Advertisement

ಸಮಸ್ಯೆಗಳ ಆಗರ ಇಟಗಿ ಬಾಲಕಿಯರ ವಸತಿ ನಿಲಯ

09:11 AM Jul 05, 2019 | Suhan S |

ಕುಕನೂರು: ತಾಲೂಕಿನ ಇಟಗಿ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯ ಹಲವು ಸಮಸ್ಯೆಗಳಿಂದ ವಂಚಿತವಾಗಿದೆ. ಈ ವಸತಿ ನಿಲಯಕ್ಕೆ ಆಧುನಿಕ, ಸುಸಜ್ಜಿತ, ವಿಶಾಲ ಕಟ್ಟಡಗಳಿದ್ದರೂ ಸ್ಥಳಕ್ಕೆ ತಲುಪಲು ಸೂಕ್ತ ರಸ್ತೆಯೇ ಇಲ್ಲ.

Advertisement

ತಮ್ಮ ಮಕ್ಕಳು ವಸತಿ ಶಾಲೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರ ಪಾಲಕರು ಸಂತಸಪಡುತ್ತಿದ್ದರೆ, ಇನ್ನೊಂದೆಡೆ ಹಾಸ್ಟೆಲ್ನಲ್ಲಿರುವ ವ್ಯವಸ್ಥೆ ಅವರನ್ನು ಆತಂಕಕ್ಕೀಡು ಮಾಡಿದೆ. ಈ ವಸತಿ ನಿಲಯದಲ್ಲಿ ಸುಮಾರು 130ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. ಆದರೆ ಇವರಿಗೆ ಸೂಕ್ತ ಭದ್ರತೆ ಇಲ್ಲದಿರುವುದು ಪಾಲಕರು ಆತಂಕವನ್ನು ಹೆಚ್ಚಿಸಿದೆ.

ಶೌಚಕ್ಕಾಗಿ ಕೀ.ಮಿ. ನಡಿಗೆ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ವಚ್ಛತ್ತೆಗಾಗಿ ಬಯಲು ಮುಕ್ತ ಶೌಚಾಲಯ ಹಾಗೂ ಇನ್ನಿತರೆ ಸಬ್ಸಿಡಿ ಹಣ ನೀಡಿ ಸಾರ್ವಜನಿಕರು ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ. ಆದರೆ ಈ ಸರಕಾರಿ ವಸತಿ ನಿಲಯದ ವಿದ್ಯಾರ್ಥಿನಿಯರು ಚೆಂಬು ಹಿಡಿದು ಸುತ್ತಮುತ್ತ ನೋಡಿ ಶೌಚಕ್ಕಾಗಿ ಬಯಲಿನ ಕಡೆ ಹೋಗುವುದು ಅನಿವಾರ್ಯವಾಗಿದೆ. ಹಾಸ್ಟೆಲ್ನಲ್ಲಿ ಶೌಚಾಯಗಳಿದ್ದರೂ ಸೂಕ್ತ ನೀರಿನ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಯರು ಶೌಚಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ.

ಸಮಸ್ಯೆ ಸರಮಾಲೆ: ಶಾಲೆಗೆ ಹೋದ ಮಕ್ಕಳು ಮರಳಿ ಬರುವುದರೊಳಗೆ ಮಳೆ ಬಂದರೆ ವಸತಿ ನಿಲಯಕ್ಕೆ ಕೆಸರುಮಯ ರಸ್ತೆಯಲ್ಲೇ ಸಾಗಬೇಕು. ಅವಸರದಲ್ಲಿ ಹೊರಟಾಗ ಜಾರಿ ಬೀಳುವ ಸಾಧ್ಯತೆ ಇದೆ. ಹೀಗೆ ಕೆಸರಿನಲ್ಲಿ ಬಿದ್ದು ಬಟ್ಟೆ ಕೊಳೆಯಾದರೆ ಮರುದಿನ ಶಾಲೆಗೆ ರಜೆ ಹಾಕಬೇಕಾಗುತ್ತದೆ. ವಸತಿ ಶಾಲೆ ಈ ವರ್ಷದ ಪ್ರಾರಂಭದಲ್ಲೇ ನೀರಿನ ಸಮಸ್ಯೆ ಎದುರಿಸುತ್ತಿದೆ. ವಾರ್ಡನ್‌ ಶಿವಶಂಕರ ವಸತಿ ನಿಲಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬಂತೆ ತಿಳಿದಾಗೊಮ್ಮೆ ವಸತಿ ನಿಲಯಕ್ಕೆ ಬಂದು ಸಿಬ್ಬಂದಿಗಳೊಂದಿಗೆ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸದೇ ಹೊರಟು ಬಿಡುತ್ತಾರೆ. ಹಾಸ್ಟೆಲ್ ಸುತ್ತಮುತ್ತ ಹಾಗೂ ವಸತಿ ನಿಲಯದ ದಾರಿಯಲ್ಲಿ ದೀಪಗಳು ಇಲ್ಲ. ವಿದ್ಯಾರ್ಥಿಗಳ ದುಸ್ಥಿತಿ ನೋಡಿ ಸ್ಥಳೀಯರು ತಮ್ಮ ಮನೆ ಮುಂದಿನ ದೀಪದ ಬೆಳಕು ರಸ್ತೆಗೂ ವ್ಯಾಪಿಸುವಂತೆ ಮಾಡಿದ್ದಾರೆ. ಅಲ್ಲದೇ ಸೂಕ್ತ ಭದ್ರತಾ ಸಿಬ್ಬಂದಿ ಅಗತ್ಯವೂ ಇದೆ. ಹಾಸ್ಟೆಲ್ ಗ್ರಾಮದ ಹೊರವಲಯದಲ್ಲಿದ್ದು, ಇದಕ್ಕೆ ಕಾಂಪೌಂಡ್‌ ಕೂಡ ಇಲ್ಲ.

 

ಇಲಾಖೆ ವತಿಯಿಂದ ಗ್ರಾಪಂ ಪಿಡಿಒ ಗಮನಕ್ಕೆ ತಂದ್ದಿದ್ದೇವೆ. ಸ್ವತಃ ನಾವೇ ಹೋಗಿ ಪರಿಶೀಲಿಸಿದ್ದೇನೆ ಹಾಸ್ಟೆಲ್ನಲ್ಲಿ ಯಾವುದೇ ಸಮಸ್ಯೆ ಇಲ್ಲ. •ಭಜೇಂತ್ರಿ, ಬಿಸಿಎಂ ತಾಲೂಕಾಧಿಕಾರಿ
ಕೆಲವು ಸಮಸ್ಯೆಗಳ ಬಗ್ಗೆ ಜಿಲ್ಲಾ ಪಂಚಾಯತ್‌ ಸದಸ್ಯೆ ಗಂಗಮ್ಮ ಗುಳಗಣ್ಣನವರ್‌ ನನ್ನ ಗಮನಕ್ಕೆ ತಂದಿದ್ದಾರೆ. ಈ ಬಾರಿ ಎನ್‌ಆರ್‌ಜಿಯಲ್ಲಿ ಕಾಂಪೌಂಡ್‌ ನಿರ್ಮಾಣ ಮಾಡಲಾಗುವುದು. ಇನ್ನುಳಿದ ಸಮಸ್ಯೆಗಳ ಬಗ್ಗೆ ತಾಲೂಕು ಅಧಿಕಾರಿ ಮೂಲಕ ತಿಳಿದು ಬಗೆ ಹರಿಸುತ್ತೇನೆ.•ಈರಣ್ಣ ಆಶಾಪೂರ,
ಜಿಲ್ಲಾಧಿಕಾರಿ ಹಿಂದುಳಿದ ವರ್ಗಗಳ ಇಲಾಖೆ
ವಿದ್ಯಾರ್ಥಿನಿಯರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮಹಿಳಾ ವಸತಿ ನಿಲಯಕ್ಕೆ ಮಹಿಳೆಯರೇ ವಾರ್ಡನ್‌ ಇರಬೇಕು ಎಂಬ ಸರಕಾರದ ಆದೇಶವಿದ್ದರು ಅಧಿಕಾರಿಗಳು ಇದನ್ನು ಪಾಲಿಸುತ್ತಿಲ್ಲ. ಆದರೂ ದಿನಕೊಮ್ಮೆಯಾದರು ಬರುವ ವಾರ್ಡನ್‌ ನಿಯೋಜನೆ ಮಾಡುವ ಬದಲು ತಿಂಗಳಿಗೊಮ್ಮೆ ಹಾಜರಾತಿಗೆ ಸಹಿ ಮಾಡುವಂತ ವಾರ್ಡನ್‌ ನೇಮಕ ಮಾಡಲಾಗಿದೆ.•ಗ್ರಾಮಸ್ಥರು
ವಸತಿ ನಿಲಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ಆದರೆ ಗ್ರಾಮದಲ್ಲಿ ಆಗಿರುವ ವಸತಿ ನಿಲಯ ಕೆಲವು ಸ್ಥಳೀಯರಿಗೆ ಇಷ್ಟ ಇಲ್ಲದ ‌ಕಾರಣ ಆರೋಪ ಮಾಡುತ್ತಾರೆ.•ವೀರೇಶ್‌, ಇಟಗಿ ಗ್ರಾಪಂ ಪಿಡಿಒ
•ಎಲ್. ಮಂಜುನಾಥಪ್ರಸಾದ
Advertisement
Advertisement

Udayavani is now on Telegram. Click here to join our channel and stay updated with the latest news.

Next