ವಾಡಿ: ಶಾಲೆಯ ತರಗತಿ ಕೋಣೆಯಿಂದ ಗ್ರಂಥಾ ಲಯದತ್ತ ಹೆಜ್ಜೆ ಹಾಕಿದ ಗ್ರಾಮೀಣ ಭಾಗದ ಮಕ್ಕಳಿಗೆ ಅಜ್ಜಿ ಹೇಳಿದ ನೀತಿ ಕಥೆಗಳನ್ನು ಆಲಿಸುವ ಅವಕಾಶ ದೊರಕಿತು.
ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳನ್ನು ಶಿಕ್ಷಕರ ಸಹಾಯದಿಂದ ಗ್ರಂಥಾಲಯಕ್ಕೆ ಬರ ಮಾಡಿಕೊಂಡ ಗ್ರಂಥಪಾಲಕ, ಮಕ್ಕಳ ಕೈಗೆ ಪುಸ್ತಕ ಕೊಟ್ಟು ಗಟ್ಟಿ ಪಾಠಕ್ಕೆ ಮುಂದಾದರು. ಮಕ್ಕಳ ಗಟ್ಟಿ ಓದಿಗೆ ಗ್ರಂಥಾಲಯ ಕೋಣೆ ಪಾಠದ ಶಾಲೆಯಾಗಿ ಪರಿವರ್ತನೆಯಾಯಿತು.
ಅಂತಾರಾಷ್ಟ್ರೀಯ ಸಾಕ್ಷರ ದಿನಾಚರಣೆ ನಿಮಿತ್ತ ಜಿಲ್ಲಾ ಗ್ರಂಥಾಲಯ ಇಲಾಖೆ ಹಾಗೂ ತಾಪಂ ಸಹಯೋಗದೊಂದಿಗೆ ನಡೆಯುತ್ತಿರುವ “ಒಂದು ದಿನ ಒಂದು ಕಥೆ’ ಅಭಿಯಾನ ಹಳಕರ್ಟಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆಯಿತು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ಮಕ್ಕಳಿಗೆ ನೀತಿ ಕಥೆಗಳನ್ನು ಬೋಧಿಸಿದ ಗ್ರಂಥಪಾಲಕ ಪ್ರಕಾಶ ಚಂದನಕೇರಿ, ಕಾಡು, ಕಾಡು ಪ್ರಾಣಿಗಳು, ಪಕ್ಷಿ, ವನ, ನದಿಗಳ ವಿವರಣೆ ನೀಡಿದರು. ಕಾಗೆ, ಹುಲಿ, ನರಿ, ಕೋತಿಯ ಕಥೆಗಳನ್ನು ಹೇಳುತ್ತಾ ಮಕ್ಕಳ ಗಮನ ಸೆಳೆದರು. ಕಥೆಯನ್ನು ಹೇಳಿ ಮುಗಿಸಿದ ಬಳಿಕ ಸಣ್ಣ ಸಣ್ಣ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿ ಉತ್ತರ ಪಡೆದುಕೊಳ್ಳುವ ಪ್ರಯತ್ನ ಮಾಡಿದರು. ಕಥೆಗಳನ್ನು ತದೇಕಚಿತ್ತದಿಂದ ಆಲಿಸಿದ ಮಕ್ಕಳು ಥಟ್ ಅಂತ ಉತ್ತರ ಕೊಟ್ಟು ಜಾಣ್ಮೆ ಮೆರೆದರು.
ಮೊಬೈಲ್‌ಗಳನ್ನು ಮಕ್ಕಳ ಕೈಗೆ ಕೊಟ್ಟು ಗುಂಪು ವೀಕ್ಷಣೆಗೆ ಅವಕಾಶ ನೀಡಿದರು. ಮೊಬೈಯಿಲ್ ನಲ್ಲಿ ಪ್ರದರ್ಶನಗೊಂಡ ಸಣ್ಣ ಕಥೆಗಳನ್ನು ಮಕ್ಕಳು ಅರ್ಥಮಾಡಿಕೊಂಡರು. ಕಂಪ್ಯೂಟರ್ ಪರದೆಯಲ್ಲಿ ಪುಣ್ಯಕೋಟಿ ಕಥೆಯನ್ನು ವೀಕ್ಷಿಸಿ ಪ್ರಾಮಾಣಿಕತೆ, ಬದ್ಧತೆ, ಕರ್ತವ್ಯ, ಸತ್ಯ ಹೇಳುವುದು, ನುಡಿದಂತೆ ನಡೆದುಕೊಳ್ಳುವ ಮಾನವೀಯ ಮೌಲ್ಯಗಳನ್ನು ಮಕ್ಕಳು ಅರಿತುಕೊಂಡರು. ನಂತರ ಕಂಪ್ಯೂಟರ್ ಸಹಾಯದಿಂದ ಹಲವು ಆಟ ಆಡಿಸಲಾಯಿತು. ಹಳಕರ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರುದ್ರು ಸಾಹು ಅಳ್ಳೊಳ್ಳಿ, ಶಿಕ್ಷಕಿ ಎನ್.ಮಂಜುಳಾ, ಕಾಶೀನಾಥ ಶೆಟಗಾರ ಪಾಲ್ಗೊಂಡಿದ್ದರು.