Advertisement

ರಾತ್ರೋರಾತ್ರಿ ಜಮೀನಾದ ರಾಜವಂಶಸ್ಥರ ಕಾಲದ ಕೆರೆ

01:47 PM Jun 01, 2023 | Team Udayavani |

ಎಚ್‌.ಡಿ.ಕೋಟೆ: ಕೆರೆಕಟ್ಟೆಗಳು, ಸ್ಮಶಾನ ಜಾಗ, ಅರಣ್ಯ ಇಲಾಖೆ ಜಾಗಗಳನ್ನು ಅಕ್ರಮ ಖಾತೆ ಮಾಡಬಾರದು, ಕೆರೆ ಜಾಗ ಒತ್ತುವರಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ತಾಲೂಕಿನ ಟೈಗರ್‌ಬ್ಲಾಕ್‌ ನಲ್ಲಿದ್ದ ಮೈಸೂರು ಒಡೆಯರ್‌ ಕಾಲದ ಕೆರೆಯನ್ನು ರಾತ್ರೋರಾತ್ರಿ ಉಳುಮೆ ಮಾಡಿದ್ದರೂ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಆಸ್ಪದ ನೀಡಿದಂತಾಗಿದೆ.

Advertisement

ಮೈಸೂರು ರಾಜವಂಶಸ್ಥರು ನಿರ್ಮಿಸಿದ ಕೆರೆ: ತಾಲೂಕಿನ ಕೆ.ಹೆಡತೊರೆ ಸರ್ವೆ ನಂ 46ರಲ್ಲಿ 8.10ಎಕರೆ ಚನ್ನಯ್ಯನಕಟ್ಟೆ ಎನ್ನುವ ಕೆರೆಯೊಂದಿದೆ. ಮೈಸೂರು ಒಡೆಯರ್‌ ಕಾಲದಲ್ಲಿ ರಾಜವಂಶಸ್ಥರು ಕ್ರೂರ ಪ್ರಾಣಿಗಳ ಭೇಟೆಗೆಂದು ಎಚ್‌.ಡಿ.ಕೋಟೆ ತಾಲೂಕಿನ ಟೈಗರ್‌ ಬ್ಲಾಕ್‌ ಗ್ರಾಮದ ಆಸುಪಾಸಿನತ್ತ ಹುಲಿ ಬೇಟೆಗೆಂದು ಆಗಮಿಸುತ್ತಿದ್ದ ವೇಳೆ ವನ್ಯಜೀವಿಗಳ ಕುಡಿವ ನೀರಿನ ದಾಹ ತೀರಿಸಲು ಮತ್ತು ದನಕರು, ಜನ ಜಾನುವಾರು ನೀರಿನ ಬವಣೆ ನೀಗಿಸುವ ಸಲುವಾಗಿ ಚನ್ನಯ್ಯನ ಕಟ್ಟೆ ನಿರ್ಮಿಸಿದ್ದರೆಂಬ ಪ್ರತೀತಿ ಇದೆ. ರಾತ್ರಿ ಇದ್ದ ಕೆರೆ ಬೆಳಗ್ಗೆ ಮಾಯ: ಮೈಸೂರು ರಾಜರ ಕಾಲದಲ್ಲಿ ನಿರ್ಮಿಸಿದ್ದ ಕೆರೆಯಿಂದ ಟೈಗರ್‌ ಬ್ಲಾಕ್‌, ಕೆ. ಹೆಡತೊರೆ, ಚೊಕ್ಕೊಡನಹಳ್ಳಿ ಸೇರಿ ಸುಮಾರು 8ಗ್ರಾಮಗಳಿಗಿರುವ ಏಕೈಕ ಕೆರೆ ಇದು. ಕೆರೆ ರಕ್ಷಿಸುವಂತೆ ತಹಶೀಲ್ದಾರ್‌, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಮೊರೆ ಹೋದರೂ ಹಿರಿಯ ಅಧಿಕಾರಿಗಳ ಭೂ ಕಾಯ್ದೆ ಅದರಲ್ಲೂ ವಿಶೇಷವಾಗಿ ಕೆರೆ ಸಂರಕ್ಷಣೆ ಆದೇಶ ಪಾಲಿಸುವಲ್ಲಿ ತಾಲೂಕು ಅಧಿಕಾರಿಗಳು ವಿಫ‌ಲರಾದ ಹಿನ್ನೆಲೆ ಕೆರೆಯನ್ನು ಒತ್ತುವರಿದಾರರು ರಾತ್ರೋರಾತ್ರಿ ಉಳುಮೆ ಮಾಡಿದ್ದಾರೆ.

ಅಧಿಕಾರಿಗಳ ಹಿಂದೇಟು: 1970ನೇ ಸಾಲಿನಿಂದಲೂ ಚನ್ನಯ್ಯನಕಟ್ಟೆ ಕೆರೆ ಎನ್ನುವ ದಾಖಲಾತಿ, ಸರ್ವೇಸ್ಕೆಚ್‌, ಆಗಿನ ಜಿಲ್ಲಾಧಿಕಾರಿಗಳು ಕೆರೆಜಾಗ ಒತ್ತುವರಿ ತೆರವುಗೊಳಿಸಿ ಕ್ರಮವಹಿಸಿಲು ತಹಶೀಲ್ದಾರ್‌ಗೆ ನೀಡಿದ ಆದೇಶ ಪತ್ರ, ಅಣ್ಣೂರು ಗ್ರಾಪಂನಿಂದ ಸದರಿ ಕೆರೆಯಲ್ಲಿ ಮೀನು ಸಾಕಾಣಿಕೆ, ಕೆರೆ ಏರಿ ಮೇಲಿನ ಹುಣಸೆ ಮರದ ಫಸಲು ಹರಾಜು ಪತ್ರ, ಕಳೆದ ವರ್ಷ ದಾಖಲಾತಿ ಪರಿಶೀಲಿಸಿದ ಬಳಿಕ ಹುಣಸೂರು ಉಪವಿಭಾಗಾಧಿಕಾರಿಗಳು ಕೆರೆ ಕುರಿತು ಕ್ರಮವಹಿಸುವಂತೆ ಒಂದೂವರೆ ವರ್ಷದ ಹಿಂದೆ ಸೂಚನೆ ನೀಡಿದ್ದರೂ ತಹಶೀಲ್ದಾರ್‌ ಕ್ರಮವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಜನ ಆರೋಪಿಸಿದ್ದಾರೆ.

ದೂರಿಗಿಲ್ಲ ಬೆಲೆ: ದಾಖಲಾತಿ ಸಮೇತ ತಹಶೀಲ್ದಾರ್‌ ರಿಗೆ ದೂರು ನೀಡಿದರೂ ಬೆಲೆ ಇಲ್ಲದಂತಾಗಿದೆ. ಪ್ರತಿ ವರ್ಷ ಆಸುಪಾಸಿನ ಜಮೀನಿನವರು ಕೆರೆಜಾಗ ಉಳುಮೆ ಮಾಡುವಾಗೆಲ್ಲಾ ಸಾರ್ವಜನಿಕರೇ ತಹಶೀಲ್ದಾರ್‌ ಮತ್ತು ಆರ್‌ಐ, ವಿಎಗಳಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಸ್ಥಳಕ್ಕೆ ಅಧಿಕಾರಿಗಳ ಬಂದಾಗ ಸ್ಥಗಿತಗೊಳ್ಳುವ ಉಳುಮೆ, ಮತ್ತೆ 5-6 ತಿಂಗಳಲ್ಲಿ ಕದ್ದುಮುಚ್ಚಿ ರಾತ್ರೋರಾತ್ರಿ ಉಳುಮೆ ಮಾಡುತ್ತಾರೆ. ಕ್ರಮ ಏಕಿಲ್ಲ?: ಕಳೆದ 3ದಿನಗಳ ಹಿಂದೆ ಉಳುಮೆ ಮಾಡಿದಾಗ ಮಾಹಿತಿ ನೀಡಿದ ಬಳಿಕ ಒತ್ತುವರಿದಾರ ರನ್ನು ಕರೆಸಿ ಕೆರೆಗೆ ಹೋಗದಂತೆ ತಹಶೀಲ್ದಾರ್‌ ಎಚ್ಚರಿಕೆ ನೀಡಿದರೂ ಮಂಗಳವಾರ ರಾತ್ರಿ ಕೆರೆ ಉಳುಮೆ ಮಾಡಿ ಜಾಗ ಕಬಳಿಸುವ ಹುನ್ನಾರ ನಡೆದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ತಹಶೀಲ್ದಾರ್‌ ಬಳಿಗೆ ಗ್ರಾಮಸ್ಥರು: ಕ್ರಮ ಕೈಗೊಳ್ಳದ ತಹಶೀಲ್ದಾರ್‌ ಕಚೇರಿಗೆ ಟೈಗರ್‌ ಬ್ಲಾಕ್‌ ಗ್ರಾಮದ ಹತ್ತಾರು ಮಂದಿ ಮಹಿಳೆಯರ ತಂಡ ಬುಧವಾರ ಆಗ ಮಿಸಿ ಕೆರೆಜಾಗ ಉಳಿಸಿಕೊಡುವಂತೆ ಒತ್ತಾಯಿಸಿದರು. ತಪ್ಪಿದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

Advertisement

ಕೆರೆಕಟ್ಟೆ ಪರಭಾರೆಯಾಗದಂತೆ ಸಂರಕ್ಷಿಸಬೇಕೆಂಬ ಸರ್ಕಾರದ ಆದೇಶಕ್ಕೆ ಅಧಿಕಾರಿಗಳಿಂದ ಕಿಮ್ಮತ್ತಿನ ಪಾಲನೆ ಇಲ್ಲ. ರಾಜವಂಶಸ್ಥರ ಜನೋಪಕಾರಿ ಚಿಂತನೆಯಿಂದ ನಿರ್ಮಾಣಗೊಂಡ ಕೆರೆ ರಾತ್ರೋರಾತ್ರಿ ಉಳುಮೆಯಾದರೂ ಕೇಳ್ಳೋರಿಲ್ಲ. ದಾಖಲಾತಿಯಂತೆ 8.10ಎಕರೆ ಕೆರೆ ಜಾಗ ರಕ್ಷಣೆ ಮಾಡಿ ಅಕ್ರಮ ಪ್ರವೇಶ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಚ್ಚರ. -ಈವನ್‌ರಾಜ್‌, ಟೈಗರ್‌ಬ್ಲಾಕ್‌ ನಿವಾಸಿ

ಗ್ರಾಮಸ್ಥರ ದೂರಿನ ಮೇರೆಗೆ ಇಂದೇ ಕೆರೆಗೆ ರಾಜಸ್ವ ನಿರೀಕ್ಷಕರು ಮತ್ತು ಗ್ರಾಮಲೆಕ್ಕಾಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಚನೆ ನೀಡಿದರೂ ಪಾಲಿಸದೆ ರಾತ್ರೋರಾತ್ರಿ ಕೆರೆ ಜಾಗ ಉಳುಮೆ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಉಪವಿಭಾಗಾಧಿ ಕಾರಿಗಳ ಆದೇಶದಂತೆ ಕೆರೆಜಾಗ ರಕ್ಷಣೆಗೆ ಕಂದಾಯ ಇಲಾಖೆ ಕ್ರಮವಹಿಸಲಾಗುತ್ತದೆ. -ಮಹೇಶ್‌, ತಹಶೀಲ್ದಾರ್‌

ಕೆರೆಜಾಗ ಉಳುಮೆ ಮಾಡುವ ವಿಷಯ ತಿಳಿಯುತ್ತಿದ್ದಂತೆಯೇ ಹಲವು ಬಾರಿ ಸ್ಥಳಕ್ಕೆ ಹೋಗಿ ಎಚ್ಚರಿಕೆ ನೀಡುವಾಗೆಲ್ಲಾ ಕೆರೆ ಪಕ್ಕದ ಜಮೀನಿನ ಐದಾರು ಮಹಿಳೆ ಯರು, ಕೆರೆ ಜಾಗಕ್ಕೆ ಆಗಮಿಸಿ ವಿಷದ ಬಾಟ ಲಿ ಹಿಡಿದು ಕುಡಿದು ಸಾಯುವ ಬೆದರಿಕೆ ಹಾಕುತ್ತಾರೆ. ಮುಂದೆ ಕೆರೆ ಜಾಗಕ್ಕೆ ಬಾರದಂತೆ ಕ್ರಮಕ್ಕೆ ಈಗಲೇ ಮುಂದಾಗುತ್ತೇವೆ. -ಮಹೇಶ್‌, ಕಸಬಾ ರಾಜಸ್ವ ನಿರೀಕ್ಷಕರು

-ಎಚ್‌.ಬಿ.ಬಸವರಾಜು.

Advertisement

Udayavani is now on Telegram. Click here to join our channel and stay updated with the latest news.

Next