ಒಂದು ಕುಟುಂಬದ ವಂಶವಾಹಿ ಸಂರಚನೆ ಗಳು ಒಂದು ತಲೆಮಾರಿನ ಅಂತರದಲ್ಲಿಯೇ ಕ್ಷಯಿಸಬಲ್ಲವು ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯ ಗಳಿವೆ. ಇದಾಗುವುದು ನಮ್ಮ ವಂಶವಾಹಿಗಳು ದುರ್ಬಲವಾಗುವುದರಿಂದ ಅಲ್ಲ, ನಾವು ದುರ್ಬಲರಾಗುವುದರಿಂದ. ನಮ್ಮ ಸಾಮರ್ಥ್ಯ ಕ್ಷಯಿಸಿದಾಗ ನಮ್ಮ ಮುಂದಿನ ತಲೆಮಾರು ಕೂಡ ದುರ್ಬಲವಾಗಿ ಬೆಳೆಯುತ್ತದೆ.
ಇದು ತಂತ್ರಜ್ಞಾನ, ಯಂತ್ರಗಳ ಯುಗ. ಯಾವುದೇ ಕೆಲಸ ಮಾಡುವುದಕ್ಕೆ ಆಧುನಿಕ ತಂತ್ರಜ್ಞಾನವಿದೆ, ಯಂತ್ರಗಳಿವೆ. ಜೀವನ ಬಹಳ ಸಲೀಸು. ಯಾವುದಕ್ಕೂ ಹೆಚ್ಚು ಕಷ್ಟಪಡಬೇಕಾಗಿಲ್ಲ. ಪೇಟೆಯಿಂದ ಒಂದು ಬಾರಿ ಆಹಾರ ತಂದರೆ ನಾಲ್ಕಾರು ದಿನ ಕೆಡದಂತೆ ಇಡಬಲ್ಲ ಫ್ರಿಜ್ ಇದೆ. ಓಡಾಡುವುದಕ್ಕೆ ವಾಹನಗಳಿವೆ.
ಇನ್ನು ಕೆಲವೇ ವರ್ಷಗಳಲ್ಲಿ ಮಲಗುವ ಕೊಠಡಿಯಿಂದ ಅಡುಗೆ ಮನೆಗೆ ಓಡಿ ಯಾಡಲು ಪುಟ್ಟ ಇಲೆಕ್ಟ್ರಿಕ್ ವಾಹನ ಬರ ಬಹುದು. ಒಂದು ಬಟನ್ ಅದುಮಿದರೆ ಎಲ್ಲ ಕೆಲಸವೂ ಆಗಬಲ್ಲಂಥ ವ್ಯವಸ್ಥೆಯೂ ಬಂದೀತು. ಮುಂದೆ ಬಟನ್ ಒತ್ತುವ ಕಷ್ಟವೂ ದೂರವಾಗಿ ಮಾತಿನ ಆದೇಶವನ್ನು ಅರ್ಥ ಮಾಡಿ ಕೊಳ್ಳುವ ತಂತ್ರಜ್ಞಾನ ಎಲ್ಲ ಕೆಲಸವನ್ನೂ ಮಾಡಿಕೊಡುವ ದಿನವೂ ಬಂದೀತು. ನಮ್ಮ ದೇಹ ಮತ್ತು ಮೆದುಳು ಶ್ರಮ ಪಡಬೇಕಾದ ಆವಶ್ಯಕತೆ ಇನ್ನಷ್ಟು ಕಡಿಮೆಯಾದೀತು.
ಹೀಗಾಗಿಯೇ ನಮ್ಮ ಸಾಮರ್ಥ್ಯ ಒಂದು ತಲೆಮಾರಿನ ಅಂತರದಲ್ಲಿಯೇ ಬಹಳಷ್ಟು ಪ್ರಮಾಣದಲ್ಲಿ ಕುಸಿಯುತ್ತದೆ ಎಂದು ಹೇಳಿದ್ದು. ಇದು ಈಗಾಗಲೇ ಬಹಳ ವೇಗವಾಗಿ ಆಗುತ್ತಿದೆ. ನಮ್ಮ ಬಾಲ್ಯಕಾಲದಲ್ಲಿ ಒಂಟಿ ಮರದ ಪುಟ್ಟ ಸೇತುವೆ ದಾಟುವುದು, ದನವನ್ನು ಮೇಯಲು ಕರೆದೊಯ್ಯುವುದು ನಮಗೆ ಬಹಳ ಸಲೀಸಾದ ಕೆಲಸವಾಗಿತ್ತು. ಆಟದಂತೆ ನಡೆದುಬಿಡುತ್ತಿತ್ತು. ಇವತ್ತಿನ ಮಕ್ಕಳಲ್ಲಿ ಈ ಕೆಲಸ ಹೇಳಿನೋಡಿ; ಎಷ್ಟು ಕಷ್ಟ ಪಡುತ್ತಾರೆ, ಹೆದರುತ್ತಾರೆ. ಒಂಟಿ ಮರದ ಸಂಕ ದಾಟುವುದು ಒಂದು ಭಾರೀ ಸರ್ಕಸ್‌ನಂತೆ ಕಾಣುತ್ತದೆ ಅವರಿಗೆ!
ಈಗಿನ ಕಾಲದವರು ಜಿಮ್‌ಗೆ ಹೋಗು ತ್ತಾರೆ, ದೈಹಿಕವಾಗಿ ಫಿಟ್ ಆಗಿರುತ್ತಾರೆ. ಆದರೆ ರಸ್ತೆಯಲ್ಲಿ ನಡೆಯುತ್ತಿರುವಾಗ ಹುಲಿ ಎದುರಾಯಿತು ಎಂದಾದರೆ ಎಷ್ಟು ಮಂದಿಗೆ ಮರವೇರಿ ಸ್ವರಕ್ಷಣೆ ಮಾಡಿಕೊಳ್ಳುವುದು ಗೊತ್ತಿದೆ? ಬೀದಿನಾಯಿ ಕೆಕ್ಕರಿಸಿ ನೋಡಿ ಗುರ್ ಎಂದರೆ ಏನು ಮಾಡಬೇಕು ಎಂಬುದು ಎಷ್ಟು ಮಕ್ಕಳಿಗೆ ಗೊತ್ತಿದೆ?
ಈ ಕಾಲದ ನಾವು-ನೀವು ದೈಹಿಕವಾಗಿ ಗಟ್ಟಿಮುಟ್ಟಾಗಿ ಕಂಡರೂ ಮೂಲಭೂತವಾಗಿ ಬಲಶಾಲಿಗಳಾಗಿ ಉಳಿದಿಲ್ಲ. ಜೀವಿಸಲು ಶ್ರಮಿಸುವ ಮೂಲಸ್ರೋತವೇ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ತಂತ್ರಜ್ಞಾನವು ನಮ್ಮ ದೇಹ ಮತ್ತು ಮೆದುಳಿನ ಉಪಯೋಗ ವನ್ನು ಕಡಿಮೆ ಮಾಡುತ್ತ ಹೋದಂತೆ ಈ ಸಾಮರ್ಥ್ಯ ಕುಸಿತ ವೇಗ ವಾಗಿ ಆಗುತ್ತಿದೆ. ಇದು ಆಂತರಿಕವಾಗಿ ಸಂಭವಿಸು ತ್ತಿರುವ ಕ್ಷಯ, ಕುಸಿತ. ನಮ್ಮ ಅಸ್ತಿತ್ವಕ್ಕೆ ಸಂಬಂಧಿಸಿದ ಗಂಭೀರ ಪ್ರಶ್ನೆ ಇದು.
ಇದನ್ನು ತಡೆಯ ಬೇಕಾದರೆ, ನಮ್ಮ ಮುಂದಿನ ಪೀಳಿಗೆ ಇನ್ನಷ್ಟು ದುರ್ಬಲ ವಾಗದಿರಬೇಕಾದರೆ ನಾವು ಮಣ್ಣಿನ ಗಾಢ ಸಂಪರ್ಕವನ್ನು ಹೊಂದಿ ಬದುಕಬೇಕು. “ಕೈ ಕೆಸರಾದರೆ ಬಾಯಿ ಮೊಸರು’ ಎಂಬುದು ಬರೇ ನಾಣ್ನುಡಿಯಲ್ಲ, ಹೇಗೆ ಬದುಕಿದರೆ ಮನುಷ್ಯ ಸಮರ್ಥನಾಗಿರುತ್ತಾನೆ ಎನ್ನುವು ದನ್ನು ಹೇಳುವ ಅಮೃತವಾಕ್ಯ. ಮಣ್ಣಿನಲ್ಲಿ ದೈಹಿಕ ಶ್ರಮ ವಹಿಸಿ ಕೆಲಸ ಮಾಡುವುದು ಕೂಡ ಒಂದು ಅಧ್ಯಾತ್ಮಿಕ ಪ್ರಕ್ರಿಯೆ. ಪಂಚ ಭೂತಗಳಿಗೆ ಒಡ್ಡಿಕೊಳ್ಳುವ ಜೀವನ ನಮ್ಮದಾಗಬೇಕು. ಪಂಚಭೂತಗಳ ಜತೆಗೆ ದಿನವೂ ನಮ್ಮ ದೇಹ ನಿಕಟ ಸಂಪರ್ಕಕ್ಕೆ ಬಂದರೆ ಮಾತ್ರ ಜೀವ-ಜೀವನ ಸುದೃಢವಾಗಿ ಇರಬಲ್ಲುದು. ನಮಗಾಗಿ, ನಮ್ಮ ಮುಂದಿನ ತಲೆಮಾರಿಗಾಗಿ ನಾವು ಸಮರ್ಥವಾಗಿ ಬದುಕಬೇಕು.