ಕಲಕೇರಿ: ಮಹದಾಯಿ ನೀರಿನ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಯಾವ ರಾಷ್ಟ್ರೀಯ ಪಕ್ಷಗಳು ತೋರದಿರುವುದು ವಿಷಾದನೀಯವಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು. ಎಂಪಿಎಸ್ ಶಾಲಾ ಆವರಣದಲ್ಲಿ ನಡೆದ ಜೆಡಿಎಸ್ ಪಕ್ಷದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರೈತರು ಎರಡು ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕುಮಾರಸ್ವಾಮಿ ಇಸ್ರೇಲ್ ಪ್ರವಾಸ ಮಾಡಿ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವ ಬಗೆಯನ್ನು ತಿಳಿದುಕೊಂಡಿದ್ದು, ಜನರು ಅಧಿಕಾರ ಕೊಟ್ಟರೆ ನೀರಿನ ಬಳಕೆ ಮತ್ತು ಹಂಚಿಕೆ ಕುರಿತು ವಿಶೇಷ ಯೋಜನೆ ಜಾರಿ ಮಾಡಲಿದ್ದಾರೆ ಎಂದರು.
ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ರೈತರ ಅಭಿವೃದ್ಧಿಗೆ ನನ್ನ ಹೋರಾಟ ನಿರಂತರವಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿಯವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಸಿ. ಮನಗೂಳಿ ಅಧ್ಯಕ್ಷತೆ, ಡಾ| ವಿ.ಕೆ. ಜಾಲಹಳ್ಳಿಮಠ ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ಅನೇಕರು ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮಾಜಿ ಶಾಸಕ ಎನ್.ಎಸ್. ಖೇಡ, ಮಹಾದೇವಿ ನಡಹಳ್ಳಿ, ಶಾಂತಗೌಡ ನಡಹಳ್ಳಿ, ಶ್ರೀನಾಥಗೌಡ ಕೋರವಾರ, ದಯಾನಂದಗೌಡ ಯಾಳವಾರ, ಸಂಗಾರಡ್ಡಿ ದೇಸಾಯಿ, ಡಾ| ಎಂ.ಎಂ. ಬಿರಾದಾರ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮಕ್ಕೆ ಮುನ್ನ ಆಗಮಿಸಿದ ಮಾಜಿ ಪ್ರಧಾನಿಗಳನ್ನು ಯಲ್ಲಾಲಿಂಗ ಮಹಾರಾಜರ ಮಠದಿಂದ ವೇದಿಕೆವರೆಗೆ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.