಲೀಸ್‌ ಅಧಿಕಾರಿಯಾಗಿ ಇಷ್ಟವಾಗುತ್ತಾರೆ. ಛಾಯಾಗ್ರಾಹಕ ವೇಣು ಕೋಲ್ಕತ್ತಾದ ಸೌಂದರ್ಯವನ್ನು ಕಟ್ಟಿಕೊಡುವಲ್ಲಿ ಹಿಂದೆ ಬಿದ್ದಿಲ್ಲ. ಚಿತ್ರದ ಹಿನ್ನೆಲೆ ಸಂಗೀತ ಕಥೆಯ ಆಶಯಕ್ಕೆ ತಕ್ಕುದಾಗಿದೆ.

ಚಿತ್ರ: ದೇವಕಿ
ನಿರ್ಮಾಣ: ರವೀಶ್‌, ಅಕ್ಷಯ್‌
ನಿರ್ದೇಶನ: ಲೋಹಿತ್‌
ತಾರಾಗಣ: ಪ್ರಿಯಾಂಕಾ ಉಪೇಂದ್ರ, ಐಶ್ವರ್ಯಾ, ಕಿಶೋರ್‌ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next