Advertisement

ವಂಚಿಸಿದ ನಿನಗೂ ಒಂದು ಬದುಕಿದೆ..  

03:45 AM Feb 21, 2017 | |

ವಿಶಾಲ ಪ್ರಪಂಚದಲ್ಲಿ ಹಾಯಾಗಿದ್ದೆ ನಾನು… ನೀನು ಬರುವ ಮುನ್ನ ನನ್ನ ಸೇರುವ ಮುನ್ನ, ಹಕ್ಕಿಯಂತೆ ಹಾರುತ್ತಿದ್ದೆ, ಕೋಗಿಲೆಯಂತೆ ಹಾಡುತ್ತಿದ್ದೆ, ನವಿಲಿನಂತೆ ನರ್ತಿಸುತ್ತಿದ್ದೆ, ಬೆಳದಿಂಗಳ ಸ್ಪರ್ಶಕ್ಕೆ ಹೆಜ್ಜೆ ಹಾಕುತ್ತಿದ್ದೆ, ಮಳೆಯಲ್ಲಿ ನೆನೆಯುತ್ತಿದ್ದೆ, ಪ್ರಪಂಚದ ಖುಷಿಯೆಲ್ಲಾ ನಂದೆಂದು ಬೀಗುತ್ತಿದ್ದೆ. ಯಾವತ್ತೂ ನಾ ನಿನ್ನ ಬಯಸಿರಲಿಲ್ಲ… ಕನಸಲ್ಲೂ ನೆನಸಿರಲಿಲ್ಲ.. ಡಿಗ್ರಿ ಮುಗಿಸಿದರೂ ಯಾರನ್ನೂ ಕಣ್ಣೆತ್ತಿ ನೋಡದ, ಹತ್ತಿರ ಹೋಗಿ ಮಾತನಾಡಿಸದವಳು ನಾನು.  

Advertisement

ಆದರೆ ಪ್ರೇಮದೂರಿನಲ್ಲಿ ನನ್ನರಸಿ ಬಂದ ನೀನು, ಒಲವಿನ ಸಿರಿಯಿಂದಲೇ ಎನ್ನ ಹೃದಯದರಮನೆಯನ್ನು ಸಿಂಗರಿಸಿದ ಆ ದಿನ, ನಿನ್ನ ವಕ್ರ ನೋಟಕ್ಕೆ ಸಿಲುಕಿದ ಆ ಕ್ಷಣ, ನೀನು ಬಂದು ನನ್ನ ಆಕ್ರಮಿಸಿದ ಆ ದಿನ, ಪ್ರೀತಿ ತುಂಬಿದ ನಿನ್ನ ಮಾತುಗಳಿಗೆ ನನ್ನ ಮುದ್ದಾದ ನಗು ಉತ್ತರವಾಗಿತ್ತು. ಆದರೆ ಈಗ ನಿನ್ನ ಕೊಂಕು ನುಡಿಗಳಿಗೆ ಮೌನವೇ ಪ್ರತ್ಯುತ್ತರವಾಗಿದೆ… ನಿದ್ದೆ ಬಾರದ ಪ್ರತಿ ರಾತ್ರಿಯಲ್ಲಿ ಮನದೊಳಗೆ ಸತ್ತಿರುವ ನಿನ್ನದೇ ನೆನಪುಗಳನ್ನು ಮೆಲುಕು ಹಾಕುತ್ತಾ ಕಣ್ಣು ಮುಚ್ಚಿ ಕುಳಿತಾಗ ನಿನ್ನದೇ ನೆನಪುಗಳು. ತಪ್ಪಿ ಬಂದ ನಿದ್ದೆಯಲ್ಲೂ ಮುಚ್ಚಿದ ಕಣಳೊಳಗೆ ಕಂಡದ್ದು ನಿನ್ನದೇ ಕನಸುಗಳು!

ಅವತ್ಯಾಕೋ ಸೂರ್ಯ ಹುಟ್ಟಲೇ ಇಲ್ಲ, ಚಂದ್ರನು ಬೆಳಗಲೇ ಇಲ್ಲ, ಹಕ್ಕಿಗಳು ಹಾಡದೇ, ಚಿಲಿ ಪಿಲಿ ಸದ್ದು ಕೇಳಲಿಲ್ಲ, ಚುಕ್ಕಿಗಳು ಮೂಡದೇ, ಕೋಳಿ ಕೂಗದೇ, ಪ್ರಪಂಚದಲ್ಲಿ ಕತ್ತಲು ತುಂಬಿ ಹೋಗಿತ್ತು. ಇಂಥ ಸೂತಕದ ವಾತಾವರಣ ಕಂಡು ಪ್ರಪಂಚದ ಗತಿಯೇನೆಂದು ಹೊರ ಬಂದು ನೋಡಿದಾಗ ಎಲ್ಲವೂ ಪ್ರತಿನಿತ್ಯದಂತೆ ಮಾಮೂಲಿಯಾಗಿತ್ತು. ತಪ್ಪಿಬಂದ ನಿದ್ದೆಯಲಿ ಕತ್ತಲ ಕೋಣೆಯಲ್ಲಿ ಕುಳಿತುಕೊಂಡು ನಾನೇ ಸೃಷ್ಟಿಸಿಕೊಂಡ ನರಕ ಅದಾಗಿತ್ತು.  

ಒಂದು ಕ್ಷಣ ನಾನೇಕೆ ಹೀಗಾದೆ? ಎಂದುಕೊಳ್ಳುವಷ್ಟರಲ್ಲಿ ಕಣ್ಣು ತುಂಬಿಕೊಂಡವು. ಹೇಗೆ ಮರೆಯಲಿ ನಿನ್ನ..? ನನ್ನ ಹೃದಯವೇ ನೀನಾಗಿರುವಾಗ..? ಅನಾಗರಿಕ ಮಗುವಿನಂತಿದ್ದ ಮನಸ್ಸಿಗೆ ಪ್ರೀತಿಯನ್ನು ಧಾರೆಯೆರೆದವನು ನೀನು..? ಪ್ರೀತಿಯ ಪುಟಗಳನ್ನು ನನ್ನ ಬಾಳಿನಲ್ಲಿ ತೆರೆದವನು ನೀನು..? ಆದರೆ ಇಂದು ಈ ಮುಗª ಮನಸ್ಸಿಗೆ ಮೋಸ ಮಾಡಿ ನನ್ನ ವಂಚಿಸಿದವನೂ ನೀನೇ?

ನೆನಪಿರಲಿ: ವಂಚಿಸಿದ ನಿನಗೂ ಒಂದು ಬದುಕಿದೆ. ಆ ಬದುಕು ತಣ್ಣಗಿರಲಿ… ಯಾವ ನೋವು ನಿನ್ನ ಕಾಡದಿರಲಿ…         

Advertisement

ಇಂತಿ ನಿನ್ನ             
ಮುದ್ದಾದ ನಗುವಿನ ಮುಗ್ಧ ಮನದಾಸೆ…

– ಲಲಿತಾ ಎಮ್‌ ಎಮ್‌
ಪತ್ರಿಕೋದ್ಯಮ ವಿಭಾಗ ಕವಿವಿ ಧಾರವಾಡ  

Advertisement

Udayavani is now on Telegram. Click here to join our channel and stay updated with the latest news.

Next