Advertisement
“ದಸ್ ಸ್ಫೋಕ್ ಸ್ವಾಮಿ ವಿವೇಕಾನಂದ’ ಎನ್ನುವ ಕಿರು ಪುಸ್ತಕ ಅದು. ಆಗ ಅದು ಕಠೊಪನಿಷತ್ತಿನಿಂದ ಉಧೃತವಾದ ಒಂದು ಶ್ಲೋಕದ ಮೊದಲ ಸಾಲು ಎಂದು ಗೊತ್ತಿರಲಿಲ್ಲ. ಉಪನಿಷತ್ತು, ಭಗವದ್ಗೀತೆ ಇತ್ಯಾದಿ ಎಲ್ಲ ವೇದ ಗ್ರಂಥಗಳ ಸಾರವನ್ನು ಅವರು ಅರಗಿಸಿಕೊಂಡವರಾಗಿದ್ದರು. ಆದರೆ ಪ್ರತೀ ರವಿವಾರ ಅಲ್ಲಿ ರಾಮಕೃಷ್ಣ ಪರಮಹಂಸ ಮತ್ತು ಶಾರದಾ ದೇವಿಯವರ ಬೃಹತ್ ಚಿತ್ರಗಳಿಗೆ ಭಜನೆ, ಆರತಿಗಳು ಆದ ಮೇಲೆ ಎಲ್ಲರಿಗೂ ಕೊಡುತ್ತಿದ್ದ ಸಿಹಿ ಉಂಡೆ ಪ್ರಸಾದ ನಮಗೆ ವಾರದ ಹೈಲೈಟ್ ಆಗಿರುತ್ತಿತ್ತು!
ಅವರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ಆತನಿಗೆ ಚುರುಕಾದ ಬುದ್ಧಿ. ಕಾಲೇಜಿನಲ್ಲಿ ಪಾಶ್ಚಾತ್ಯ ಚಿಂತನೆಯನ್ನು ಅಭ್ಯಸಿಸಿ ಅದರ ಹಿರಿಮೆಯನ್ನು ಅರಿತುಕೊಂಡಿದ್ದನು. ಪ್ರಾಚೀನ ಧಾರ್ಮಿಕ ಸಂಪ್ರದಾಯಗಳಲ್ಲಿ ಗೌರವ ಒಂದು ಕಡೆ, ಇನ್ನೊಂದೆಡೆ ಮೊನಚಾದ ಬುದ್ಧಿಶಕ್ತಿಯೊಂದಿಗೆ ವಿಮರ್ಶೆ ಮಾಡುವಂತಹ ಶಕ್ತಿ ಇತ್ತು. ಹದಿನೆಂಟು ವರ್ಷದ ಯುವಕ ದೇವರನ್ನು ಹುಡುಕಲು ಪ್ರಾರಂಭ ಮಾಡಿದ್ದ. ಈ ಸಂದಿಗ್ಧ ಸ್ಥಿತಿಯಲ್ಲಿ ಆಗಿನ ಸಾಮಾಜಿಕ-ಧಾರ್ಮಿಕ ಕ್ರಾಂತಿಗೆ ಪ್ರಖ್ಯಾತವಾಗಿದ್ದ ಬ್ರಹ್ಮ ಸಮಾಜದಿಂದ ಸಮಾಧಾನ ಪಡೆಯಲು ಪ್ರಯತ್ನಿಸಿದನು. ಬ್ರಹ್ಮ ಸಮಾಜ ಸೇರಿದರೂ ಆತನ ತಳಮಳ ಶಾಂತವಾಗಲಿಲ್ಲ.
Related Articles
Advertisement
ಕಲ್ಪತರು ದಿವಸ ಜನವರಿ 1ಜನವರಿ ಒಂದನೆಯ ತಾರೀಕಿಗೆ ಆ ಹೆಸರು ಬಂದದ್ದು 1886ರಲ್ಲಿ ನಡೆದ ಒಂದು ಘಟನೆಯಿಂದಾಗಿ. ಶ್ರೀ ರಾಮಕೃಷ್ಣರು ಗಂಟಲಿನ ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದರು ಅಂತ ಆಗ ಕಲ್ಕತ್ತಾದ ಸಮೀಪದ ಕಾಸಿಪುರದಲ್ಲಿ ಒಂದು ಮನೆಯಲ್ಲಿ ಆರೈಕೆಗಿದ್ದರು. ಆ ದಿನ ಅವರ ಆರೋಗ್ಯ ಸುಧಾರಿಸಿತ್ತು. ಅವರು ಹೊರಗಡೆ ಉದ್ಯಾನಕ್ಕೆ ಬಂದಾಗ ಭಾವೋತ್ಸಾಹದಲ್ಲಿದ್ದಂತೆ ಕಂಡರು. ತಮ್ಮ ಶಿಷ್ಯ ಗಿರೀಶನಿಗೆ ಕೇಳಿದರು: ನಾನು ಯಾರು ಅಂತ ತಿಳಿದಿದ್ದೀಯಾ? ಆತನ ಉತ್ತರ: ನೀವು ದೇವರ ಅವತಾರವೇ. ಮನುಕುಲವನ್ನು ಕರುಣಿಸಲು ಧರೆಗಿಳಿದು ಬಂದಿದ್ದೀರಿ! ಭಾವೋದ್ರೇಕರಾಗಿದ್ದ ರಾಮಕೃಷ್ಣರು ನೆರೆದಿದ್ದ ಎಲ್ಲ ಅನುಯಾಯಿಗಳನ್ನೂ ಸ್ಪರ್ಷಿಸಲು ಆರಂಭ ಮಾಡಿದರು. ನೀವೆಲ್ಲ ಎಚ್ಚೆತ್ತುಕೊಳ್ಳಿ ಅಂದರು. ಅವರ ಶಿಷ್ಯರಲ್ಲಿ ಒಬ್ಬನಾದ ರಾಮಚಂದ್ರ ದತ್ತನು “ಅವರು ಕೇಳಿದ್ದನ್ನು ಕೊಡುವ ಕಲ್ಪವೃಕ್ಷ ಆದರು’ ಎಂದು ಆ ದಿನವನ್ನು ಕಲ್ಪತರು ದಿವಸ ಎಂದು ಕರೆದನು. ಅನತಿ ಸಮಯದಲ್ಲಿ ಅವರ ಪ್ರಾಣ ಪಕ್ಷಿ ಹಾರಿತು. ಶ್ರೀರಾಮಕೃಷ್ಣರು ಮಹಾಸಮಾಧಿಸ್ಥರಾಗುವ ಮೂರು-ನಾಲ್ಕು ದಿನಗಳ ಮುಂಚೆ ತಮ್ಮ ಶಕ್ತಿಯನ್ನೆಲ್ಲ ನರೇಂದ್ರನಿಗೆ ಧಾರೆ ಎರೆದು “ಈ ಶಕ್ತಿಯ ಫಲದಿಂದ ಅನೇಕ ಮಹತ್ತಾದ ಕಾರ್ಯವನ್ನೆಸಗುವೆ. ಅನಂತರವೇ ನೀನು ಎಲ್ಲಿಂದ ಬಂದಿರುವೆಯೋ ಅಲ್ಲಿಗೆ ಮರಳುವೆ’ ಎಂದು ತಿಳಿಸಿದರು. ಚಿಕಾಗೋದಲ್ಲಿ ವಿವೇಕಾನಂದರು
ಪರಿವ್ರಾಜಕರಾಗಿ ದೇಶಪರ್ಯಟನೆ ಮಾಡಿ 1893ರಲ್ಲಿ ನಡೆಯಲಿರುವ ಸರ್ವಧರ್ಮಸಮ್ಮೇಳನದಲ್ಲಿ ಭಾಗವಹಿಸಲು ತಯಾರಾದ ಸ್ವಾಮಿ ವಿವೇಕಾನಂದರು ಮೈಸೂರು ಮಹಾರಾಜರು, ಹೈದರಾಬಾದಿನ ನಿಜಾಮರು ಕೊಟ್ಟ ತಲಾ ಒಂದು ಸಾವಿರ ರೂಪಾಯಿಗಳು, ಮತ್ತು ತಮಿಳುನಾಡಿನ ಯುವ ಸಂಘದವರು ಸಂಗ್ರಹಿಸಿದ ಹಣದ ಸಹಾಯದಿಂದ ಚೀನ, ಜಪಾನ್ ಮಾರ್ಗವಾಗಿ ಹಡಗಿನಲ್ಲಿ ಪ್ರವಾಸ ಮಾಡಿ ಕೆನಡಾ ತಲುಪಿ 1893ರ ಜುಲೈ ತಿಂಗಳಲ್ಲಿ ಅಮೆರಿಕದ ಚಿಕಾಗೋ (ಈಗಿನ ಶಿಕಾಗೊ) ತಲುಪಿದಾಗ ಅವರಿಗೆ ಎರಡು ಸಮಸ್ಯೆಗಳು ಎದುರಾದವು. ಸಮ್ಮೇಳನದ ದಿನಾಂಕ ಸೆಪ್ಟಂಬರ್ ಆದಿಯಲ್ಲಿ! ಅಂದರೆ ಅವರು ಸ್ವಲ್ಪ ಬೇಗನೆ ಬಂದ ಹಾಗಾಯಿತು. ಮುಂದೆ ಅವರಿಗೆ ಹಣದ ಅಡಚಣೆಯಾಗಲಿತ್ತು.
1893ರ ಸೆ. 11ರಂದು ಹತ್ತು ಗಂಟೆಗೆ ಸರಿಯಾಗಿ ಗಂಟೆ ಹತ್ತು ಸಲ ಮೊಳಗಿತು, ವೇದಿಕೆಯ ಮೇಲೆ ಮಂಡಿಸಿದ್ದರ ಹತ್ತು ಧರ್ಮದ ಪ್ರತಿನಿಧಿಗಳಿಗಾಗಿ. ಕಾಲಾಸಂಸ್ಥೆಯ ವಿಶಾಲ ಸಭಾಂಗಣದಲ್ಲಿ ಸುಮಾರು ಆರು ಸಹಸ್ರ ಜನರು ಉಪಸ್ಥಿತರಾಗಿದ್ದರು. ಉತ್ತಮ ಚಿಂತಕರು ತುಂಬಿರುವ ಅಷ್ಟು ದೊಡ್ಡ ಸಭಾಭವನದಲ್ಲಿ, ಸ್ವಾಮಿಗಳು ಎಂದೂ ಉಪನ್ಯಾಸವನ್ನು ನೀಡಿರಲಿಲ್ಲ. ತಮ್ಮ ಸರದಿ ಬಂದಾಗ ಅವರಿಗೆ ಅಂಜಿಕೆಯ ಅನುಭವವಾಯಿತು. ಜ್ಞಾನದ ಅಧಿದೇವತೆ ಸರಸ್ವತಿಯನ್ನು ಮನದಲ್ಲೇ ಧ್ಯಾನಿಸಿ, ಅನಂತರ “ಅಮೆರಿಕದ ಸಹೋದರ ಸಹೋದರಿಯರೇ !’ ಎಂದು ಸಭೆಯನ್ನು ಕುರಿತು ಸಂಭೋದಿಸಿದ ಕ್ಷಣವೇ ಅಸಂಖ್ಯ ಜನರಿಂದ ಎರಡು ನಿಮಿಷಗಳ ಕಾಲದವರೆಗೂ ಅಭಿನಂದನೆಯ ಕರತಾಡನದ ಮೊಳಗು ಕೇಳಿ ಬಂತು. ಅಲ್ಲಿ ನೆರೆದ ಸಹಸ್ರಾರು ಮಂದಿಯೂ ಅರಿಯದೇ ಎದ್ದುನಿಂತು ಗೌರವವನ್ನು ಅರ್ಪಿಸಿದರು. ಕಿತ್ತಳೆ ಬಣ್ಣದ ನೀಳ ಉಡುಪಿನ, ತೇಜೋಮಯ ಮುಖವುಳ್ಳ ಓರ್ವ ಸಾಮಾನ್ಯ ಸಂನ್ಯಾಸಿ ಕ್ಷಣಾರ್ಧದಲ್ಲಿಯೇ ಶ್ರೇಷ್ಠ ವ್ಯಕ್ತಿ ಆದ ಗಳಿಗೆ ಅದು! ಆ ಘಟನೆಯನ್ನು ಬಾಲ್ಯದಲ್ಲಿ ಕೇಳಿದಾಗಿನಿಂದ ಒಂದು ದಿನ ಅಲ್ಲಿಗೆ ಭೇಟಿ ಕೊಡುವ ದಿನದ ಕನಸು ಕಾಣುತ್ತಿದ್ದೆ. ಅದು ಫಲಿಸಿದ್ದು ಕೆಲವು ವರ್ಷಗಳ ಹಿಂದೆ. ಆ ಆರ್ಟ್ ಇನ್‌ಸ್ಟಿಟ್ಯೂಟ್‌ಗೆ ಭೇಟಿಕೊಡಲೆಂದೇ ನಾನು ಚಿಕಾಗೋದ ಮಿಚಿಗನ್ ಅವೆನ್ಯೂಗೆ ಹೋದೆ. ಈಗ ಅದಕ್ಕೆ ಅವರ ಗೌರವಾರ್ಥಕವಾಗಿ “ಆನರರಿ ವಿವೇಕಾನಂದಾ ವೇ’ ಅಂತ ಹೆಸರಿಟ್ಟಿದ್ದಾರೆ. ಅದರ ಫೋಟೊ, ವೀಡಿಯೋ ಎಲ್ಲ ಮೂಡಿಸಿದ್ದಾಯಿತು. ಭವನದ ಒಳಗೆ ಪ್ರವೇಶಿಸಿ ವಿವೇಕಾನಂದರು ಕುಳಿತಿದ್ದ ವೇದಿಕೆ, ಮತ್ತು ನಿಂತು ಮಾಡಿದ ಸ್ಥಳವನ್ನು ಆ ಭವನದ ಮ್ಯಾನೇಜರ್ ತೋರಿಸಿದಳು. ಅಲ್ಲಿ ನಿಂತಾಗ ಆದ ರೋಮಾಂಚಕ ಅನುಭವವನ್ನು ನೆನೆದರೆ ಈಗಲೂ ಮೈನವಿರೇಳುತ್ತದೆ! ಆಗಿನ ಸಭಾಭವನ ಈಗ ಬದಲಾಗಿದೆ, ಕೋಲಂಬಸ್ ಹಾಲ್ ಈಗ ಫುಲ್ಲರ್ಟನ್ ಹಾಲ್ ಆಗಿದೆ. ಅಲ್ಲೊಂದು ಪ್ರದರ್ಶನಾಲಯವೂ ಇದೆ. ನ್ಯೂಯಾರ್ಕ್‌ನಲ್ಲಾದ ಸೆಪ್ಟಂಬರ್ 11 ಭಯೋತ್ಪಾದಕ ಘಟನೆಯ ನೆನಪಿನಲ್ಲಿ ಜಿತೀಷ್ ಕಲ್ಲಾಟ್ ಎನ್ನುವ ಭಾರತೀಯನ “ಕಲಾಕೃತಿ’ ಪಬ್ಲಿಕ್ ನೋಟಿಸ್ 3 ಎನ್ನುವ “ಶಿಲ್ಪ’ವನ್ನು 2011ರಿಂದ ಪ್ರದರ್ಶಿಸಲಾಗುತ್ತಿದೆ. ಅಲ್ಲಿಂದ ವೇದಾಂತ ಸೊಸೈಟಿಗೆ ಹೋಗಿ ಆ ಭಾಷಣದ ಆಡಿಯೋ ರೆಕಾರ್ಡಿಂಗ್ ಸಿಗುತ್ತದೆಯೋ ಅಂತ ಕೇಳಿದೆ. ಇದ್ದ ಒಂದು ಗ್ರಾಮಫೋನ್ ತಟ್ಟೆ ಸಹ ತುಂಡಾಗಿತ್ತು ಎಂದಾಗ ನಿರಾಶೆಯಾಯಿತು. ಆದರೂ ಇನ್ನೂ ನನ್ನ ಕಿವಿಯಲ್ಲಿ ಅನುರಣಿಸುತ್ತಿರುವುದು ಆರಂಭದ ಆ ಐದು ಶಬ್ದಗಳು: ” ಸಿಸ್ಟರ್ಸ್ ಆ್ಯಂಡ್ ಬ್ರದರ್ಸ್ ಆಫ್ ಅಮೆರಿಕ!’ *ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್