ಕಲಬುರಗಿ: ದಕ್ಷಿಣ ಭಾರತದ ಭಾಷೆಗಳಲ್ಲೇ ಕನ್ನಡ ಸಮೃದ್ಧ ಭಾಷೆಯಾಗಿದ್ದು, ಹೆಚ್ಚು ಸಾಹಿತ್ಯ-ಸಂಸ್ಕೃತಿ ಕನ್ನಡ ನಾಡಿನಲ್ಲಿದೆ ಎಂದು ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ-ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ವಿನೋದಕುಮಾರ ಪತಂಗೆ ಹೇಳಿದರು.
ನಗರದ ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ-ಪೂರ್ವ ಮಹಾ ವಿದ್ಯಾಲಯದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಸರಾ, ದೀಪಾವಳಿಯನ್ನು ಕರ್ನಾಟಕದಲ್ಲಿ ಎಷ್ಟು ಅದ್ಧೂರಿಯಿಂದ ಆಚರಿಸಲಾಗುತ್ತದೆಯೋ ಅಷ್ಟೇ ಉತ್ಸಾಹ ದಿಂದ ಕರ್ನಾಟಕ ರಾಜ್ಯೋತ್ಸವ ವನ್ನು ಆಚರಿಸುತ್ತೇವೆ ಎಂದು ಹೇಳಿದರು.
ಮುಖ್ಯ ಅಥಿತಿಯಾಗಿದ್ದ ವಿಜಯ ಕುಮಾರ ರೋಣದ ಮಾತನಾಡಿ, ಕನ್ನಡದ ಮೊದಲ ಕೃತಿ ಕವಿರಾಜಮಾರ್ಗ ನಮ್ಮ ಜಿಲ್ಲೆಯದ್ದು ಎನ್ನುವುದು ಹೆಮ್ಮೆ ವಿಷಯ. ಜಾನಪದವೂ ಸಹ ಶ್ರೀಮಂತವಾಗಿದೆ ಎಂದರು.
ಭವಾನಿ, ಐಶ್ವರ್ಯ, ವೈಷ್ಣವಿ, ಶಿವಾನಿ ಪ್ರಾರ್ಥನಾ ಗೀತೆ ಹಾಡಿದರು. ಸಂತೋಷ ಬೊರೋಟಿ ಸ್ವಾಗತಿಸಿದರು. ಡಾ| ಆನಂದ ಸಿದ್ಧಾಮಣಿ ನಿರೂಪಿಸಿದರು. ಕಾಲೇಜಿನ ಸಿಬ್ಬಂದಿ ಇದ್ದರು.