Advertisement
ಗರ್ಭಧಾರಣೆಯಾದ ಬಳಿಕ ಭ್ರೂಣವು ಗರ್ಭಕೋಶದ ಒಳಗಡೆಗೆ ಸರಿದು, ಸಹಜವಾಗಿ ಬೆಳೆದು ಮುಂದುವರಿಯದೇ ಇತರ ಅಸಹಜ ಭಾಗಗಳಲ್ಲಿ ಬೆಳವಣಿಗೆ ಮುಂದುವರಿಯುತ್ತಾ ಹೋದರೆ ಅಂತಹ ಗರ್ಭಧಾರಣೆಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ “ಎಕ್ಟೋಪಿಕ್ ಗರ್ಭಧಾರಣೆ’ಗಳೆಂದು ಕರೆಯುತ್ತಾರೆ. ಇಂತಹ ಪ್ರಕರಣಗಳಲ್ಲಿ ಸರಾಸರಿ 95ಕ್ಕಿಂತ ಅಧಿಕವಾಗಿ ಈ ಅಸಹಜ ಗರ್ಭಧಾರಣೆ ಗರ್ಭಕೋಶದ ನಳಿಕೆಗಳಲ್ಲಿಯೇ ಕಂಡುಬರುವ ಕಾರಣ ಸಾಮಾನ್ಯವಾಗಿ ಇವುಗಳನ್ನು “ನಳಿಕೆಯ ಗರ್ಭಧಾರಣೆ’ಗಳೆಂದು ಗುರುತಿಸುತ್ತಾರೆ. ಮಹಿಳೆಯರಲ್ಲಿ ಕಂಡುಬರುವಂತೆ ಮಾರಣಾಂತಿಕ ಗರ್ಭಾವಸ್ಥೆಗಳ ಪೈಕಿ ನಳಿಕೆಗಳ ಗರ್ಭಧಾರಣೆ ಪ್ರಮುಖವಾದದ್ದು. ಇತ್ತೀಚೆಗಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ಅಧಿಕಗೊಳ್ಳುತ್ತಿರುವ ಲೈಂಗಿಕ ಸೋಂಕುಗಳು, ಕೃತಕ ಗರ್ಭಧಾರಣಾ ವಿಧಾನಗಳಿಂದಾಗಿ ಈ ತೆರನಾದ ಗರ್ಭಧಾರಣೆಗಳ ಸಂಖ್ಯೆ ಹೆಚ್ಚುತ್ತಿದೆ.
ನಳಿಕೆಯಲ್ಲಿ ಗರ್ಭಧಾರಣೆಯಾದ ಬಳಿಕ ಭ್ರೂಣವು ಶರೀರದಿಂದ ಅಗತ್ಯವುಳ್ಳ ಸತ್ವಗಳನ್ನು ಪಡೆದು ಬೆಳೆಯುತ್ತಿರುವಾಗ ಅದರ ಗಾತ್ರವು ಅಧಿಕಗೊಳ್ಳುತ್ತಾ ಹೋಗುತ್ತದೆ. ಯಾವುದೇ ಕಾರಣದಿಂದ ನಳಿಕೆಯ ಭಾಗಗಳ ರಂಧ್ರಗಳು ಸಾಕಷ್ಟು ಪ್ರಮಾಣದಲ್ಲಿ ತೆರೆಯದೆ ಇದ್ದರೆ, ಅಲ್ಪ ಪ್ರಮಾಣದಲ್ಲಿ ಮಾತ್ರ ತೆರೆದಿದ್ದರೆ, ಮುಚ್ಚಿಕೊಂಡಿದ್ದರೆ ಅಥವಾ ಬಿಡುಗಡೆಗೊಂಡ ಅಂಡಾಣುವಿನತ್ತ ವೀರ್ಯಾಣುಗಳು ಚಲಿಸುವಷ್ಟು ಮಾತ್ರ ನಳಿಕೆಯ ರಂಧ್ರವು ತೆರೆದಿದ್ದಾಗ, ಗರ್ಭಧಾರಣೆಯಾದ ಬಳಿಕ ಭ್ರೂಣದ ಗಾತ್ರವು ಅಧಿಕಗೊಳ್ಳುವ ಕಾರಣದಿಂದ ಭ್ರೂಣವು ಗರ್ಭಕೋಶದ ಒಳಗಡೆಗೆ ಚಲಿಸಲಾಗದೇ ನಳಿಕೆಯ ಭಾಗದಲ್ಲಿಯೇ ಬೆಳವಣಿಗೆಯನ್ನು ಮುಂದುವರಿಸುತ್ತದೆ. ಗರ್ಭಧಾರಣೆ ನಡೆಯುವುದು ನಳಿಕೆಯಲ್ಲಿ. ಆದರೆ ನಿರ್ದಿಷ್ಟ ಅವಧಿಯ ಬಳಿಕವೂ ಅಸಹಜವಾಗಿ ನಳಿಕೆಯಲ್ಲಿಯೇ ಗರ್ಭಧಾರಣೆ ಮುಂದುವರಿಯಲು ನಳಿಕೆಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ಬಗೆಯ ಸೋಂಕುಗಳು ಕೂಡ ಕಾರಣವಾಗುತ್ತವೆ. ಸೋಂಕಿನಿಂದಾಗಿ ಭ್ರೂಣದ ಚಲನೆಗೆ ಸಹಕಾರಿಯಾಗುವ ನಳಿಕೆಯ ಒಳಗಿನ ಭಾಗವು ಸತ್ವಹೀನಗೊಂಡು ಅಂಟಿಕೊಳ್ಳುವುದು, ನಳಿಕೆಗಳ ರಂಧ್ರಗಳು ಅರ್ಧ ಮುಚ್ಚಿಕೊಳ್ಳುವ ಸಾಧ್ಯತೆ, ನಳಿಕೆಗಳ ಮೇಲ್ಭಾಗ ಹಾಗೂ ಕೆಳಭಾಗ ಪರಸ್ಪರ ಅಂಟಿಕೊಳ್ಳುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.
Related Articles
ಪ್ರಮುಖವಾಗಿ ಜನನಾಂಗಗಳನ್ನು ಶುಚಿಯಾಗಿಟ್ಟುಕೊಳ್ಳದಿಧಿರುವುದು, ಜನನಾಂಗಗಳ ಸಮೀಪದಲ್ಲಿ ನಡೆಸಲಾಗಿರುವ ಶಸ್ತ್ರಚಿಕಿತ್ಸೆಗಳು, ಶರೀರದ ಇತರ ಭಾಗಗಳ ಸೋಂಕುಗಳು ಜನನಾಂಗಗಳಿಗೆ ಪಸರಿಸುವುದರಿಂದ ಸೋಂಕುಗಳು ತಗಲುತ್ತವೆ. ರಕ್ತನಾಳಗಳ ಮೂಲಕ, ದುಗ್ಧರಸ ಗ್ರಂಥಿಗಳ ಮೂಲಕ ಮತ್ತು ನೇರ ಸಂಪರ್ಕದಿಂದ ಈ ಸೋಂಕು ತಗುಲುತ್ತದೆ. ಅಲ್ಲದೇ ಲೈಂಗಿಕ ಸೋಂಕುಗಳು, ನಳಿಕೆಗಳಲ್ಲಿ ನಡೆಸಲಾಗಿರುವ ಶಸ್ತ್ರಚಿಕಿತ್ಸೆಗಳಿಂದಲೂ ಸೋಂಕು ಉಂಟಾಗುತ್ತದೆ.
Advertisement
ಅಸಹಜ ಗರ್ಭಧಾರಣೆಅಸಹಜ ಗರ್ಭಧಾರಣೆಗಳು ಕೆಲವು ಗರ್ಭ ನಿರೋಧಕ ವಿಧಾನಗಳ ಬಳಕೆಗಳಿಂದ ಕೂಡ ವಿರಳವಾಗಿ ಕಂಡುಬರುತ್ತವೆ. ಪ್ರೊಜೆಸ್ಟೆರೋನ್ ಹಾರ್ಮೋನ್ ಮಾತ್ರವೇ ಇರುವ ಗರ್ಭ ನಿರೋಧಕ ಗುಳಿಗೆಗಳ ಸೇವನೆ ಅಥವಾ ಪ್ರೊಜೆಸ್ಟೆರೋನ್ ಹಾರ್ಮೋನನ್ನು ಒಳಗೊಂಡಿರುವ ಲೂಪ್ ಅನ್ನು ಗರ್ಭಕೋಶದ ಒಳಗಡೆ ಅಳವಡಿಸುವುದು ಇದಕ್ಕೆ ಉದಾಹರಣೆಗಳು. ಪ್ರೊಜೆಸ್ಟೆರೋನ್ ಹಾರ್ಮೋನ್‌ನ ಪ್ರಭಾವದಿಂದ ನಳಿಕೆಯ ಸ್ವಾಭಾವಿಕ ಚಲನೆಯು ದುರ್ಬಲವಾಗಿ ನಿಧಾನಗೊಳ್ಳುತ್ತದೆ. ಈ ಕಾರಣದಿಂದ ನಳಿಕೆಯು ಗರ್ಭಧಾರಣೆಯಾದ ಭ್ರೂಣವನ್ನು ನಿಗದಿತ ಅವಧಿಯಲ್ಲಿ ಗರ್ಭಕೋಶದ ಒಳಗಡೆ ಕೊಂಡೊಯ್ಯುವಲ್ಲಿ ವಿಫಲವಾಗುತ್ತದೆ. ಗರ್ಭಕೋಶದ ಒಳಗಡೆ ಅಳವಡಿಸುವಂತಹ ಗರ್ಭನಿರೋಧಕ ಲೂಪ್‌ಗ್ಳು ಗರ್ಭಕೋಶದ ಒಳಗಡೆ ಭ್ರೂಣವು ಬೆಳೆಯಲು ಬೇಕಾದ ಅನುಕೂಲಕರ ವಾತಾವರಣವನ್ನು ಕೆಡಿಸಿ ಗರ್ಭಕೋಶದ ಒಳಗಡೆ ಭ್ರೂಣ ಬೆಳೆಯುವುದನ್ನು ತಡೆಯುತ್ತವೆ. ಆದರೆ ಅವು ನಳಿಕೆಯಲ್ಲಿಯೇ ಮುಂದುವರಿಯುವ ಗರ್ಭಧಾರಣೆಗಳನ್ನು ತಡೆಹಿಡಿಯುವಲ್ಲಿ ವಿಫಲಗೊಳ್ಳುತ್ತವೆ. ಗರ್ಭ ನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಲ್ಲಿ ಅತ್ಯಂತ ವಿರಳವಾಗಿ ನಳಿಕೆಗಳು ಸಂಪೂರ್ಣವಾಗಿ ಮುಚ್ಚಿಕೊಳ್ಳದೇ ಮರು ಗರ್ಭಧಾರಣೆಯಾಗುವ ಸಾಧ್ಯತೆಗಳಿವೆ. ಮರು ಗರ್ಭಧಾರಣೆಯಾದಾಗ ನಳಿಕೆಯಲ್ಲಿಯೇ ಗರ್ಭಧಾರಣೆಯು ಮುಂದುವರಿಯುವ ಸರಾಸರಿ ಪ್ರಮಾಣ 25ರಿಂದ 40ರಷ್ಟಿರುತ್ತದೆ. ನಳಿಕೆಯ ಮೇಲಿನ ಆವರಣವು ಒಡೆದು ಹೋದರೆ ರಕ್ತಸ್ರಾವ ಉಂಟಾಗಿ ಅದು ಹೊಟ್ಟೆಯ ಒಳಗಡೆ ತುಂಬಿಕೊಳ್ಳುತ್ತದೆ. ನಳಿಕೆಯ ಕೆಳಭಾಗದಲ್ಲಿ ಒಡೆದು ಹೋದರೆ ಗರ್ಭಕೋಶ, ನಳಿಕೆ, ಅಂಡಾಶಯ ಹಾಗೂ ಇತರ ಭಾಗಗಳನ್ನು ಪರಸ್ಪರ ಜೋಡಿಸುವಂತಹ ಚೀಲದಂತಿರುವ ಪರೆಯ ಒಳಗೆ ಸಂಗ್ರಹಗೊಳ್ಳುತ್ತದೆ. ವಿರಳವಾಗಿ ಹೀಗೆ ವಿಸರ್ಜನೆಗೊಂಡ ಭ್ರೂಣದ ರಕ್ತ ಸಂಚಾರವು ಸಮರ್ಪಕವಾಗಿದ್ದಲ್ಲಿ ಭ್ರೂಣವು ಅಧಿಕ ಸಮಯದವರೆಗೆ ಮುಂದುವರಿದು ಬೆಳೆಯುವ ಸಾಧ್ಯತೆಗಳಿವೆ. ನಳಿಕೆಯ ಅತ್ಯಂತ ಹೊರಭಾಗದಲ್ಲಿ ಗರ್ಭಧಾರಣೆಯು ಮುಂದುವರಿದರೆ ಭ್ರೂಣವು ಬೆಳೆಯುತ್ತಾ ಹೋದಂತೆ ಹೊರಭಾಗವು ತನ್ನಿಂದ ತಾನೇ ತೆರೆದುಕೊಂಡು ಭ್ರೂಣವು ಸಂಪೂರ್ಣವಾಗಿ ಹೊಟ್ಟೆಯ ಕೆಳಭಾಗಕ್ಕೆ ವಿಸರ್ಜನೆಗೊಳ್ಳುತ್ತದೆ. ನಳಿಕೆಯ ಅತ್ಯಂತ ಕಿರಿದಾದ ಗಾತ್ರ ಹಾಗೂ ರಂಧ್ರವಿರುವ ಭಾಗದಲ್ಲಿ ಗರ್ಭಧಾರಣೆಯು ಮುಂದುವರಿದರೆ ಮಹಿಳೆಗೆ ಋತುಚಕ್ರ ನಿಂತ ಬಳಿಕ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕೆಲವೊಮ್ಮೆ ಋತುಚಕ್ರ ನಿಲ್ಲುವ ಮೊದಲೇ ನಳಿಕೆಯು ಒಡೆದು ಹೋಗಿ ತೀವ್ರ ರಕ್ತಸ್ರಾವವಾಗಿ ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆಗಳೂ ಇವೆ. ಹೊಟ್ಟೆಯೊಳಗೆ ಮುಂದುವರಿಯುವ ಗರ್ಭಧಾರಣೆ
ಇದರಲ್ಲಿ ಎರಡು ವಿಧಗಳಿವೆ. ಒಂದು, ನಳಿಕೆಯ ಆವರಣವನ್ನು ಸೀಳಿ ಭ್ರೂಣವು ಪರೆಗಳ ಸಮೇತ ಸತ್ವಯುತವಾಗಿ ಹೊಟ್ಟೆಯ ಒಳಭಾಗಕ್ಕೆ ವಿಸರ್ಜನೆಗೊಳ್ಳುವುದು. ಎರಡನೆಯದು, ಸಹಜವಾಗಿ ಗರ್ಭಕೋಶದ ಒಳಗಡೆ ಬೆಳೆಯುತ್ತಿರುವ ಭ್ರೂಣವು ಹಿಂದೆ ಗರ್ಭಕೋಶದಲ್ಲಿ ಆಗಿರುವ ಶಸ್ತ್ರಚಿಕಿತ್ಸೆಗಳ ಗಾಯ ಒಡೆಯುವುದರಿಂದ ಹೊಟ್ಟೆಯೊಳಗೆ ಸೇರಿಕೊಂಡು ಬೆಳವಣಿಗೆ ಮುಂದುವರಿಸುವುದು. ಹೊಟ್ಟೆಯೊಳಗಡೆ ಸೇರಿಕೊಂಡ ಭ್ರೂಣದ ಬೆಳವಣಿಗೆಯು ಮುಂದುವರಿಯಬೇಕಾದರೆ ಭ್ರೂಣವು ನಿಧಾನಗತಿಯಲ್ಲಿ ವಿಸರ್ಜನೆಗೊಳ್ಳಬೇಕು. ಭ್ರೂಣದ ರಕ್ಷಣಾ ಪರೆಗಳಿಗೆ ಯಾವುದೇ ರೀತಿಯ ಹಾನಿಯಾಗಿರಬಾರದು. ಜೀವಂತ ಭ್ರೂಣವು ರಕ್ಷಣಾ ಪರೆ ಹಾಗೂ ಇತರ ಭ್ರೂಣದ ಸಂಬಂಧಿತ ಭಾಗಗಳ ಸಹಿತ ಸಂಪೂರ್ಣವಾಗಿ ವಿಸರ್ಜನೆಗೊಳ್ಳಬೇಕು. ಈ ಗರ್ಭಧಾರಣೆಗಳ ಪರ್ಯಾವಸಾನ
ಅಲ್ಪ ಸಮಯದಲ್ಲೇ ಸತ್ವಹೀನಗೊಳ್ಳುವುದು, ತೀವ್ರ ರಕ್ತಸ್ರಾವ, ಬ್ಯಾಕ್ಟೀರಿಯಾ, ವೈರಸ್, ಪ್ರೊಟೋಜೋವಾ ಇತ್ಯಾದಿ ವಿವಿಧ ಹಾನಿಕಾರಕ ಸೂಕ್ಷ್ಮಜೀವಿಗಳ ಆಕ್ರಮಣ, ಭ್ರೂಣವು ಅಧಿಕ ಸಮಯದವರೆಗೆ ಬೆಳೆದು ಸತ್ವಹೀನಗೊಳ್ಳುವುದು ಮುಂತಾದ ರೀತಿಗಳಲ್ಲಿ ಇಂತಹ ಗರ್ಭಗಳು ಪರ್ಯಾವಸಾನಗೊಳ್ಳುತ್ತವೆ. ಅತ್ಯಂತ ವಿರಳವಾಗಿ ಒಂಬತ್ತು ತಿಂಗಳುಗಳವರೆಗೂ ಈ ಗರ್ಭಧಾರಣೆಯು ಮುಂದುವರಿಯುವ ಸಾಧ್ಯತೆ ಇದೆ. ಈ ರೀತಿಯಲ್ಲಿ ಅಸಹಜವಾಗಿ ಮುಂದುವರಿದ ಶಿಶುಗಳಲ್ಲಿ ಅನೇಕ ನ್ಯೂನತೆಗಳು ಹಾಗೂ ಅಂಗವೈಕಲ್ಯಗಳು ಕಂಡುಬರುತ್ತವೆ. ಈ ಗರ್ಭಧಾರಣೆಗಳು ಉಂಟಾದ ಸಂದರ್ಭದಲ್ಲಿ ಮಹಿಳೆಗೆ ಅತಿಯಾದ ಹೊಟ್ಟೆನೋವು, ತೀವ್ರ ರಕ್ತಹೀನತೆ ಕಂಡುಬರುತ್ತದೆ. ಅಲ್ಲದೆ, ಜನನಾಂಗಗಳಲ್ಲಿ ತೀವ್ರ ನೋವು, ರಕ್ತಸ್ರಾವ, ಗರ್ಭಕೋಶದ ಗಾತ್ರ ದೊಡ್ಡದಾಗಿರುವುದು, ಗರ್ಭದ್ವಾರವನ್ನು ಅಲ್ಲಾಡಿಸಿದಾಗ ನೋವು ಇವೇ ಮುಂತಾದ ಅಂಶಗಳು ಜನನಾಂಗಗಳ ಪರೀಕ್ಷೆಯಲ್ಲಿ ಕಂಡುಬರುತ್ತವೆ. ಚಿಕಿತ್ಸೆ
ನಳಿಕೆಯ ಗರ್ಭಧಾರಣೆಯ ಚಿಕಿತ್ಸಾ ಪ್ರಕ್ರಿಯೆಯು ಮಹಿಳೆ ಮತ್ತು ಕುಟುಂಬಸ್ಥರೊಡನೆ ಸಮಾಲೋಚನೆ, ಪರೀಕ್ಷೆ ವಿಧಾನಗಳು, ಔಷಧಗಳಿಂದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಒಳಗೊಂಡಿರುತ್ತದೆ. ಶಸ್ತ್ರಚಿಕಿತ್ಸೆಗಳ ಪೈಕಿ ಒಂದು ಉದರದರ್ಶಕದ ಮೂಲಕ ಮತ್ತು ಇನ್ನೊಂದು, ತೆರೆದ ಚಿಕಿತ್ಸೆಯಾಗಿ ನಡೆಸಲಾಗುತ್ತದೆ. ಹೊಟ್ಟೆಯ ಒಳಗಡೆ ಮುಂದುವರಿಯುವ ಗರ್ಭಧಾರಣೆಗಳನ್ನು ಬರೀ ತೆರೆದ ಶಸ್ತ್ರಚಿಕಿತ್ಸೆಯಿಂದ ಮಾತ್ರವೇ ಸರಿಪಡಿಸಲು ಸಾಧ್ಯ. ಈ ಗರ್ಭಧಾರಣೆಗಳ ಸಂಖ್ಯೆ ಇತ್ತೀಚೆಗೆ ಅಧಿಕವಾಗುತ್ತಿದ್ದರೂ ಆಧುನಿಕ ಚಿಕಿತ್ಸಾ ಸೌಕರ್ಯಗಳಿಂದಾಗಿ ಈ ಮಾರಣಾಂತಿಕ ಗರ್ಭಾವಸ್ಥೆಗಳಲ್ಲಿ ಕಂಡುಬರುವ ಬಹುತೇಕ ಸಮಸ್ಯೆಗಳು ಮತ್ತು ಮರಣ ಪ್ರಮಾಣ ಗಣನೀಯವಾಗಿ ಇಳಿಮುಖಗೊಂಡಿದೆ. – ಡಾ| ಆರ್. ರತಿದೇವಿ, ಮಂಗಳೂರು