ಯಳಂದೂರು: ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 5 ಅಂಗನವಾಡಿ ಕಾರ್ಯ ಕರ್ತೆ ಹಾಗೂ 12 ಸಹಾಯಕಿರ ಹುದ್ದೆಯಲ್ಲಿ ಹುದ್ದೆ ಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಕೆಲವು ಹುದ್ದೆಗಳಿಗೆ ನಕಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಅಂಕಪಟ್ಟಿಯನ್ನು ತಿದ್ದುಪಡಿ ಮಾಡಿಕೊಂಡು ಹುದ್ದೆಗಳನ್ನು ದಕ್ಕಿಸಿಕೊಂಡಿರುವ ಬಗ್ಗೆ ಸಾಕಷ್ಟು ಅನುಮಾನಗಳಿದ್ದು, ಆಕ್ಷೇಪಣೆ ಯನ್ನು ನೀಡಿರುವುದು ಕಂಡು ಬಂದಿದೆ.
ತಾಲೂಕಿನಲ್ಲಿ ಮೇ 18 ರಂದು ಯರಗಂಬಳ್ಳಿ, ಮದ್ದೂರು, ಮೆಲ್ಲಹಳ್ಳಿ, ಹೊನ್ನೂರು, ಎರಡನೇ ಕೇಂದ್ರ ಸೇರಿ ಒಟ್ಟು 5 ಅಂಗನವಾಡಿ ಕೇಂದ್ರಗಳಿಗೆ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯ ಇವೆರಡೂ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅಲ್ಲದೆ ಬಿಳಿಗಿರಿ ರಂಗನಬೆಟ್ಟ ಪುರಾಣಿ ಪೋಡು, ಮುತ್ತುಗದಗದ್ದೆ ಪೋಡು, ಕೃಷ್ಣಪುರ, ಹೊನ್ನೂರು, ಯರಗಂಬಳ್ಳಿ, ಯರಿಯೂರು, ಬೂದಿತಿಟ್ಟು, ಮೆಲ್ಲಹಳ್ಳಿ, ಮಾಂಬಳ್ಳಿ, ಕೆಸ್ತೂರು, ಯಳಂದೂರು ಸೇರಿ ಒಟ್ಟು 12 ಸಹಾಯಕಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ಬಹುತೇಕ ಹುದ್ದೆಗಳಿಗೆ ಕೆಲವು ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಅಂಕಪಟ್ಟಿ ಗಳನ್ನು ನಕಲಿ ಮಾಡಿ ಅತಿಹೆಚ್ಚು ಅಂಕ ತಿದ್ದುಪಡಿ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ಎಸ್ಸೆಸ್ಸೆಲ್ಸಿ ತೇರ್ಗಡೆಯಾಗದವರೂ ಅರ್ಜಿ ಸಲ್ಲಿಸಿದ್ದಾರೆ.
10ಕ್ಕೂ ಹೆಚ್ಚು ಆಕ್ಷೇಪಣೆ: ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿರ ಹುದ್ದೆಗೆ ತಾತ್ಕಾಲಿಕ ವಾಗಿ ಆಯ್ಕೆಯಾಗಿರುವ ಅಭ್ಯರ್ಥಿ ಬಗ್ಗೆ ಯಾವುದೇ ರೀತಿಯ ಆಕ್ಷೇಪಣೆಗಳನ್ನ ಸಲ್ಲಿಸಲು ನ.29 ರಿಂದ ಡಿ. 8ರ ವರೆಗೂ ದೂರನೀಡಲು ಇಲಾಖೆ ಸೂಚಿ ಸಿದ್ದರು. ಅದರಂತೆ ತಾಲೂಕಿನ ಹೊನ್ನೂರು, ಕೆಸ್ತೂರು, ಬಿಳಿಗಿರಿ ರಂಗನಬೆಟ್ಟ, ಕೃಷ್ಣಪುರ, ಸೇರಿದಂತೆ ಅನೇಕ ಅಂಗನ ವಾಡಿ ಕೇಂದ್ರಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಅನೇಕ ದೋಷಗಳಿವೆ. ಇಲಾಖೆ ನೀಡಿರುವ ಮಾನ ದಂಡಗಳನ್ನು ಇಲ್ಲಿ ಗಾಳಿಗೆ ತೂರಲಾಗಿದೆ ಎಂಬುದು ಆಶಾ ಸೇರಿದಂತೆ ಅನೇಕರ ಆಕ್ಷೇಪವಾಗಿದೆ.
ಅಂಕಪಟ್ಟಿಗಳನ್ನು ನೀಡಲು ವಿಳಂಬ: ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಮೂಲ ಅಂಕಪಟ್ಟಿಗಳ ನೀಡಬೇಕು ಎಂದು ತಾಲೂಕು ಮಹಿಳಾ ಇಲಾಖೆ ಅಧಿಕಾರಿಯವರು ಅಭ್ಯರ್ಥಿಗಳಿಗೆ ಪತ್ರವನ್ನು ಬರೆದಿದ್ದಾರೆ. ಆದರಲ್ಲಿ ಕೆಲವು ಅಭ್ಯರ್ಥಿಗಳು ಮಾತ್ರ ಮೂಲ ಅಂಕಪಟ್ಟಿ ಹಾಗೂ ಇತರೇ ದಾಖಲಾತಿಗಳು° ನೀಡಿದ್ದಾರೆ. ಆದರೆ, ಕೆಲವರು ಇದನ್ನು ಇನ್ನೂ ನೀಡಿಲ್ಲ. ಈ ವಿಳಂಬವೂ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜಿಲ್ಲಾ ಆಯ್ಕೆ ಸಮಿತಿಯಿಂದ ಕ್ರಮ: ಸಕಲೇಶ್ವರ : ತಾಲೂಕಿನಲ್ಲಿ ತಾತ್ಕಾಲಿಕವಾಗಿ ಆಯ್ಕೆಗೊಂಡಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನೂ ನೀಡಲಾಗಿದೆ. ಕೆಲವರು ಅಭ್ಯರ್ಥಿಗಳ ಆಯ್ಕೆ ಬಗ್ಗೆ ದೂರು ನೀಡಿದ್ದಾರೆ. ಇವರೂ ಸೇರಿದಂತೆ ಎಲ್ಲರಿಗೂ ಮೂಲ ಅಂಕಪಟ್ಟಿ, ಅಗತ್ಯ ದಾಖಲಾತಿಗಳನ್ನು ನೀಡಬೇಕೆಂದು ಪತ್ರವನ್ನು ಬರೆಯಲಾಗಿದೆ. ಆದರೆ ಕೆಲವರು ಇನ್ನೂ ನೀಡಿಲ್ಲ. ಇವರನ್ನು ಆಯ್ಕೆಯ ಮಾಡುವುದು ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಸಮಿತಿಯಾಗಿದ್ದು ಇವರ ಗಮನಕ್ಕೆ ಈ ವಿಷಯವನ್ನು ತರಲಾಗಿದೆ. ದಾಖಲಾತಿ ನೀಡಿಲು 7 ದಿನಗಳ ಅವಕಾಶ ನೀಡಲಾಗಿದ್ದು ಇದರೊಳಗೆ ಇದನ್ನು ನೀಡದಿದ್ದಲ್ಲಿ ಜಿಲ್ಲಾ ಆಯ್ಕೆ ಸಮಿತಿಯವರು ಮುಂದಿನ ಕ್ರಮ ವಹಿಸಲಿದ್ದಾರೆ ಎಂದು ಯಳಂದೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಕಲೇಶ್ವರ ತಿಳಿಸಿದ್ದಾರೆ.
-ಫೈರೋಜ್ ಖಾನ್