Advertisement

UV Fusion: ಗಾಳಿಪಟ ಹೇಳಿದ  ಬದುಕಿನ ಪಾಠ

03:07 PM Feb 15, 2024 | Team Udayavani |

“ಎಷ್ಟೇ ಮೇಲ್ಹೋದರು ಚಿಕ್ಕವನಾಗೆ ಇರು ಅನ್ನೋ ನೀತಿ ಪಾಠ ಪಟ ಹೇಳ್ತು ಗುರು ಇದ ಮರೆತೋರು ಗೋತ ಆದ್ರೂ…!’ ಆಹಾ ಎಂಥಹ ಅರ್ಥಬದ್ಧವಾದ ಹಾಡಿನ ಸಾಲುಗಳು.

Advertisement

ಸಣ್ಣವರಿದ್ದಾಗ ಕಾಗದದಿಂದ ಗಾಳಿಪಟ ಮಾಡಿ ಆಕಾಶದ ತುಂಬಾ ಹಾರಲು ಬಿಡುತ್ತಿದ್ದೆವು. ಗಾಳಿಪಟ ಮೇಲೆ ಹೋದಂತೆಲ್ಲ ನಮ್ಮ ಉತ್ಸಾಹವು ಹೆಚ್ಚಾಗುತ್ತಿತ್ತು. ಚಿಕ್ಕ ವಯಸಿನಲ್ಲಿ ಗಾಳಿಪಟವನ್ನು ನಭದಲ್ಲಿ ಹಾರಿಸುತ್ತ ಚಪ್ಪಾಳೆ ತಟ್ಟಿ ಹರ್ಷಿಸುವುದೇ ಒಂದು ಖುಷಿ. ಅಂದು ಗಾಳಿಪಟವನ್ನು ಬರೀ ಒಂದು ಆಟದ ವಸ್ತುವಾಗಿ ಭ್ರಮಿಸಿದ್ದೆ.

ಆದರೆ ಆ ಗಾಳಿಪಟದಲ್ಲಿ ಜೀವನಕ್ಕೆ ಬೇಕಾದ ಮೌಲ್ಯಗಳು ಕೂಡ ಇದೇ ಎಂಬುದು ನನಗೆ ಅರಿವಾಗಿದ್ದು ಈಗಲೇ. ವಿಚಲಿತನಾಗಿ ದಾರ ನಿಯಂತ್ರಿಸುವವನ ನಿಯಂತ್ರಣ ಕೈ ತಪ್ಪಿ ಹೋದರೆ ಗಾಳಿಪಟವು ತನ್ನ ಆಟವನ್ನು ನಿಲ್ಲಿಸಿ ಬಿಡುತ್ತದೆ.

ಮನಸನ್ನು ಎಲ್ಲೂ ವಿಚಲಿತಗೊಳಿಸದೆ ಒಂದೇ ಕಡೆಯಲ್ಲಿ ಕೇಂದ್ರೀಕರಿಸಿದಾಗ ಮಾತ್ರಾ ಗಾಳಿಪಟ ಗಾಳಿಯ ಸಹಾಯದಿಂದ ಆಕಾಶದ ತುಂಬೆಲ್ಲ ಹಾರಲು ಸಾಧ್ಯ. ಕೆಲವೊಂದು ಬಾರಿ ಗಾಳಿಯ ಆರ್ಭಟದಿಂದ ಪಟ ಕೆಳಗಡೆ ಬೀಳುವ ಸಾಧ್ಯತೆಯೂ ಇರುತ್ತದೆ.

ಅಂತೆಯೇ ಜೀವನ ಕೂಡ. ಗಾಳಿಪಟದಂತೆಯೇ ಏಳು ಬೀಳು ಎಲ್ಲವೂ ಜೀವನದಲ್ಲಿ ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಮನಸ್ಥೈರ್ಯವನ್ನು ಕಳೆದುಕೊಂಡರೆ ಮತ್ತೇ ನಾವು ಜೀವನದಲ್ಲಿ ಎದ್ದು ನಿಲ್ಲಲು ಬಹಳ ಸಮಯ ಬೇಕಾಗುತ್ತದೆ. ದಾರವೇ ಗಾಳಿಪಟದ ಅಸ್ತಿತ್ವ. ಆ ದಾರವನ್ನು ನಿಯಂತ್ರಿಸುವವನೇ ಅದರ ಸೂತ್ರಧಾರ. ಸೂತ್ರಧಾರ ಏನಾದರೂ

Advertisement

ಒಂದು ವೇಳೆ ಧಾರವನ್ನು ಕೈ ಬಿಟ್ಟರೆ ಗಾಳಿಪಟದ ಕಥೆ ಅಲ್ಲಿಗೆ ಅಂತ್ಯಗೊಂಡಂತೆ. ಜೀವನವು ಹಾಗೆ. ಇಲ್ಲಿ ಸೂತ್ರಧಾರ ಆ ಪರಮಾತ್ಮನಾದರೆ ನಾವು ಗಾಳಿಪಟ. ನಮ್ಮ ಅಸ್ತಿತ್ವವೇ ಗಾಳಿಪಟದ ದಾರ. ಪರಮಾತ್ಮ ಆಯಾಸಗೊಂಡು ದಾರವನ್ನ ಕೈ ಬಿಟ್ಟು ಬಿಟ್ಟರೆ ಅಲ್ಲಿಗೆ ನಮ್ಮ ಜೀವನದ ಆಟವು ನಿಂತಂತೆ.

ಇದ್ದರೆ ಗಾಳಿಪಟದ ಹಾಗೆ ಇರಬೇಕು. ಯಾಕೆಂದರೆ ಗಾಳಿಪಟ ಅದೆಷ್ಟೇ ಮೇಲೆ ಹಾರಿದರು ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ಹಿಡಿದಿರುವ ಸೂತ್ರಧಾರನನ್ನು ಎಂದಿಗೂ ಮರೆಯುವುದಿಲ್ಲ. ಅಂತೆಯೇ ನಾವು ಕೂಡ ನಮ್ಮ ಜೀವನದಲ್ಲಿ ಎಷ್ಟೇ ಮೇಲೆ ಹೋದರು ನಡೆದು ಬಂದ ಹಾದಿಯನ್ನು ಎಂದಿಗೂ ಮರೆಯಬಾರದು. ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು ಎಂದಿಗೂ ಜೀವನದಲ್ಲಿ ಎಡವಲಾರರು ಎಂಬುದು ನನ್ನ ಅನಿಸಿಕೆ.

ಹಾಗೆ ನೋಡುವುದಾದರೆ ಗಾಳಿಪಟದಿಂದ ನಾವು ಕಲಿಯಬೇಕಾದ ಅಳವಡಿಸಿಕೊಳ್ಳಬೇಕಾದ ಅಂಶಗಳು ಬಹಳಷ್ಟಿವೆ. ಬರೀ ಗಾಳಿಪಟದಿಂದ ಮಾತ್ರಾ ಅಲ್ಲ. ನಾವು ನೋಡುವ ಪ್ರತಿಯೊಂದು ವಸ್ತುವಿನಲ್ಲೂ ಒಂದಲ್ಲ ಒಂದು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳಿವೆ. ಈ ಭೂಮಿಯಲ್ಲಿ ಯಾವ ವಸ್ತು ಕೂಡ ನಿಷ್ಪ್ರಯೋಜಕವಲ್ಲ. ಪ್ರತಿಯೊಂದು ವಸ್ತು ಕೂಡ ಪ್ರಾಮುಖ್ಯತೆಯನ್ನು ಹೊಂದಿದೆ. ಅದನ್ನು ನೋಡಿ ಗುರುತಿಸುವ ಮನಸು ನಮಗಿರಬೇಕು ಅಷ್ಟೇ.

-ಸುಶ್ಮಿತಾ ಕೆ .ಎನ್‌. ಅನಂತಾಡಿ

ಬಂಟ್ವಾಳ

 

Advertisement

Udayavani is now on Telegram. Click here to join our channel and stay updated with the latest news.

Next