Advertisement

ರೋಚಕ ಹಣಾಹಣಿ; ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯ 5 ಕಥೆಗಳು

06:47 PM Oct 18, 2022 | Team Udayavani |

137 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ನಲ್ಲಿ ಇದುವರೆಗೆ ಕೇವಲ ಆರು ಬಾರಿ ಮಾತ್ರ ಅಧ್ಯಕ್ಷೀಯ ಹುದ್ದೆಗಾಗಿ ಚುನಾವಣೆಗಳು ನಡೆದಿವೆ. 1939, 1950, 1977, 1997, 2000 ಮತ್ತು 2022ರಲ್ಲಿ ಮಾತ್ರ ಚುನಾವಣೆಗಳು ನಡೆದಿವೆ. ಈ ಎಲ್ಲಾ ಆರು ಚುaನಾವಣೆಗಳೂ ಒಂದೊಂದು ರೋಚಕ ಇತಿಹಾಸವನ್ನೇ ಹೊಂದಿವೆ.

Advertisement

ಕಥೆ ಒಂದು
1939
ಬೋಸ್‌ ವರ್ಸಸ್‌ ಪಟ್ಟಾಭಿ ಸೀತಾರಾಮಯ್ಯ
ಇದು ಕಾಂಗ್ರೆಸ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಚುನಾವಣೆ. ಆಗ ಮಧ್ಯಪ್ರದೇಶದ ಜಬಲ್ಪುರದ ತ್ರಿಪುರಿ ಎಂಬ ಗ್ರಾಮದಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದಿತ್ತು. ವಿಶೇಷವೆಂದರೆ ಇದು ಹಾಲಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಸುಭಾಷ್‌ ಚಂದ್ರ ಬೋಸ್‌ ಮತ್ತು ಮಹಾತ್ಮಾ ಗಾಂಧಿ ಬೆಂಬಲಿತ ಪಟ್ಟಾಭಿ ಸೀತಾರಾಮಯ್ಯ ಅವರ ನಡುವೆ ನಡೆದ ಚುನಾವಣೆ. 1938ರಲ್ಲಿ ಮಹಾತ್ಮಾ ಗಾಂಧಿ, ಜವಾಹರ್‌ ಲಾಲ್‌ ನೆಹರು ಮತ್ತು ವಲ್ಲಭಭಾಯಿ ಪಟೇಲ್‌ ಅವರ ಬೆಂಬಲದೊಂದಿಗೆ ಬೋಸ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1939ರಲ್ಲಿ ಅಬ್ದುಲ್‌ ಕಲಾಂ ಆಜಾದ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಗಾಂಧಿಯವರ ಚಿಂತನೆಯಾಗಿತ್ತು. ಅಂದರೆ, ದೇಶದಲ್ಲಿ ಕೋಮು ಸೌಹಾರ್ದದ ಸಂದೇಶ ರವಾನೆ ಮಾಡುವ ದೃಷ್ಟಿಯಿಂದ ಈ ನೇಮಕಕ್ಕೆ ಗಾಂಧಿಯವರು ಒಲವು ತೋರಿದ್ದರು. ಆದರೆ ಬೋಸ್‌ ಅವರೇ ಕಣಕ್ಕಿಳಿದಿದ್ದರಿಂದ ಗಾಂಧಿಯವರ ಚಿಂತನೆ ಕೈಗೂಡಲಿಲ್ಲ. ಆಗ ಗಾಂಧಿಯವರು ನೆಹರೂ ಅವರನ್ನೇ ಬೋಸ್‌ ವಿರುದ್ಧವಾಗಿ ಕಣಕ್ಕಿಳಿಯುವಂತೆ ಕೋರಿಕೊಂಡಿದ್ದರು. ಅವರು ಒಪ್ಪಲಿಲ್ಲ.

ಕಡೆಗೆ ಗಾಂಧೀಜಿ ಆಂಧ್ರ ಪ್ರದೇಶದ ಪಟ್ಟಾಭಿ ಸೀತಾರಾಮಯ್ಯ ಅವರನ್ನು ಕಣಕ್ಕಿಳಿಸಿದರು. ಅಲ್ಲದೆ, ಬೋಸ್‌ ಅವರು ಆಗಿನ ಕಾಂಗ್ರೆಸ್‌ನಲ್ಲಿ ಮತ್ತು ಯುವ ಸಮುದಾಯದಲ್ಲಿ ಹೆಚ್ಚಿನ ಹೆಸರು ಗಳಿಸಿದ್ದರು. ಅಲ್ಲದೆ, ಯಾವುದೇ ಕಾರಣಕ್ಕೂ ಬ್ರಿಟಿಷರ ಜತೆ ಒಪ್ಪಂದದೊಂದಿಗೆ ಸ್ವಾತಂತ್ರ್ಯ ಪಡೆಯಬಾರದು ಎಂಬ ವಿಚಾರವನ್ನಿಟ್ಟುಕೊಂಡು ಬೋಸ್‌ ಪ್ರಚಾರ ನಡೆಸಿದ್ದರು. ಕಡೆಗೆ ಗಾಂಧಿ ಬೆಂಬಲಿತ ಅಭ್ಯರ್ಥಿ ವಿರುದ್ಧ ಬೋಸ್‌ ಪ್ರಚಂಡ ಗೆಲುವು ಸಾಧಿಸಿದರು. ವಿಚಿತ್ರವೆಂದರೆ, ಇದಾದ ಮೇಲೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ 15 ಸದಸ್ಯರಲ್ಲಿ 12 ಮಂದಿ ಬೋಸ್‌ ಅವರ ವಿರುದ್ಧ ತಿರುಗಿಬಿದ್ದರು. ಕಾರ್ಯಕಾರಿ ಸಮಿತಿಯಿಂದ ಬೋಸ್‌ ಅವರನ್ನು ವಜಾ ಮಾಡಲಾಯಿತು. ಬೇರೆ ಮಾರ್ಗವಿಲ್ಲದೇ ಬೋಸ್‌ ಅವರು ಆ ವರ್ಷವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಕಥೆ ಎರಡು
1950
ಪುರುಷೋತ್ತಮ್‌ ದಾಸ್‌ ಟಂಡನ್‌ ವರ್ಸಸ್‌ ಆಚಾರ್ಯ ಕೃಪಲಾನಿ

ಮೊದಲ ಚುನಾವಣೆ ಗಾಂಧೀಜಿ ಮತ್ತು ಬೋಸ್‌ ಅವರ ನಡುವಣ ಪ್ರತಿಷ್ಠೆಯ ಕದನವಾಗಿದ್ದರೆ, ಇದು ನೆಹರು ಮತ್ತು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ನಡುವಣ ಪ್ರತಿಷ್ಠೆಯ ಸಮರವಾಗಿ ಮಾರ್ಪಟ್ಟಿತು ಎಂದೇ ಹೇಳಬಹುದು. ಈ ಸಂದರ್ಭದಲ್ಲಿ ಪಟೇಲ್‌ ಅವರ ಬೆಂಬಲಿತ ಅಭ್ಯರ್ಥಿಯಾಗಿ ಪುರುಷೋತ್ತಮ್‌ ಟಂಡನ್‌ ಅವರು ಸ್ಪರ್ಧಿಸಿದರೆ, ಜವಾಹರ್‌ ಲಾಲ್‌ ನೆಹರು ಅವರ ಬೆಂಬಲಿತರಾಗಿ ಆಚಾರ್ಯ ಕೃಪಲಾನಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಟಂಡನ್‌ ಅವರು 1,306 ಮತ ಪಡೆದು ಗೆದ್ದು ನೆಹರು ಅವರ ಬಳಗಕ್ಕೆ ಸೋಲುಣಿಸಿದರು. ಆಚಾರ್ಯ ಕೃಪಲಾನಿ ಅವರು 1,092 ಮತ ಪಡೆದಿದ್ದರು. ಕಣದಲ್ಲಿದ್ದ ಮತ್ತೂಬ್ಬ ಅಭ್ಯರ್ಥಿ ಶಂಕರರಾವ್‌ ಡಿಯೋ ಅವರು 202 ಮತ ಪಡೆದರು. ಆದರೆ, ನೆಹರು ಅವರೊಂದಿಗಿನ ಭಿನ್ನಮತದಿಂದಾಗಿ ಪುರುಷೋತ್ತಮ್‌ ದಾಸ್‌ ಟಂಡನ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಪ್ರಧಾನಿಯಾಗಿದ್ದ ನೆಹರು ಅವರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Advertisement

ಕಥೆ ಮೂರು
1977
ಕೆ.ಬ್ರಹ್ಮಾನಂದ ರೆಡ್ಡಿ ವರ್ಸಸ್‌ ಸಿದ್ಧಾರ್ಥ ಶಂಕರ್‌ ರಾಯ್‌ ವರ್ಸಸ್‌ ಕರಣ್‌ ಸಿಂಗ್‌
ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ವಾಪಸ್‌ ತೆಗೆದುಕೊಂಡ ನಂತರ 1977ರಲ್ಲಿ ಲೋಕಸಭೆ ಚುನಾವಣೆ ನಡೆದು, ಕಾಂಗ್ರೆಸ್‌ ಸೋತು ಹೋಗಿತ್ತು. ಈ ಸೋಲಿನ ಹೊಣೆ ಹೊತ್ತು, ಆಗ ಅಧ್ಯಕ್ಷರಾಗಿದ್ದ ದೇವ್‌ ಕಾಂತ್‌ ಬರೂಚ್‌ ಅವರು ರಾಜೀನಾಮೆ ನೀಡಿದರು. ಆಗಲೂ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಇಂದಿರಾ ಗಾಂಧಿಯ ಪ್ರಭಾವವನ್ನು ಪಕ್ಷದಲ್ಲಿ ತಪ್ಪಿಸಬೇಕು ಎಂಬ ಪ್ರಯತ್ನವೂ ಆಯಿತು. ಆದರೂ, ಇಂದಿರಾ ಗಾಂಧಿಯವರ ಬೆಂಬಲಿತ ಕೆ.ಬ್ರಹ್ಮಾನಂದ ರೆಡ್ಡಿ ಅವರೇ ಚುನಾವಣೆಯಲ್ಲಿ ಗೆದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಸಿದ್ಧಾರ್ಥ ಶಂಕರ್‌ ರಾಯ್‌ ಮತ್ತು ಕರಣ್‌ ಸಿಂಗ್‌ ಅವರು ಸೋತರು.

ಕಥೆ ನಾಲ್ಕು
1997
ಸೀತಾರಾಂ ಕೇಸರಿ ವರ್ಸಸ್‌ ಶರದ್‌ ಪವಾರ್‌ ವರ್ಸಸ್‌ ರಾಜೇಶ್‌ ಪೈಲಟ್‌

1977ರ ನಂತರದಲ್ಲಿ 20 ವರ್ಷಗಳ ಬಳಿಕ ಮತ್ತೂಂದು ಬಾರಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ವಿಶೇಷವೆಂದರೆ, ಇದುವರೆಗೆ ನಡೆದ ಎಐಸಿಸಿ ಚುನಾವಣೆಗಳಲ್ಲೇ, ಅದರಲ್ಲೂ ಸ್ವಾತಂತ್ರೊéàತ್ತರದಲ್ಲಿ ನಡೆದ ಆಸಕ್ತಿದಾಯಕ ಚುನಾವಣೆ ಇದು. ಅಷ್ಟೇ ಅಲ್ಲ, ಈ ಚುನಾವಣೆಯಲ್ಲಿ ಇನ್ನೊಂದು ಆಸಕ್ತಿಕರ ವಿಚಾರವೂ ಇದೆ. ಸೀತಾರಾಂ ಕೇಸರಿ ಅವರು, ನಾಮಪತ್ರ ಪಡೆಯಲು ಎಐಸಿಸಿ ಕಚೇರಿಗೂ ಹೋಗಲಿಲ್ಲ. ಇವರ ಮನೆಬಾಗಿಲಿಗೇ ನಾಮಪತ್ರಗಳು ಬಂದಿದ್ದವು!

ವಿಶೇಷವೆಂದರೆ, ಸೀತಾರಾಂ ಕೇಸರಿ ಪರವಾಗಿ ಆಗ 67 ಸೆಟ್‌ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲೂ ಕೇಸರಿ ಅವರ ಪರವಾಗಿ ಆಗ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿದ್ದ ಎಲ್ಲ ಸದಸ್ಯರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು.

ಇವರ ವಿರುದ್ಧವಾಗಿ ಸ್ಪರ್ಧಿಸಿದ್ದ ಶರದ್‌ ಪವಾರ್‌ ಮತ್ತು ರಾಜೇಶ್‌ ಪೈಲಟ್‌ ಅವರು ತಲಾ ಮೂರು ಸೆಟ್‌ ನಾಮಪತ್ರ ಸಲ್ಲಿಕೆ ಮಾಡಲೂ ಪರದಾಡಿದ್ದರು. ಕಡೆಗೆ, ಸೀತಾರಾಂ ಕೇಸರಿ ಅವರು 7,460 ಮತಗಳಲ್ಲಿ 6,224 ಮತಗಳನ್ನು ಪಡೆದು ಗೆದ್ದರು. ಶರದ್‌ ಪವಾರ್‌ ಅವರಿಗೆ 888 ಮತಗಳು ಮತ್ತು ರಾಜೇಶ್‌ ಪೈಲಟ್‌ ಅವರಿಗೆ 354 ಮತ ಬಿದ್ದಿದ್ದವು. ಅಂದರೆ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಪವಾರ್‌ ಹಾಗೂ ಪೈಲಟ್‌ ಅವರಿಗೆ ಮತ ಬಿದ್ದಿದ್ದವು. ಉಳಿದಂತೆ ದೇಶದ ಎಲ್ಲ ಭಾಗಗಳಲ್ಲೂ ಸೀತಾರಾಂ ಕೇಸರಿ ಅವರ ಪರವೇ ಮತ ಹಾಕಲಾಗಿತ್ತು.

ಕಥೆ ಐದು
2000
ಸೋನಿಯಾ ಗಾಂಧಿ ವರ್ಸಸ್‌ ಜಿತೇಂದ್ರ ಪ್ರಸಾದ
ಕಾಂಗ್ರೆಸ್‌ ಪಾಲಿಗೆ ಇದು ಮರೆಯಲಾಗದ ಚುನಾವಣೆ. 1998 ಮತ್ತು 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತ್ತು. ಸೀತಾರಾಂ ಕೇಸರಿ ಅವರ ವಿವಾದಾತ್ಮಕ ತೀರ್ಮಾನಗಳು ಕಾಂಗ್ರೆಸ್‌ ಪಾಲಿಗೆ ಮುಳುವಾಗಿದ್ದವು. ಹೀಗಾಗಿ ಒಂದೇ ವರ್ಷದಲ್ಲಿ ಸೀತಾರಾಂ ಕೇಸರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, 1998ರಲ್ಲಿ ಸೋನಿಯಾ ಗಾಂಧಿಯವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಆದರೆ, 2000ರಲ್ಲಿ ಮತ್ತೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. ಕಾಂಗ್ರೆಸ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಗಾಂಧಿ-ನೆಹರು ಕುಟುಂಬದ ಸದಸ್ಯರೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುವಂತಾಯಿತು.

ಅಲ್ಲದೆ, 1999ರಲ್ಲೇ ಶರದ್‌ ಪವಾರ್‌, ಪಿ.ಎ.ಸಂಗ್ಮಾ ಮತ್ತು ತಾರೀಕ್‌ ಅನ್ವರ್‌ ಅವರು ಸೋನಿಯಾ ಗಾಂಧಿಯವರ ವಿದೇಶಿ ಮೂಲದ ಬಗ್ಗೆ ಪ್ರಶ್ನೆ ಎತ್ತಿ ಪಕ್ಷದಿಂದ ಹೊರನಡೆದರು.

ಇನ್ನೊಂದೆಡೆ ಪಕ್ಷದೊಳಗೈ ರಾಜೇಶ್‌ ಪೈಲಟ್‌ ಮತ್ತು ಜಿತೇಂದ್ರ ಪ್ರಸಾದ ಅವರು, ಕಾಂಗ್ರೆಸ್‌ನೊಳಗೆ ಸೋನಿಯಾ ಗಾಂಧಿಯವರ ಪ್ರಭಾವ ಇಳಿಸಲು ನೋಡುತ್ತಿದ್ದರು. ಹೀಗಾಗಿಯೇ 2000ರಲ್ಲಿ ಚುನಾವಣೆ ಎದುರಾಯಿತು. ಈ ನಡುವೆಯೇ ರಾಜೇಶ್‌ ಪೈಲಟ್‌ ಅಪಘಾತವೊಂದರಲ್ಲಿ ಅಕಾಲಿಕವಾಗಿ ಮರಣ ಹೊಂದಿದರು. ಜಿತೇಂದ್ರ ಪ್ರಸಾದ ಅವರು ಏಕಾಂಗಿಯಾಗಿ ನಿಂತು ಸೋನಿಯಾ ವಿರುದ್ಧ ಸ್ಪರ್ಧಿಸಿ, ಅವರ ಬೆಂಬಲಿಗರ ವಿರುದ್ಧ ಹೋರಾಡಿದರು. ಕಡೆಗೆ ಚುನಾವಣೆ ನಡೆದು, ಸೋನಿಯಾ ಗಾಂಧಿಯವರು 7,448 ಮತ ಪಡೆದರೆ, ಜಿತೇಂದ್ರ ಪ್ರಸಾದ ಅವರು ಕೇವಲ 94 ಮತ ಪಡೆಯುವಲ್ಲಿ ಯಶಸ್ವಿಯಾದರು.

ಗಾಂಧಿ ಕುಟುಂಬೇತರ ಕಾಂಗ್ರೆಸ್‌ ಅಧ್ಯಕ್ಷರು
1. ಪಟ್ಟಾಭಿ ಸೀತಾರಾಮಯ್ಯ – 1948-49
2. ಪುರುಷೋತ್ತಮ ದಾಸ್‌ ಟಂಡನ್‌- 1950
3. ಯು.ಎನ್‌. ಧೇಬರ್‌- 1955-59
4. ನೀಲಂ ಸಂಜೀವ ರೆಡ್ಡಿ- 1960-63
5. ಕೆ.ಕಾಮರಾಜ್‌ – 1964-67
6. ಸಿದ್ದವನಹಳ್ಳಿ ನಿಜಲಿಂಗಪ್ಪ-1968-69
7. ಜಗಜೀವನ್‌ ರಾಂ- 1970-71
8. ಶಂಕರ್‌ ದಯಾಳ್‌ ಶರ್ಮ -1972-74
9. ದೇವಕಾಂತ ಬರುವಾ – 1975-77
10. ಪಿ.ವಿ.ನರಸಿಂಹರಾವ್‌ -1992-96
11. ಸೀತಾರಾಂ ಕೇಸರಿ-1996-98

-ಸೋಮಶೇಖರ್‌ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next