Advertisement
ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ಹೊಣೆ ಯಾರು ಹೊರಬೇಕೆಂಬ ಜಿಜ್ಞಾಸೆ 1998-1999ರಲ್ಲಿಯೂ ತಲೆದೋರಿತ್ತು. ಪ್ರಸ್ತುತ ನಡೆಯುತ್ತಿರುವ ನಾಯಕತ್ವ ಕುರಿತ ಬಿಕ್ಕಟ್ಟು ಅಂದು ಕೂಡಾ ದೊಡ್ಡ ಮಟ್ಟದಲ್ಲಿಯೇ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿತ್ತು.
Related Articles
Advertisement
ಈ ಮಧ್ಯೆ ಎಚ್ .ಡಿ.ದೇವೇಗೌಡ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕೇಸರಿ ವಾಪಸ್ ಪಡೆಯುವ ಮೂಲಕ ವಿವಾದಕ್ಕೀಡಾಗಿದ್ದರು. 1997ರಲ್ಲಿ ಐಕೆ ಗುಜ್ರಾಲ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನೂ ಕಾಂಗ್ರೆಸ್ ವಾಪಸ್ ಪಡೆದಿತ್ತು. ಹೀಗೆ ಮಧ್ಯಂತರ ಲೋಕಸಭಾ ಚುನಾವಣೆ ವಾತಾವರಣ ನಿರ್ಮಾಣವಾದಾಗ ಮತ್ತೆ ಹಿರಿಯ ಕಾಂಗ್ರೆಸ್ ನಾಯಕರು ಸೀತಾರಾಮ್ ಕೇಸರಿ ನಾಯಕತ್ವ ಸರಿಯಿಲ್ಲ, ಅಲ್ಲದೇ ಮಧ್ಯಂತರ ಚುನಾವಣೆ ಎದುರಿಸಲು ಯಾವ ತಯಾರಿಯೂ ಮಾಡಿಕೊಂಡಿಲ್ಲ ಎಂದು ದೂರಿದ್ದರು. ಕೇಸರಿ ಅವರ ವಿರುದ್ಧ ಅಸಮಾಧಾನಗೊಂಡಿದ್ದ ಆರ್.ಕುಮಾರಮಂಗಲಂ ಮತ್ತು ಅಸ್ಲಾಂ ಶೇರ್ ಖಾನ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು.
1998ರಲ್ಲಿ ದಿಢೀರ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆದು ಸೀತಾರಾಮ್ ಕೇಸರಿ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಬಳಿಕ 1998ರ ಮಾರ್ಚ್ 14ರಂದು ಸೋನಿಯಾ ಗಾಂಧಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಸೋನಿಯಾ ಮುಂದೆ ಪಕ್ಷದೊಳಗಿನ ಮುಸುಕಿನ ಗುದ್ದಾಟ, ಬಣ ರಾಜಕೀಯ ಸಮಸ್ಯೆ ಬಗೆಹರಿಸಬೇಕಾದ ದೊಡ್ಡ ಸವಾಲು ಇದ್ದಿತ್ತು.
1999ರ ಮೇ 15ರಂದು ಲೋಕಸಭಾ ಚುನಾವಣೆಗೂ ಸ್ವಲ್ಪ ಸಮಯದ ಮುನ್ನ ಕಾಂಗ್ರೆಸ್ ನಾಯಕರಾಗಿದ್ದ ಶರದ್ ಪವಾರ್, ಪಿಎ ಸಂಗ್ಮಾ ಮತ್ತು ತಾರೀಖ್ ಅನ್ವರ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದರು. ಸೋನಿಯಾ ಗಾಂಧಿ ವಿದೇಶಿ ಮೂಲದವರು ಆಕೆಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿರುವುದು ಸರಿಯಲ್ಲ ಎಂದು ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದರು. ಈ ವಿವಾದದ ಬೆನ್ನಲ್ಲೇ ಸೋನಿಯಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ಸಿಡಬ್ಲ್ಯುಸಿಗೆ ಬರೆದ ಪತ್ರದಲ್ಲಿ ಸೋನಿಯಾ ಗಾಂಧಿ, ನಾನು ವಿದೇಶಿ ನೆಲದಲ್ಲಿ ಹುಟ್ಟಿದ್ದೇನೆ, ಆದರೆ ನಾನು ಭಾರತವನ್ನು ನನ್ನ ದೇಶವನ್ನಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಅಷ್ಟೇ ಅಲ್ಲ ನನ್ನ ಕೊನೆಯ ಉಸಿರು ಇರುವವರೆಗೂ ಭಾರತೀಯಳಾಗಿಯೇ ಇರುತ್ತೇನೆ. ಭಾರತ ನನ್ನ ತಾಯಿ ನೆಲ. ನನ್ನ ವೈಯಕ್ತಿಕ ಜೀವನಕ್ಕಿಂತ ಮಿಗಿಲಾದದ್ದು ಎಂದು ಉಲ್ಲೇಖಿಸಿದ್ದರು.
ರಾಜೀನಾಮೆ ಜಟಾಪಟಿ ನಂತರ ಪಕ್ಷದ ಹಲವು ಮುಖಂಡರು ಸೋನಿಯಾ ಗಾಂಧಿ ಬೆಂಬಲಕ್ಕೆ ನಿಂತಿದ್ದರು. ಅದರಲ್ಲಿ ಅಂದಿನ ಮಧ್ಯಪ್ರದೇಶ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ದೆಹಲಿ ಸಿಎಂ ಶೀಲಾ ದೀಕ್ಷಿತ್, ರಾಜಸ್ಥಾನ ಸಿಂಎ ಅಶೋಕ್ ಗೆಹ್ಲೋಟ್ ಮತ್ತು ಒಡಿಶಾ ಸಿಎಂ ಗಿರಿಧರ್ ಗಮಾಂಗ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸೋನಿಯಾ ರಾಜೀನಾಮೆ ವಾಪಸ್ ಪಡೆಯಬೇಕೆಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಕೊನೆಗೂ ಸೋನಿಯಾ ಗಾಂಧಿ ಪಕ್ಷದ ಹಿರಿಯ ನಾಯಕರ ಒತ್ತಡಕ್ಕೆ ಮಣಿದು ರಾಜೀನಾಮೆ ವಾಪಸ್ ಪಡೆದಿದ್ದರು. ಅದೂ ಶರತ್ ಪವಾರ್, ಸಂಗ್ಮಾ ಮತ್ತು ಅನ್ವರ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ವಜಾ ಮಾಡುವ ಷರತ್ತಿಗೆ ಒಪ್ಪಿದ ಬಳಿಕ ರಾಜೀನಾಮೆ ಹಿಂಪಡೆದಿದ್ದರು. ಹೀಗೆ ನೂರಕ್ಕೂ ಅಧಿಕ ವರ್ಷದ ಇತಿಹಾಸ ಹೊಂದಿದ್ದ ಕಾಂಗ್ರೆಸ್ ಪಕ್ಷದಲ್ಲೀಗ ಇದೀಗ ಮತ್ತೆ ನಾಯಕತ್ವದ ಪ್ರಶ್ನೆ ಎದ್ದಿದ್ದು ಹಿರಿಯ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ನಡುವೆ ದೊಡ್ಡ ಕಂದಕ ಏರ್ಪಟ್ಟಿದೆ. ಅಲ್ಲದೇ ಹಿರಿಯ ಕಾಂಗ್ರೆಸ್ ನಾಯಕರು ರಾಜೀನಾಮೆ ಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.