Advertisement

ಮಡಿಕೇರಿ ತಹಶೀಲ್ದಾರ್‌ ಕಚೇರಿ ಎದುರು ಏಕಾಂಗಿ ಹೋರಾಟ

07:43 PM Mar 08, 2020 | Sriram |

ಮಡಿಕೇರಿ: ಆರ್‌ಟಿಸಿ ವರ್ಗಾವಣೆಯ ಅರ್ಜಿಯನ್ನು ಸಕಾಲದಲ್ಲಿ ವಿಲೇವಾರಿ ಮಾಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಮಡಿಕೇರಿ ತಾಲ್ಲೂಕು ತಹಶೀಲ್ದಾರ್‌ ಕಚೇರಿಯಲ್ಲಿ ಏಕಾಂಗಿಯಾಗಿ ದಿಢೀರ್‌ ಧರಣಿ ಸತ್ಯಾಗ್ರಹ ನಡೆಸಿದ ಪ್ರಸಂಗ ನಡೆದಿದೆ.

Advertisement

ಅಧಿಕಾರಿಗಳು ತಿಂಗಳಾನುಗಟ್ಟಲೇ ಅಲೆದಾಡಿಸಿ ಆ ನಂತರ ವಿನಾಕಾರಣ ಅರ್ಜಿಯಲ್ಲಿ ನ್ಯೂನತೆಗಳಿವೆ ಎಂದು ಕುಂಟು ನೆಪ ಹೇಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಚೇಲಾವರ ಗ್ರಾಮದ ಬಾಚಮಂಡ ಲೋಕೇಶ್‌ ಅವರು ಆರೋಪಿಸಿದ್ದಾರೆ. ಜುಲೈನಿಂದ ತಾಲೂಕು ಕಚೇರಿಗೆ ತನ್ನ ಕುಟುಂಬದ ಆಸ್ತಿಯ ಆರ್‌.ಟಿ.ಸಿ ವರ್ಗಾವಣೆ ಮಾಡಿಸಿಕೊಳ್ಳಲು ಅಲೆದಾಡುತ್ತಿದ್ದು ದಾಖಲೆಗಳು ಗಣಕಯಂತ್ರದ ಶಾಖೆಗೆ ರವಾನೆಯಾಗಿದೆ. ಆದರೆ ಅಧಿಕಾರಿಗಳು ದಾಖಲೆ ನೀಡದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ನನ್ನ ಅರ್ಜಿ ಮತ್ತು ದಾಖಲೆಗಳು ಇಲ್ಲಿಯವರೆಗೆ ತಹಶೀಲ್ದಾರರ ಟೇಬಲ್‌ ಗೆ ತಲುಪಿಲ್ಲವೆಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಈ ಸಂದರ್ಭ ನಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಧರಣಿ ಕುಳಿತ ಬಗ್ಗೆ ಲೋಕೇಶ್‌ ಅವರನ್ನು ಪ್ರಶ್ನಿಸಿ ತಹಶೀಲ್ದಾರ್‌ ಅವರ ಕಚೇರಿಗೆ ಬರುವಂತೆ ತಿಳಿಸಿದರು.

ನಂತರ ತಹಶೀಲ್ದಾರ್‌ ಅವರ ಬಳಿ ತಮಗಾಗಿರುವ ಅನ್ಯಾಯದ ಕುರಿತು ವಿವರಿಸಿದ ಲೋಕೇಶ್‌ ಅವರು ಕೆಳಗಿನ ಅಧಿಕಾರಿಗಳು ದರ್ಪದಿಂದ ವರ್ತಿಸುತ್ತಿದ್ದಾರೆ, ಕಚೇರಿಗೆ ಅಲೆದು ಅಲೆದು ಸಾಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಡತವನ್ನು ತರಿಸಿಕೊಂಡ ತಹಶೀಲ್ದಾರರು ಅರ್ಜಿಯಲ್ಲಿರುವ ಕೆಲವು ನ್ಯೂನತೆಗಳನ್ನು ಮನವರಿಕೆ ಮಾಡಿಕೊಟ್ಟರು. ಇದನ್ನು ಸರಿಪಡಿಸಿದಲ್ಲಿ ಅರ್ಜಿ ವಿಲೇವಾರಿ ಮಾಡುವುದಾಗಿ ಭರವಸೆ ನೀಡಿದರು.

ಸತಾಯಿಸುವ ಅಧಿಕಾರಿಗಳು
ಪ್ರತಿಯೊಂದು ಅರ್ಜಿಯ‌ ವಿಲೇವಾರಿಯಲ್ಲೂ ವಿಳಂಬ ಧೋರಣೆ ತೋರಲಾಗುತ್ತಿದೆ. ಕೆಲವು ಅಧಿಕಾರಿಗಳು ಸಹನೆಯಿಂದ ವರ್ತಿಸುತ್ತಿಲ್ಲ. ಕಾರಣ ನೀಡದೆ ಕಡತಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಸತಾಯಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ಬರುವ ಬಡ ವರ್ಗದ ಪಾಡು ಹೇಳತೀರದು ಎಂದು ಸಾರ್ವಜನಿಕರು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next