Advertisement

ಪರಿಶಿಷ್ಟರ ಹಿತ ಕಾಪಾಡದಿದ್ದರೆ ತಕ್ಕ ಪಾಠ

12:02 PM Dec 03, 2018 | Team Udayavani |

ಬೆಂಗಳೂರು: ಬಡ್ತಿ ಮೀಸಲಾತಿ, ಶಿಕ್ಷಣ ಹಾಗೂ ಉದ್ಯೋಗದಲ್ಲಿನ ಮೀಸಲಾತಿ ಪ್ರಮಾಣ ಹೆಚ್ಚಳ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಯವರು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳದಿದ್ದರೆ ಆಡಳಿತ ಪಕ್ಷಗಳಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Advertisement

ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, “ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ’ ಪ್ರವೃತ್ತಿ ಬಿಟ್ಟು, ಸಮುದಾಯದ ಹಿತ ಕಾಪಾಡುವ ಪಕ್ಷಕ್ಕೆ ಜೈಕಾರ ಹಾಕುವುದನ್ನು ವಾಲ್ಮೀಕಿ ಸಮುದಾಯ ಕಲಿಯಬೇಕು ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಆಡಳಿತ ಪಕ್ಷಗಳಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ತಕ್ಕ ಪಾಠ ಕಲಿಸಲಿದೆ. ಇದು ಕುಮಾರಸ್ವಾಮಿಯವರಿಗೆ ನನ್ನ ನೇರ ಎಚ್ಚರಿಕೆ ಎಂದು ಹೇಳಿದರು.

ಪರಿಶಿಷ್ಟ ಜನಾಂಗಗಳಿಗೆ ಸಂವಿಧಾನಬದ್ಧವಾಗಿ ಸಿಗಬೇಕಿರುವ ಹಕ್ಕುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡಲೇಬೇಕು. ಇದಕ್ಕಾಗಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯದ ಜನಪ್ರತಿನಿಧಿಗಳು ಒಟ್ಟಾಗಬೇಕು. ಸಂವಿಧಾನದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಾಜಕೀಯ ಮೀಸಲಾತಿ ಕಲ್ಪಿಸಿರುವುದು ಚುನಾವಣೆಯಲ್ಲಿ ಗೆದ್ದು, ಹಣ ಸಂಪಾದಿಸಿ ಶೋಕಿ ಮಾಡಲು ಅಲ್ಲ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡದ 51 ಶಾಸಕರು, ಏಳು ಸಂಸದರಿದ್ದಾರೆ. ಇವರೆಲ್ಲರೂ ಒಗ್ಗಟ್ಟಾದರೆ ಹಕ್ಕುಗಳನ್ನು ಪಡೆಯುವುದು ಕಷ್ಟವಲ್ಲ. ಒಂದು ವೇಳೆ ಸರ್ಕಾರಗಳು ಸ್ಪಂದಿಸದಿದ್ದರೆ ಯಾರೇ ಮುಖ್ಯಮಂತ್ರಿಯಾಗಿರಲಿ, ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅದನ್ನು ಮುಲಾಜಿಲ್ಲದೆ ಕಿತ್ತೂಗೆಯಬೇಕು ಎಂದು ಸ್ವಾಮೀಜಿ ಕರೆ ನೀಡಿದರು. 

Advertisement

ಬಿಜೆಪಿ ಶಾಸಕರಿಗೆ ಏನಾಗಿದೆ: ಸಮ್ಮಿಶ್ರ ಸರ್ಕಾರ ಇರುವುದರಿಂದ ಕಾಂಗ್ರೆಸ್‌-ಜೆಡಿಎಸ್‌ ಶಾಸಕರಿಗೆ ರಾಜಕೀಯ ಮುಲಾಜು ಇರಬಹುದು. ಆದರೆ, ಪ್ರತಿಪಕ್ಷ ಬಿಜೆಪಿಯಲ್ಲಿರುವ ಪರಿಶಿಷ್ಟ ಪಂಗಡದ ಶಾಸಕರಿಗೆ ಏನಾಗಿದೆ? ಅವರಿಗ್ಯಾವ ಮುಲಾಜಿದೆ ಎಂದು ಅರ್ಥವಾಗುತ್ತಿಲ್ಲ. ಬಿಜೆಪಿಯ 9 ಶಾಸಕರು ಅಧಿವೇಶನದಲ್ಲಿ ಸದನದ ಬಾವಿಗಿಳಿದು ಸಮುದಾಯದ ಬೇಡಿಕೆಗಳಿಗೆ ಪಟ್ಟು ಹಿಡಿಯಲಿ ಎಂದು ಕರೆ ನೀಡಿದ ಸ್ವಾಮೀಜಿ, ಬಿಜೆಪಿ ಶಾಸಕರು ಏನೂ ಮಾಡದಿರುವುದು ವಾಲ್ಮೀಕಿ ಸಮುದಾಯದ “ಕರ್ಮ’ ಎಂದು ಬೇಸರ ವ್ಯಕ್ತಪಡಿಸಿದರು.

ಅಶೋಕ್‌ ಕುರಿಯಾರ್‌, ಎ. ತಿಪ್ಪೇಸ್ವಾಮಿ ವಿಷಯ ಮಂಡಿಸಿದರು. ಜಲಮಂಡಳಿ ಪ್ರಧಾನ ಎಂಜಿನಿಯರ್‌ ಕೆಂಪರಾಮಯ್ಯ, ರಾಜ್ಯ ಬುಡುಕಟ್ಟು ಸಂಶೋಧನಾ ಕೇಂದ್ರದ ನಿರ್ದೇಶಕ ಟಿ.ಟಿ. ಬಸವನಗೌಡ, ಎಸಿಪಿ ಎಂ.ಜಿ. ಪಂಪಾಪತಿ, ಕರ್ನಾಟಕ ವಾಲ್ಮೀಕಿ ಮಹರ್ಷಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ. ರಾಘವೇಂದ್ರ ಉಪಸ್ಥಿತರಿದ್ದರು.

ಎಚ್‌.ಡಿ. ಕುಮಾರಸ್ವಾಮಿಯವರು ಕೇವಲ ಒಕ್ಕಲಿಗರಿಗೆ ಮುಖ್ಯಮಂತ್ರಿಯಲ್ಲ. ನಾಡಿನ ಆರೂವರೆ ಕೋಟಿ ಜನರ ಮುಖ್ಯಮಂತ್ರಿ. ಪರಿಶಿಷ್ಟ ವರ್ಗಗಳ ಬಗ್ಗೆ ಭಾಷಣ ಮಾಡುತ್ತಾ ರಾಜಕೀಯ ಮಾಡುವುದನ್ನು ಬಿಟ್ಟು ಸಮಸ್ಯೆಗಳಿಗೆ ಪರಿಹಾರ ದೊರಕಿಸಬೇಕು.
-ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠ

ಸಂವಿಧಾನ, ಸುಪ್ರೀಂಕೋರ್ಟ್‌, ಸರ್ಕಾರದ ಆದೇಶಗಳು ನಮ್ಮ ಪರವಾಗಿವೆ. ಆದರೆ, ಸರ್ಕಾರ ನಮ್ಮ ಪರ ಇಲ್ಲ. ಸಮ್ಮಿಶ್ರ ಸರ್ಕಾರ ನಮಗೆ ಕೊಡಬಾರದ ಕಷ್ಟ ಕೊಡುತ್ತಿದೆ. ನಮ್ಮದಲ್ಲದ ತಪ್ಪಿಗೆ ಸರ್ಕಾರ ನಮ್ಮನ್ನು ಜೀವಂತ ಸುಡುತ್ತಿದೆ.
-ಎ.ತಿಪ್ಪೇಸ್ವಾಮಿ, ರಾಜ್ಯ ಪ.ಪಂಗಡಗಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next