ಸುರಪುರ ಎಂಬ ಅಗ್ರಹಾರದಲ್ಲಿ ಆತ್ಮಗುರು ಎಂಬ ಬ್ರಾಹ್ಮಣನೊಬ್ಬನಿದ್ದ. ಅವನು ಚಿಕ್ಕಂದಿನಲ್ಲೇ ಚೆನ್ನಾಗಿ ವೇದಶಾಸ್ತ್ರ ಪುರಾಣ ಕಾವ್ಯಗಳನ್ನೆಲ್ಲ ಅಧ್ಯಯನ ಮಾಡಿ ಆತ್ಮಜಾnನಿ ಎಂಬ ಪದವಿಗೆ ಪಾತ್ರನಾಗಿದ್ದ. ಅವನಿಗೆ ಸುಮತಿ ಎಂಬ ಹೆಂಡತಿಯೂ, ಆತ್ಮಾನಂದ ಎಂಬ ಮಗನೂ ಇದ್ದರು. ಆತ್ಮಗುರು ತನ್ನ ಮಗನಿಗೂ ಚೆನ್ನಾಗಿ ವಿದ್ಯೆ ಬುದ್ಧಿಯನ್ನು ಕಲಿಸಿ ಸಾಧಕನಾಗುವಂತೆ ಬೆಳೆಸಿದ್ದನು.
ಇದರಿಂದಾಗಿ ತಾಯಿಗೆ ಆಕ್ಷೇಪವಿತ್ತು. ಈ ವಿದ್ಯೆಗಳಿಂದ ಬದುಕಿಗೆ ಯಾವ ರೀತಿಯ ಸಹಾಯವೂ ಆಗುವುದಿಲ್ಲವೆನ್ನುವುದು ಅವಳ ಅಭಿಪ್ರಾಯವಾಗಿತ್ತು. ಆಧ್ಯಾತ್ಮದಿಂದ ಗಳಿಸಿದ ಜ್ಞಾನ ವಾಸ್ತವ ಪ್ರಪಂಚದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಹೇಳಿದ್ದಳು ಕೂಡಾ. ಅಪ್ಪ ಮಗ ತಾಯಿಯನ್ನು ಸಂತೈಸಲು ಪ್ರಯತ್ನಿಸಿದರಾದರೂ ಕಡೆಗೆ ಸುಮ್ಮನಾಗಿದ್ದರು.
ಒಂದು ದಿನ ಗೊಂಡಾರಣ್ಯದ ಪಕ್ಕದಲ್ಲಿ ತಂದೆ ಆತ್ಮಗುರು ಮತ್ತು ಮಗ ಆತ್ಮಾನಂದ ಇಬ್ಬರೂ ನಡೆದುಕೊಂಡು ಹೋಗುತ್ತಿದ್ದರು. ಸ್ವಲ್ಪ ಹೊತ್ತು ವಿರಮಿಸಿಕೊಳ್ಳಲೆಂದು ಮರದಡಿ ಕುಳಿತರು. ಆತ್ಮಾನಂದ ಧ್ಯಾನದಲ್ಲಿ ಮುಳುಗಿದ. ತಂದೆ ಆತ್ಮಗುರು ದಣಿದಿದ್ದರಿಂದ ನಿದ್ದೆಗೆ ಶರಣಾದ. ಅಷ್ಟರಲ್ಲಿ ಅದೆಲ್ಲಿಂದಲೋ ಭೀಕರ ಸಿಂಹವೊಂದು ಘರ್ಜಿಸಿದ ಸದ್ದಾಯಿತು. ಆತ್ಮಗುರು ಕೂಗಿ ಹೇಳಿದ “ಸಿಂಹ ಬರುತ್ತಿದೆ. ಪಕ್ಕದಲ್ಲೇ ಮರೆಯಾಗಿ ಅಥವಾ ಮರ ಹತ್ತಿ ತಪ್ಪಿಸಿಕೋ’ ಎಂದು. ಇಷ್ಟು ಹೇಳಿ ತಾನು ಮರ ಏರಿದ.
ಆದರೆ ಆತ್ಮಾನಂದನಿಗೆ ಎಚ್ಚರವಾಗಲಿಲ್ಲ. ಆತ ಧ್ಯಾನದಲ್ಲೇ ಮುಳುಗಿದ್ದ. ಸಿಂಹ ಹತ್ತಿರ ಬಂದಾಗಲೇ ಅವನಿಗೆ ಎಚ್ಚರವಾಯಿತು. ಸಿಂಹ ಮೊದಲು ಮರವನ್ನೇರಿದ್ದ ಆತ್ಮಗುರುವನ್ನು ಹಿಡಿಯಲು ನೋಡಿತು. ಆದರೆ ಸಿಕ್ಕಲಿಲ್ಲ. ನಂತರ ಆತ್ಮಾನಂದನ ಬಳಿ ಬಂದಿತು. ಸಿಂಹವನ್ನು ನೋಡಿ ಅವನು ಗಾಬರಿ ಬೀಳಲಿಲ್ಲ. ಸಿಂಹದ ಎದುರೇ ಓಡಿದರೆ ಬೆನ್ನಟ್ಟಿ ಬಂದು ಬೇಟೆಯಾಡುವುದು ಖಚಿತವೆಂದು ಅವನಿಗೆ ಗೊತ್ತಿತ್ತು. ಅದಕ್ಕೆ ಅವನು ಕುಳಿತಲ್ಲಿಂದ ಏಳಲಿಲ್ಲ. ತಪಸ್ಸಿಗೆ ಕುಳಿತಂತೆ ಕಣ್ಮುಚ್ಚಿ ನಿಶ್ಚಲನಾಗಿ ಕುಳಿತುಬಿಟ್ಟ. ಹತ್ತಿರ ಬಂದ ಸಿಂಹ ಆತ್ಮಾನಂದನ ಸುತ್ತ ನಡೆದಾಡಿ ಇದ್ಯಾವುದೋ ಶಿಲೆಯೆಂದುಕೊಂಡು ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ಸಾಯಿತು. ಮಗ, ಧ್ಯಾನಕ್ಕೆ ಕುಳಿತಂತೆ ಕೂತು ಸಿಂಹದಿಂದ ಪಾರಾದ ಸಂಗತಿ ತಿಳಿದು ತಾಯಿಗೆ ಒಂದು ವಿಷಯ ಮನವರಿಕೆಯಾಗಿತ್ತು. ಯಾವ ವಿದ್ಯೆ ಕಲಿತರೂ ಅದರಿಂದ ಎಂದಿಗೂ ಲಾಭವೇ ಹೊರತು, ಯಾವತ್ತಿಗೂ ನಷ್ಟವಿಲ್ಲ ಎಂದು.
– ವನರಾಗ ಶರ್ಮಾ