Advertisement
ಈಗ ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ಪೂರ್ವ ರೂಪ ಯಡತೊರೆ ತಾಲೂಕನ್ನು ಎಣಿಸಿ ಕೊಳ್ಳಬೇಕಾದರೆ 1940ರ ಆಸುಪಾಸಿಗೆ ಹಿಂದಿರು ಗಬೇಕು. ಸುಮಾರು 1900ರ ಹೊತ್ತಿಗೆ ಯಡತೊರೆ ತಾಲೂಕಿನ ಅಮಲ್ದಾರ್ (ತಹಶೀಲ್ದಾರ್) ಆಗಿದ್ದ ನವರತ್ನ ರಾಮರಾವ್ (1877-1960) ಅಲ್ಲಿಂದ ವರ್ಗವಾಗಿ 20 ವರ್ಷಗಳ ಅನಂತರ ಕಾರಿನಲ್ಲಿ ತೆರಳುವಾಗ ಇದೇ ತಾಲೂಕನ್ನು ಹಾದು ಹೋಗ ಬೇಕಾಯಿತು. ಆಗ ಕಾರಿನ ರೇಡಿಯೇಟರ್ ತಣಿಸ ಬೇಕಾಯಿತು. ಮಧ್ಯಾಹ್ನದ ಸಮಯ. ಬಾವಿಯ ಹತ್ತಿರ ಅನೇಕ ಮಹಿಳೆಯರು ಬಂದು ನೀರು ಸೇದುತ್ತಲಿದ್ದರು, ಸರತಿ ಸಾಲಿನಲ್ಲಿ ಕಾಯುತ್ತಲೂ ಇದ್ದರು. ಒಬ್ಬ ಮಹಿಳೆ ಬಳಿ ರಾಮರಾವ್ ನೀರು ಸೇದಲು ಕೊಡಪಾನ ಕೇಳಿದರು. “ಕೊನ್ನಿ ಬುದ್ಧಿ’ ಎಂದು ಆಗ ತಾನೆ ನೀರು ಸೇದಿದ ಕೊಡಪಾನವನ್ನು ಕೊಟ್ಟಳು. ಈ ಉಪಕಾರಕ್ಕೆ ಕೇವಲ ಥ್ಯಾಂಕ್ಸ್ ಹೇಳುವುದು ಸರಿಯಾಗುತ್ತದೆಯೆ? ಜೇಬಿನಿಂದ ಒಂದು ನಾಣ್ಯವನ್ನು ಕೊಡಲು ಹೋದರು. ಆಕೆ ಕೋಪಮಿಶ್ರಿತ ನಗುವಿನಿಂದ “ನಾವೇನು ಪೇಟೇ ಸ್ಥಳದೋರೇ ಬುದ್ಧಿ, ನೀರು ಮಾರಿಕೊಳ್ಳೋಕೆ? ನೋಡಕ್ಕ (ಇನ್ನೊಬ್ಬ ಮಹಿಳೆಯನ್ನು ಉದ್ದೇಶಿಸಿ) ಇವರು ಕಾಸು ಕಂಡೋರು, ನಾವು ಬಡವರು’ ಎಂದಳು.
ರಾಮರಾಯರ ತಾಯಿ ವಯಸ್ಸಿನ ಮಹಿಳೆ ಮಾತನಾಡಲು ಶುರುವಿಟ್ಟಳು: “ಇದೇನು ಕಷ್ಟ ಅಂತ ಕಾಣಿ¤àರಿ? 15-20 ವರ್ಷಗಳ ಹಿಂದೆ ಏಳೆಂಟು ಮೈಲಿಗಳಿಂದ ಗುಳುವಿನ ಅತ್ತಿಕುಪ್ಪೆಯಿಂದ ನೀರು ತರಬೇಕಾಗಿತ್ತು. ಆಗ ಮಕ್ಕಳು ಅತ್ತರೆ, ಅಳಬೇಡ ಕಂದ, ಕುಡಿಯೋಕೆ ನೀರು ಕೊಡ್ತೀನಿ, ಸುಮ್ಮನಿರು- ಅಂದರೆ ಸುಮ್ಮನಾಗುತ್ತಿದ್ದವು. ಈ ಬಾವಿಯನ್ನು ಇಲ್ಲಿದ್ದ ಒಬ್ಬ ಹುಡುಗ ಸುಬೇದಾರ ನವರತ್ನ ರಾಮ ರಾಯ ಅನ್ನೋ ಮಹರಾಯ ತೋಡಿಸಿಕೊಟ್ಟರು. ಅವರ ಹೊಟ್ಟೆ ತಣ್ಣಗಿರಲಿ’ ಎಂದಳು. ನೀರು ಕೊಟ್ಟ ಹುಡುಗಿ ನಗುತ್ತ “ಅವರೆಲ್ಲಿದಾರೋ ಈಗ? ನೀವು ತೆಗಿದರಲ್ಲ ಆ ದುಡ್ಡು ಅವರಿಗೆ ಕೊಡಿ’ ಎಂದು ನೀರು ಸೇದಲಿಕ್ಕೆ ಹೋದಳು. ಅಲ್ಲಿದ್ದವರ ನಗು, ಸಲ್ಲಾಪಗಳು – ನಾನೇ ಆ ಹಾಸ್ಯದ ಲಕ್ಷ್ಯವೆಂದು ತೋರಿತು ಎಂದು ರಾಮರಾವ್ ಕೃತಿಯಲ್ಲಿ ನೆನೆಸಿಕೊಂಡಿದ್ದಾರೆ.
Related Articles
Advertisement
ಅನಕ್ಷರಸ್ಥರೆಂಬವರ ಹೃದಯ ಹೇಗಿರುತ್ತದೆ? ಯಾವುದೇ ನೌಕರರಿಗೆ ವೃತ್ತಿತೃಪ್ತಿ ಹೇಗೆ ಸಿಗಬೇಕು? ಹೇಗೆ ಸಿಗುತ್ತದೆ ಎಂಬ ವಿಮರ್ಶೆ ಜತೆಗೆ ಈ ವೃತ್ತಿತೃಪ್ತಿಯೇ ನಿಜವಾದ ಸಂಬಳ, ನಾವು ಸಂಬಳವೆಂದು ಕರೆಯುವುದು ನಿಜವಾದ ಸಂಬಳಕ್ಕೆ ಹೆಚ್ಚುವರಿಯಾದುದು ಎಂಬ ಭಾವ ಮಾತುಕತೆಗಳಲ್ಲಿ ವ್ಯಕ್ತವಾಗುತ್ತದೆ. “ನೀರು ಮಾರುವುದಕ್ಕೆ ನಾವು ನಗರವಾಸಿಗಳೆ?’ ಎಂದು ನೀರು ಕೊಟ್ಟ ಮಹಿಳೆ ಹೇಳಿದ್ದು ವ್ಯಂಗ್ಯವಾದರೂ ಸುಮಾರು ನೂರು ವರ್ಷಗಳ ಬಳಿಕ, ಆ ಮಹಿಳೆಯ ನಾಲ್ಕೈದು ತಲೆ ಮಾರಿನ ಅನಂತರದ ಈ ಕಾಲಘಟ್ಟದಲ್ಲಿ ಸತ್ಯವಾಗಿ ಗೋಚರವಾಗುತ್ತದೆ. ನೀರು ಮಾರಿದರೂ ಪರವಾಗಿಲ್ಲ, ನ್ಯಾಯವಾಗಿಯಾದರೂ (ವ್ಯಾಪಾರೀ ನ್ಯಾಯ) ಮಾರುತ್ತಾರಾ? ಈಗ ಕೋಟ್ಯಂತರ ರೂ. ವೆಚ್ಚದ ಯೋಜನೆಗಳ ಎದುರು ಬಾವಿಗಳೆಲ್ಲ ಯಾವ ಲೆಕ್ಕ? ಅಪಾರ ವೆಚ್ಚದ ಯೋಜನೆಗಳು ಸಕಾಲದಲ್ಲಿ, ಭ್ರಷ್ಟಾಚಾರದ ವಾಸನೆ ಇಲ್ಲದೆ, ಸಮರ್ಪಕವಾಗಿ ಜನರಿಗೆ ದೊರಕಿದ್ದೇ ಆದರೆ ಅಪಾರ ಸಂಖ್ಯೆಯ ಸಾರ್ವಜನಿಕರು ಎಷ್ಟು ನೌಕರರನ್ನು ಯಾವ ರೀತಿಯಲ್ಲಿ ಬಾಯ್ತುಂಬ ಅಭಿನಂದಿಸಬಹುದಿತ್ತು? ಈ ಅಭಿನಂದನೆಗಳೆಲ್ಲ ದೊರೆ ಸ್ಥಾನದಲ್ಲಿರುವ ಆಳುವ ವರ್ಗಕ್ಕೆ ಪ್ರವಾಹೋಪಾದಿಯಲ್ಲಿ ತಲುಪಲು ಸಾಧ್ಯವಿತ್ತು…
ಆದರೆ ಜನರ ತೆರಿಗೆ ಹಣದಿಂದಲೇ ರೂಪುಗೊಳ್ಳುವ ಯಾವ ಯೋಜನೆಯೂ ಸಕಾಲದಲ್ಲಿ ಮುಗಿಯು ವುದಿಲ್ಲ, ಭ್ರಷ್ಟಾಚಾರದ ವಾಸನೆ ಬಡಿಯದ ಯೋಜನೆಗಳೇ ಇಲ್ಲ, ಆದರೂ ಜನರಿಂದಲೇ ಚುನಾಯಿತರಾದವರು, ಜನರ ತೆರಿಗೆ ಹಣದಿಂದಲೇ ವೇತನ ಪಡೆಯುವ ಅಧಿಕಾರಿಗಳನ್ನೊಳಗೊಂಡ ಆಡಳಿತಾರೂಢರ ಅಹಂಕಾರ ಇಳಿಯುವುದೇ ಇಲ್ಲ… ಇಂತಹ ವಾತಾವರಣದಲ್ಲಿ ಯಾರಿಗೆ ವೃತ್ತಿತೃಪ್ತಿ ಎಷ್ಟರ ಮಟ್ಟಿಗೆ ಸಿಗಬಹುದು? ಇವೆಲ್ಲದರ ನಡುವೆ ಪ್ರಾಮಾ ಣಿಕ ಸೇವೆ ಸಲ್ಲಿಸಿದವರಿಗಾದರೂ ಜನರಲ್ಲಿ ಆ ಕಾಲದ ಅನಕ್ಷರಸ್ಥರು ಕೊಟ್ಟ ಹೃದಯಂಗಮವಾದ ಕೃತಜ್ಞತೆ ಸಲ್ಲಿಸುವ ಗುಣ ಉಳಿದುಬಂದಿದೆಯೆ? ವೇತನ ಮತ್ತು ಭಕ್ಷೀಸು ಕಲ್ಪನೆ ಸಂಪೂರ್ಣ ಉಲ್ಟಾ ಆಗಿದೆ. ವೃತ್ತಿತೃಪ್ತಿ ನಾಪತ್ತೆಯಾಗುತ್ತಿದೆ. ಆತ್ಮವಂಚನೆಯ ಬದುಕಿನಿಂದಾಗಿ ಬಹುತೇಕರು ಅಕಾಲದಲ್ಲಿ ವೃದ್ಧಾಪ್ಯವನ್ನೂ, ಕಾಯಿಲೆಗಳನ್ನೂ ಹೊತ್ತುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ ಇಲ್ಲವೆ ನಿವೃತ್ತಿ ಯಾಗುತ್ತಿದ್ದಾರೆ. ಹೀಗಾಗಿ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮನೋಪ್ರವೃತ್ತಿ ಹದಗೆಡುತ್ತಲೇ ಹೋಗುತ್ತದೆ, ಮನೋಪ್ರವೃತ್ತಿಗೂ ಆರೋಗ್ಯಕ್ಕೂ ಸಂಬಂಧವಿದೆ ಎಂಬುದನ್ನು ಕಳೆದ ಕಾಲವನ್ನು ಕಂಡಾಗ ಅನುಭವಕ್ಕೆ ಬರುತ್ತದೆ. ಮುಂದೆ ಎಂತಹ ಕಾಲವನ್ನು ಕಾಣಬಹುದು? ಮುಂದುವರಿದ ದೇಶಗಳಲ್ಲಿ ಜನಾಂಗೀಯ ದ್ವೇಷಕ್ಕಾಗಿ ಯುದ್ಧ ಕಂಡುಬಂದರೆ ನಮ್ಮಲ್ಲಿ ಆಡಳಿತಗಾರರ ತಪ್ಪು ನೀತಿಯಿಂದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ಇಳಿಮುಖವಾಗಿ ಅಂತರ್ಜಲ ಕುಸಿತದ ಪರಿಣಾಮ ಅಲ್ಲಲ್ಲಿ ನೀರಿಗಾಗಿ ಮಿನಿಯುದ್ಧ ನಡೆಯಬಹುದು. ಇನ್ನು ಕೆಲವೇ ದಿನಗಳಲ್ಲಿ ಬರುವ ಬೇಸಗೆಯೇ ದೊಡ್ಡ ಪಾಠ ಕಲಿಸಬಹುದು. ಹಾಗಾದರೆ ಪ್ರಜೆಗಳ ಗತಿ ಏನು?
ಮಟಪಾಡಿ ಕುಮಾರಸ್ವಾಮಿ