Advertisement

ನ್ಯಾಯತರ್ಪು ಕೃಷಿಕರ ತೋಟಕ್ಕೆ ನುಗ್ಗಿದ ಒಂಟಿ ಸಲಗದಿಂದ ದಾಂಧಲೆ

01:12 AM Mar 11, 2024 | Team Udayavani |

ಬೆಳ್ತಂಗಡಿ: ನ್ಯಾಯತರ್ಪು ಗ್ರಾಮದ ಕೇಲ್ದಡ್ಕ, ಒಂಜಾರೆ ಮುದ್ದುಂಜ, ಹಾಕೋಟೆ, ಕಲಾಯಿತೊಟ್ಟು, ಕಜೆ, ಕೆಳಗಿನಬೆಟ್ಟು ಮತ್ತು ನಾಳ ಸಮೀಪದ ಪಾಂಡಿಬೆಟ್ಟು ಗ್ರಾಮಸ್ಥರ ಕೃಷಿ ತೋಟಕ್ಕೆ ತಡರಾತ್ರಿ ನುಗ್ಗಿದ ಒಂಟಿಸಲಗದಿಂದ ಬಾಳೆ ಕೃಷಿ ನಾಶವಾಗಿದೆ. ಗ್ರಾಮಸ್ಥರು ತಡ ರಾತ್ರಿ ಅರಣ್ಯ ಇಲಾಖೆಯ ಸಿಬಂದಿಗೆ ಮಾಹಿತಿ ನೀಡಿದರು.

Advertisement

ತತ್‌ಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಿಬಂದಿ ಸ್ಥಳೀಯ ಕೃಷಿಕರ ಜತೆ ಹುಡುಕಾಟ ನಡೆಸಿದರೂ ಸುಳಿವು ಸಿಗಲಿಲ್ಲ. ಕೇಲ್ದಡ್ಕ ಉಮೇಶ್‌ ಅವರ ಮನೆ ದನದ ಹಟ್ಟಿಯ ಪಕ್ಕದಲ್ಲಿ ಆನೆ ಬರುವುದನ್ನು ಗಮನಿಸಿದ ಸಾಕು ನಾಯಿ ಕೂಗಿದಾಗ ಒಂಟಿ ಸಲಗ ಕೂಗಿದ ಶಬ್ದವು ಸಿಸಿ ಕೆಮರಾದಲ್ಲಿ ಸೆರೆ ಯಾಗಿದೆ. ಸ್ವಲ್ಪ ಸಮಯದ ಅನಂತರ ರಮಾನಂದ ಪೂಜಾರಿಯವರ ಮನೆಯಂಗಳದಲ್ಲಿ ಕಾಣಿಸಿಕೊಂಡಿದ್ದ ಸಲಗ ವಸಂತ ಕುಮಾರ್‌ ಮತ್ತು ಜನಾರ್ದನ ಪೂಜಾರಿಯವರ ತೋಟದಲ್ಲಿ ಬಾಳೆ ಗಿಡಗಳನ್ನು ನಾಶಪಡಿಸ್ತಿದೆ.

ಕಲಾಯಿತೊಟ್ಟು ಗಿರಿಯಪ್ಪ ಗೌಡರ ಮನೆ ಅಂಗಳ ಪಕ್ಕದಲ್ಲಿ ಕಾಣಿಸಿಕೊಂಡ ಅನಂತರ ಕಜೆ ಕೆಳಗಿನ ಬೆಟ್ಟು ಶ್ರೀಧರ ಪೂಜಾರಿಯವರ ಮನೆ ದೈವದ ಕಟ್ಟೆ ಪಕ್ಕದಲ್ಲಿರುವ ಕಬ್ಬು ಗಿಡಗಳನ್ನು ತಿಂದು ಹಾಳು ಕೆಡವಿದೆ. ಪಾಂಡಿಬೆಟ್ಟು ವಿಠಲ ಗೌಡರ ತೋಟದ ಬಾಳೆ ಗಿಡಗಳನ್ನು ನಾಶ ಮಾಡಿದೆ.

ಬೆಳ್ತಂಗಡಿ ಅರಣ್ಯ ಇಲಾಖೆ ಸಿಬಂದಿಗಳಾದ ಮಡಂತ್ಯಾರು ಉಪವಲಯ ಅರಣ್ಯಾಧಿಕಾರಿ ರಾಜಶೇಖರ, ಗಸ್ತು ಅರಣ್ಯ ರಕ್ಷಕರಾದ ಸತೀಶ್‌ ಮತ್ತು ಅಕಿಲೇಶ್‌ ಸ್ಥಳಕ್ಕೆ ಭೇಟಿ ನಿಗಾ ವಹಿಸಿದರು. ಕಳೆದ 2 ದಿನಗಳಿಂದ ಕೊಯ್ಯೂರು ಪರಿಸರದಲ್ಲಿ ರಾತ್ರಿ 2 ಆನೆಗಳು ಕೃಷಿ ತೋಟಕ್ಕೆ ನುಗ್ಗಿ ದಾಂಧಲೆ ಮಾಡಿದ್ದು ಕೃಷಿಕರು ಅತಂಕದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next