Advertisement

ಜಾಕ್‌ಪಾಟ್‌ ಜಿಲ್ಲೆ ಬೆಳಗಾವಿಗೆ ಭಾರೀ ನಿರಾಸೆ  

06:38 PM Aug 05, 2021 | Team Udayavani |

ವರದಿ: ಕೇಶವ ಆದಿ

Advertisement

ಬೆಳಗಾವಿ: ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಒಂದರ ಮೇಲೊಂದರಂತೆ ಜಾಕ್‌ಪಾಟ್‌ ಹೊಡೆದಿದ್ದ ಗಡಿ ಜಿಲ್ಲೆ ಬೆಳಗಾವಿ, ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮಾತ್ರ ನಿರಾಸೆ ಆನುಭವಿಸಬೇಕಾಗಿದೆ. ಕನಿಷ್ಟ ನಾಲ್ವರು ಸಚಿವರಾಗುವುದು ಖಚಿತ ಎಂದೇ ಭಾವಿಸಿದ್ದ ಜಿಲ್ಲೆಯ ಜನ ಎರಡಕ್ಕೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಜಿಲ್ಲೆಯಲ್ಲಿ ಯಾರ್ಯಾರು ಸಚಿವರಾಗಬಹುದು ಎಂಬ ಲೆಕ್ಕಾಚಾರ ನಿರಂತರವಾಗಿ ನಡೆದೇ ಇತ್ತು. ಹಿರಿಯ ಶಾಸಕರ ಜತೆ ಯುವ ಶಾಸಕರು ಸಹ ಮಂತ್ರಿಗಿರಿಗಾಗಿ ಎಲ್ಲಿಲ್ಲದ ಪ್ರಯತ್ನ ಮಾಡಿದ್ದರು. ಆದರೆ ಎಲ್ಲರ ಲೆಕ್ಕಾಚಾರವೂ ಕೊನೆಗೆ ತಲೆಕೆಳಗಾಯಿತು. ಇಬ್ಬರಿಗೆ ಸಚಿವ ಸ್ಥಾನ ಎನ್ನುವದಕ್ಕಿಂತ ಹಿಂದಿನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರನ್ನು ಕೈಬಿಟ್ಟಿದ್ದು ಹಾಗೂ ಜಾರಕಿಹೊಳಿ ಸಹೋದರರ ಹೆಸರನ್ನು ಪರಿಗಣಿಸದೇ ಇದ್ದದ್ದು ಜಿಲ್ಲೆಯ ಮಟ್ಟಿಗೆ ದೊಡ್ಡ ಆಘಾತ.

ಲಕ್ಷ್ಮಣ ಸವದಿ ಹಾಗೂ ಬಾಲಚಂದ್ರ ಜಾರಕಿಹೊಳಿ ಸಚಿವರಾಗುವುದು ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಅನುಭವ ಹಾಗೂ ಪ್ರಭಾವ ಎರಡಕ್ಕೂ ಮನ್ನಣೆ ಸಿಕ್ಕಿಲ್ಲ. ಬಿಜೆಪಿ ವರಿಷ್ಠರು ಹಾಗೂ ಆರ್‌ಎಸ್‌ಎಸ್‌ ನಾಯಕರ ಜತೆ ಉತ್ತಮ ಸಂಪರ್ಕ ಹೊಂದಿದ್ದ ಲಕ್ಷ್ಮಣ ಸವದಿ ಸಚಿವರಾಗುವುದರಲ್ಲಿ ಅನುಮಾನ ಇಲ್ಲ ಎಂದೇ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಅಂದುಕೊಂಡಿದ್ದರು. ಸವದಿ ಸಹ ತಮ್ಮ ಮಟ್ಟದಲ್ಲಿ ಎಲ್ಲ ಪ್ರಯತ್ನ ಮಾಡಿದ್ದರು. ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋಗಿ ಬಂದಿದ್ದರು. ಆದರೆ ಅವರ ಲೆಕ್ಕಾಚಾರ ಈ ಬಾರಿ ಕೈಕೊಟ್ಟಿತು. ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ತಪ್ಪಿದ್ದು ಏಕೆ, ಇದರ ಹಿಂದೆ ಯಾರ ತಂತ್ರ ಕೆಲಸ ಮಾಡಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇನ್ನು ಸಚಿವ ಸ್ಥಾನಕ್ಕೆ ಕುಡಚಿ ಶಾಸಕ ಪಿ.ರಾಜೀವ ಅವರ ಹೆಸರು ಬಹಳ ಜೋರಾಗಿ ಓಡಾಡುತ್ತಿತ್ತು. ಇನ್ನೊಂದು ಕಡೆ ತಮಗೆ ಸಚಿವ ಸ್ಥಾನ ಕೊಡದೇ ಇದ್ದರೆ ರಾಜೀವ ಅವರಿಗೆ ಕೊಡಬೇಕು ಎಂದು ಲಕ್ಷ್ಮಣ ಸವದಿ ಸಹ ಪ್ರಯತ್ನ ಮಾಡಿದ್ದರು ಎನ್ನಲಾಗುತ್ತಿದೆ. ಹೀಗಿರುವಾಗ ಲೆಕ್ಕಾಚಾರ ಎಲ್ಲಿ ತಪ್ಪಿತು ಎಂಬುದು ಅವರ ಬೆಂಬಲಿಗರನ್ನು ಕಾಡುತ್ತಿದೆ.

Advertisement

ಸವದತ್ತಿ ಶಾಸಕ ಹಾಗೂ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಸಹ ಸಚಿವ ಸ್ಥಾನಕ್ಕೆ ಪ್ರಯತ್ನ ಮಾಡಿದ್ದರು. ತಮಗೆ ಅವಕಾಶ ನೀಡದೇ ಇದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಸಂದೇಶವನ್ನು ಸಹ ಪಕ್ಷದ ವರಿಷ್ಠರಿಗೆ ರವಾನಿಸಿದ್ದರು. ಆದರೆ ಇದು ವರಿಷ್ಠರ ಮೇಲೆ ಯಾವುದೇ ಪರಿಣಾಮ ಬೀರಲೇ ಇಲ್ಲ. ಇನ್ನೊಂದು ಕಡೆ ಜೈನ ಸಮುದಾಯದ ಅಭಯ ಪಾಟೀಲ ಸಹ ಸಚಿವ ಸ್ಥಾನಕ್ಕಾಗಿ ತಮ್ಮದೇ ಆದ ಪ್ರಯತ್ನ ಮಾಡಿದ್ದರು. ಆದರೆ ಅವರ ಪ್ರಯತ್ನ ಸಾಕಾಗಲಿಲ್ಲ. ಸಚಿವ ಸ್ಥಾನದ ಆಸೆ ಹೊಂದಿದ್ದ ಅಭಯ ಗೆ ಮತ್ತೆ ನಿರಾಸೆ ಎದುರಾಗಿದೆ.

ಇನ್ನು ನಾನು ಎಂಟು ಬಾರಿ ಶಾಸಕನಾಗಿದ್ದೇನೆ. ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎನ್ನುತ್ತಲೇ ಇರುವ ಹುಕ್ಕೇರಿಯ ಶಾಸಕ ಉಮೇಶ ಕತ್ತಿ ಮತ್ತೂಮ್ಮೆ ಸಚಿವ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಡಿಯೂರಪ್ಪ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿರುವ ಕತ್ತಿ ಅವರಿಗೆ ಇದರಿಂದ ನಿರಾಸೆ ಆಗಿಲ್ಲ. ಬದಲಾಗಿ ಒಳ್ಳೆಯ ಉಡುಗೋರೆಯೇ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next