Advertisement

ಚಿನ್ನದ ಮೀನು ಕಲಿಸಿದ ಪಾಠ!

03:59 PM Mar 29, 2018 | |

ಒಂದೂರಿನಲ್ಲಿ ಇಬ್ಬರು ಬಡ ದಂಪತಿಗಳು ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಗಂಡನು ನಿತ್ಯವೂ ಬೆಳಿಗ್ಗೆ ಎದ್ದೊಡನೆ ನದಿಗೆ ಹೋಗಿ ಮೀನು ಹಿಡಿದುಕೊಂಡು ಪೇಟೆಗೆ ಬಂದು ಮಾರಿ ನಿತ್ಯ ಜೀವನಕ್ಕೆ ಸಾಕಾಗುವಷ್ಟು ಹಣ ತರುತ್ತಿದ್ದನು. ಮೀನುಗಾರಿಕೆಯಿಂದ ಬಂದ ಹಣದಿಂದ ಇಬ್ಬರೂ ಸುಖ ಜೀವನ ನಡೆಸುತ್ತಿದ್ದರು. 

Advertisement

ಒಂದು ದಿನ ಮೀನುಗಾರ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದಾಗ ಇದ್ದಕ್ಕಿದ್ದಂತೆ ಬಂಗಾರದ ಬಣ್ಣದ, ಅಪರೂಪದ ಮೀನೊಂದು ಬಲೆಗೆ ಸಿಲುಕಿಕೊಂಡಿತು. ಅದನ್ನು ಕಂಡ ಮೀನುಗಾರನಿಗೆ ಆಶ್ಚರ್ಯ ಉಂಟಾಯಿತು. ಕುತೂಹಲದಿಂದ ಅದನ್ನು ಕೈಗೆತ್ತಿಕೊಂಡು ನೋಡುತ್ತಿದ್ದಾಗ ಆ ಮೀನು ಮಾತನಾಡತೊಡಗಿತು.

“ಎಲೈ ಮೀನುಗಾರನೇ, ನಾನಾರೆಂದು ತಿಳಿದಿರುವೆ? ನಾನು ಮೀನುಗಳ ದೇವತೆ. ನಿನಗೇನು ವರ ಬೇಕೋ ಕೇಳಿಕೋ ಕೊಡುತ್ತೇನೆ. ನನ್ನನ್ನು ಬಿಟ್ಟುಬಿಡು’ ಎಂದಿತು. ಮೀನುಗಾರನು ಆ ಮೀನನ್ನು ಬಿಟ್ಟು ಬರಿಗೈಯಲ್ಲಿ ಮನೆಗೆ ಬಂದನು. ಅಂದು ನಡೆದ ಘಟನೆಯನ್ನು ಹೆಂಡತಿಯ ಮುಂದೆ ಹೇಳಿದನು. ಹೆಂಡತಿಗೆ ಆಸೆ ಹುಟ್ಟಿಕೊಂಡಿತು.

ಆಕೆ “ನಾಳೆ ನದಿಗೆ ಹೋಗಿ ಆ ದೇವತೆ ಮೀನನ್ನು ಕಂಡು ನಮಗೊಂದು ಚೆಂದದ ಮಾಳಿಗೆಯ ಮನೆ ಬೇಕೆಂದು ಕೇಳಿಕೊಂಡು ಬನ್ನಿ’ ಎಂದು ಹೇಳಿದಳು. ಮೀನುಗಾರ ಆಸೆಗೆ ದೇವತೆ ಮೀನು ತಥಾಸ್ತು ಎಂದಿತು. ಮೀನುಗಾರ ಮನೆಗೆ ಬರುವಷ್ಟರಲ್ಲಿ ಗುಡಿಸಲು ಮಾಯವಾಗಿ ಬಂಗಲೆಯೊಂದು ಸಿದ್ಧವಾಗಿತ್ತು.

ಆದರೆ ಹೆಂಡತಿಯ ಆಸೆ ಮುಗಿಯುವಂತೆ ತೋರಲಿಲ್ಲ. ಆಕೆ “ರೀ, ಬರೀ ಈ ಮನೆ ಇದ್ದರೆ ಸಾಲದು. ತಿಜೋರಿ ತುಂಬಾ ಹಣ, ಮೈ ತುಂಬಾ ಒಡವೆಗಳು ಬೇಡವೇ?’ ಎಂದಳು. ದೇವತೆ ಮೀನು ಅದಕ್ಕೂ ತಥಾಸ್ತು ಎಂದಿತು. ಮೀನುಗಾರನ ಹೆಂಡತಿಯ ಆನಂದಕ್ಕೆ ಪಾರವೇ ಇರಲಿಲ್ಲ.

Advertisement

ಮಾರನೇ ದಿನ ಮತ್ತೆ ಅವಳು “ನಮಗೆ ಮನೆಗೆಲಸಕ್ಕೆ ಕೈಗೊಬ್ಬರು ಕಾಲಿಗೊಬ್ಬರು ಆಳುಗಳು ಬೇಕೆಂದು ಕೇಳು’ ಎಂದಳು. ಮಾರನೇ ದಿನ ಮೀನುಗಾರ ನದಿ ಬಲಿ ಹೋದಾಗ ದೇವತೆ ಮೀನು “ಇದೇ ಕೊನೆ. ಇನ್ನು ನಾನು ನಿನಗೆ ಕಾಣಿಸಿಕೊಳ್ಳುವುದಿಲ್ಲ. ತಥಾಸ್ತು’ ಎಂದು ಮಾಯವಾಯಿತು. 

ಇತ್ತ ಮೀನುಗಾರ ಮನೆಗೆ ಬರುವಷ್ಟರಲ್ಲಿ ಆಳುಕಾಳುಗಳೆಲ್ಲಾ ಕೆಲಸ ಮಾಡುತ್ತಿದ್ದರು. ಅವನ ಹೆಂಡತಿ ಹಾಸಿಗೆ ಮೇಲೆ ರಾಣಿಯಂತೆ ಮಲಗಿ ಪರಿಚಾರಕಿಯಿಂದ ಪಾದಸೇವೆ ಮಾಡಿಸಿಕೊಳ್ಳುತ್ತಿದ್ದಳು. ಇನ್ನು ನಾವು ರಾಜರಂತೆ ಬದುಕಬಹುದು ಎಂದು ಆಕೆ ಸಂತಸದಿಂದಿದ್ದಳು.

ದೇವತೆ ಮೀನು ಇನ್ನು ಮುಂದೆ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ ಎಂಬುದನ್ನು ತಿಳಿದು ಕೊಂಚ ಬೇಜಾರಾದರೂ ಬೇಕಾದ್ದೆಲ್ಲವೂ ಇದೆಯಲ್ಲ ಎಂದು ಸಮಾಧಾನಪಟ್ಟುಕೊಂಡಳು.  ಅವರ ದರ್ಬಾರು ಜೋರಾಗಿ ನಡೆಯುತ್ತಿತ್ತು. ಎಷ್ಟು ಜೋರಂದರೆ ಇಡೀ ಊರಿನವರ ಕಣ್ಣೆಲ್ಲಾ ಅವರ ಮೇಲೆಯೇ ಬೀಳುವಷ್ಟು.

ಅಡ್ಡದಾರಿಯಿಂದ ಗಳಿಸಿದ ಸಂಪತ್ತನ್ನು ಕಂಡು ಎಲ್ಲರೂ ಅಸೂಯೆ ಪಟ್ಟರು. ಅದರ ಮೇಲೆ ಮೀನುಗಾರನ ಹೆಂಡತಿಯ ಅಹಂಕಾರ ಕಂಡು ಕೋಪವೂ ಇತ್ತು. ಊರಿನವರ ಕಣ್ಣು ಬೀಳುವುದು ಹಾಗಿರಲಿ ಮೀನುಗಾರನ ಮನೆಯಲ್ಲಿದ್ದ ಆಳುಗಳಿಗೇ ಸಾಕೋ ಸಾಕಾಯಿತು.

ಅವರೆಲ್ಲರೂ ಮೀನುಗಾರನ ಹೆಂಡತಿಯ ದಬ್ಟಾಳಿಕೆಗೆ ಸೋತು ಸುಣ್ಣವಾಗಿ ಒಂದು ಉಪಾಯ ಹೂಡಿದರು. ಎಲ್ಲರೂ ಒಗ್ಗಟ್ಟಾಗಿ ರಾತ್ರೋರಾತ್ರಿ ಮನೆಯಲ್ಲಿದ್ದ ಸಂಪತ್ತನ್ನು ದೋಚಿಕೊಂಡು ಪರಾರಿಯಾದರು. ಮರುದಿನ ಗ್ರಾಮದ ಮುಖ್ಯಸ್ಥ ಮೀನುಗಾರ ಮಾಡಿದ್ದ ಹಳೆ ಸಾಲಕ್ಕೆ ಪ್ರತಿಯಾಗಿ ಬಂಗಲೆಯನ್ನು ವಶಪಡಿಸಿಕೊಂಡ.

ಮೀನುಗಾರ ಮತ್ತವನ ಹೆಂಡತಿ ಕುಟುಂಬ ಮತ್ತೆ ಗುಡಿಸಲಿಗೆ ಬಂದರು. ಆಕೆಗೆ ಪಶ್ಚಾತ್ತಾಪವಾಗಿತ್ತು. ಇವಾಗಲಾದರೂ ಬುದ್ಧಿ ಬಂತಲ್ಲ ಎಂದು ಮೀನುಗಾರನಿಗೂ ಸಂತೋಷವಾಯಿತು. ಬಡತನ ಇದ್ದರೂ ಇಬ್ಬರೂ ಒಬ್ಬರಿಗೊಬ್ಬರು ನೆರವಾಗುತ್ತಾ ಸುಖವಾಗಿದ್ದರು.

* ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next