Advertisement

ಯಾರೂ ಅರಿಯದ ವೀರ

07:41 PM Sep 14, 2019 | mahesh |

(ಈ ಕತೆಯಲ್ಲಿ ವರ್ಷಕಾಲದ ಭೀಕರ ಚಿತ್ರಣವಿದೆ. ಇದು ಕತೆಯ ಪೂರ್ಣಪಾಠವಲ್ಲ.)

Advertisement

ಸಿಡಿಲು ಗುಡುಗು, ಮಿಂಚು, ಗಾಳಿ, ಮಳೆ- ಇವುಗಳಿಂದ ರಾತ್ರಿ ಹುಚ್ಚೆದ್ದ ಭೈರವಿಯಾಗಿತ್ತು. ಮನೆಯಲ್ಲಿ ಎಲ್ಲರೂ ಮಲಗಿದ್ದರು. ಲಿಂಗ, ಸುಬ್ಬಣ್ಣ ಗೌಡರು ಇಬ್ಬರೇ ಎಚ್ಚರವಾಗಿ ಜಗಲಿಯ ಮೇಲೆ ಕುಳಿತಿದ್ದರು. ಇಬ್ಬರೂ ಆಗಾಗ್ಗೆ ಹೊಳೆ ನೋಡಿಕೊಂಡು ಬರುತ್ತಿದ್ದರು. ಕೆರೆಯ ನೀರು ಬೇಗ ಬೇಗ ಏರುತ್ತಿತ್ತು.

“”ಲಿಂಗಾ, ದೋಣಿ ಎಲ್ಲಿ ಕಟ್ಟಿದ್ದೀಯೆ? ಮನೆ ಬಿಡಬೇಕಾಗಿ ಬರಬಹುದು” ಲಿಂಗ ಸ್ವಲ್ಪ ಗಾಬರಿಯಾಗಿ “”ಹುಳಿಮಾವಿನ ಮರದ ಬೇರಿಗೆ ಕಟ್ಟಿದ್ದೆ! ನೀರೇರಿತೊ ಏನೋ? ಅಲ್ಲಿಗೆ ಹೋಗುವುದಕ್ಕೆ ಆಗುತ್ತೋ ಇಲ್ಲವೋ?” ಎಂದು ಹೇಳುತ್ತಾ ಲಾಟೀನು ತೆಗೆದುಕೊಂಡು ಹೊರಗೆ ಓಡಿದ. ಸುಬ್ಬಣ್ಣ ಗೌಡರೂ ಅವನ ಹಿಂದೆಯೇ ಓಡಿದರು. ಹೋಗಿ ನೋಡಲು ಲಿಂಗ ಊಹಿಸಿದಂತೆಯೇ ಆಗಿತ್ತು. ನೆರೆ ಮಾವಿನ ಮರದ ಬುಡವನ್ನು ಮುಚ್ಚಿಬಿಟ್ಟಿತ್ತು. ಇಬ್ಬರಿಗೂ ಸ್ವಲ್ಪ ಹೊತ್ತು ಏನೂ ತೋರಲಿಲ್ಲ. ಸುಮ್ಮನೆ ಹೊಳೆಯ ಕಡೆ ನೋಡುತ್ತ ನಿಂತರು. ಅಷ್ಟರಲ್ಲಿಯೇ ಮನೆಯ ಹಿಂದುಗಡೆ ಏನೋ ಬಿದ್ದಹಾಗೆ ದೊಡ್ಡ ಶಬ್ದವಾಯಿತು. ಇಬ್ಬರೂ ಅಲ್ಲಿಗೆ ಓಡಿದರು. ಹಿತ್ತಲಕಡೆ ಗೋಡೆ ಬಿದ್ದು ನೀರು ಅಂಗಳಕ್ಕೆ ನುಗ್ಗುತ್ತಿತ್ತು. ಇನ್ನು ಕಾಲಹರಣ ಮಾಡಿದರೆ ಸರ್ವನಾಶವೆಂದು ಗೌಡರಿಗೆ ತೋರಿತು.

ಕೋಣೆ ಕೋಣೆಗೆ ನುಗ್ಗಿ ಮನೆಯವರನ್ನೆಲ್ಲ ಎಬ್ಬಿಸಿದರು. ಅವರೆಲ್ಲ ಅರೆನಿದ್ದೆಯಲ್ಲಿ ಗಾಬರಿಯಿಂದ ಜಗಲಿಗೆ ನುಗ್ಗಿದರು. ಗೌಡರು ಅವರಿಗೆ ಗಾಬರಿ ಪಡಬೇಡಿರೆಂದು ಸಮಾಧಾನ ಹೇಳಿ ಲಿಂಗನಿಗಾಗಿ ಸುತ್ತಲೂ ನೋಡಿದರು. ಲಿಂಗ ಅಲ್ಲಿರಲಿಲ್ಲ. “”ಲಿಂಗಾ! ಲಿಂಗಾ!” ಎಂದು ಕೂಗಿದರು. ಉತ್ತರ ಬರಲಿಲ್ಲ. ಅಷ್ಟು ಹೊತ್ತಿಗೆ ಪ್ರಚಂಡವಾಗಿ ಗಾಳಿ ಬೀಸತೊಡಗಿತು. ಹುಚ್ಚೆದ್ದು ಸರಿ ಸುರಿಯಿತು. ಹೊರ ಅಂಗಳದಲ್ಲಿದ್ದ ತೆಂಗಿನ ಮರ ಮುರಿದ ಮನೆಗೆ ಹೊದಿಸಿದ ಸತುವಿನ ತಗಡುಗಳ ಮೇಲೆ ಬಿದ್ದು, ಬಹುದೊಡ್ಡ ಶಬ್ದವಾಯಿತು. ತಿಮ್ಮು, ಸೀತೆ, ನಾಗ ಮೂವರೂ ಕಿಟ್ಟನೆ ಕಿರುಚಿಕೊಂಡರು. ನಾಗಮ್ಮನವರೂ “”ದೇವರೇ” ಎನ್ನುತ್ತಿದ್ದರು. ಗೌಡರು ಅವರಿಗೆಲ್ಲಾ ಧೈರ್ಯ ಹೇಳಿ, ಲಿಂಗನನ್ನು ಹುಡುಕಿಕೊಂಡು ಕರೆಯುತ್ತ ಓಡಿದರು. ಹೋಗಿ ನೋಡಲು ಲಿಂಗ ಮಾವಿನ ಬುಡ ಸೇರಿ ದೋಣಿ ಬಿಚ್ಚುತ್ತಿದ್ದ. ಮನೆಯ ಬೆಳಕಂಡಿಗೆ ಒಂದು ಕತ್ತದ ಮಿಣಿ ಕಟ್ಟಿ , ಅದನ್ನು ಹಿಡಿದು ಅದರ ಸಹಾಯದಿಂದ ಮಾವಿನ ಮರದ ಬುಡಕ್ಕೆ ಸೇರಿದ್ದ. ತುಸು ಹೊತ್ತಿನಲ್ಲಿಯೇ ದೋಣಿ ಬಿಚ್ಚಿ , ಅದರೊಳಗೆ ದಾಟಿದ. ಬೆಳಕಂಡಿಗೆ ಬಿಗಿದ ಹುರಿಯನ್ನು ಮಾತ್ರ ಕೈಯಲ್ಲಿಯೇ ಹಿಡಿದುಕೊಂಡಿದ್ದ.

ಗಾಳಿಯ ಅಬ್ಬರದಲ್ಲಿ ಲಿಂಗ ಗೌಡರನ್ನು ಕುರಿತು “”ಅಯ್ನಾ ಹಗ್ಗ ಹಿಡಿದು ಎಳೆಯಿರಿ” ಎಂದು ಗಟ್ಟಿಯಾಗಿ ಕೂಗಿದ. ಗೌಡರೂ ಹಾಗೆಯೇ ಮಾಡಿದರು. ದೋಣಿ ದಡ ಸೇರಿತು. ಅಷ್ಟರಲ್ಲಿ ಒಳಂಗಳದಿಂದ ಏಳೆಂಟು ಜನ ಕಿಟ್ಟನೆ ಚೀತ್ಕರಿಸಿದಂತಾಯಿತು.

Advertisement

ಗೌಡರು “”ಲಿಂಗಾ, ದೋಣಿ ಬಾಗಿಲಿಗೆ ತೆಗೆದುಕೊಂಡು ಬಾ! ಬೇಗ!” ಎಂದು ಹೇಳಿ ಒಳಗೆ ನುಗ್ಗಿದರು. ಹೆಬ್ಟಾಗಿಲು ದಾಟುವುದರೊಳಗಾಗಿಯೇ ಕೆಲಸದ ಹೆಂಗಸು ಸೋಮಕ್ಕ ಬಾಯಿ ಕಳೆದುಕೊಂಡು ಕಣRಣ್ಣು ಬಿಟ್ಟುಕೊಂಡು ಏದುತ್ತಾ ಓಡಿಬಂದಳು.

ಗೌಡರನ್ನು ಕಂಡೊಡನೆ ಸೋಮಕ್ಕ ಕೂಗಿದಳು: “”ಉಪ್ಪರಿಗೆ ಗೋಡೆ ಬಿದ್ದು ಹೋಯ್ತು! ಜಗಲಿಗೆ ನೀರೇರ್ತಾ ಇದೆ.”

ಗೌಡರು ಜಗಲಿಗೆ ಬಂದು “”ನೀವೆಲ್ಲಾ ಹೆಬ್ಟಾಗಿಲಿಗೆ ಓಡಿ! ಬೇಗ! ಲಿಂಗ ದೋಣಿ ತರ್ತಾನೆ! ಏ, ನಾಗಾ, ನೀನಿಲ್ಲಿ ಬಾರೊ” ಎಂದರು. ನಾಗ ಗೌಡರ ಸಂಗಡ ಹೋದ.

ನಾಗಮ್ಮ, ತಿಮ್ಮು , ಸೀತೆ, ಲೋಕಮ್ಮ, ಸೋಮಕ್ಕನ ಮಗಳು ದಾಸಮ್ಮ ಎಲ್ಲರೂ ಹೆಬ್ಟಾಗಿಲಿಗೆ ಓಡಿದರು. ಸೋಮಕ್ಕ ಮಾತ್ರ ಮಾಣಿಗೆ ಕೋಣೆಯಲ್ಲಿ ತಾನು ಇಟ್ಟಿದ್ದ “ಪುಟ್ಟ ಗಂಟು’ ತರಲು ಓಡಿದವಳು ಹಿಂದಕ್ಕೆ ಬರಲೇ ಇಲ್ಲ. ಗೌಡರು ಜಗಲಿಯ ಮೇಲಿದ್ದ ತಮ್ಮ ದೊಡ್ಡ ಬೀರಿನ ಬಾಗಿಲು ತೆಗೆದು, ಎರಡು ಪೆಟ್ಟಿಗೆಗಳನ್ನು ಈಚೆಗೆ ತೆಗೆದಿಟ್ಟು , ಬೀರಿನ ಬಾಗಿಲು ಹಾಕಿ ಬೀಗ ಹಾಕಿದರು. ಅಲ್ಲಿದ್ದ ಕಬ್ಬಿಣದ ಸಂದುಕದ ಬಾಗಿಲನ್ನೂ ತೆರೆದರು. ಆದರೆ, ಮತ್ತೇನನ್ನೋ ಯೋಚಿಸಿ ಅದನ್ನು ಪುನಃ ಹಾಗೆಯೇ ಮುಚ್ಚಿ ಬೀಗ ಹಾಕಿದರು.

“”ನಾಗಾ, ಈ ಪೆಟ್ಟಿಗೆ ಹೊತ್ತುಕೊಳ್ಳೊ” ಎಂದರು. ನಾಗ ಬಂದು ಹೊತ್ತುಕೊಂಡ; ಗೌಡರು ಮತ್ತೂಂದು ಹೊತ್ತುಕೊಂಡರು. ಲಿಂಗ ಎಲ್ಲರನ್ನೂ ದೋಣಿಗೆ ಹತ್ತಿಸಿ ಅದರ ತುದಿ ಹಿಡಿದುಕೊಂಡು ನಿಂತಿದ್ದ. ಗೌಡರು ಓಡಿಬಂದು ಎರಡು ಪೆಟ್ಟಿಗೆಗಳನ್ನೂ ದೋಣಿಯೊಳಗಿಟ್ಟು , ನಾಗನನ್ನು ಎತ್ತಿ ದೋಣಿಗೆ ಹಾಕಿ, ತಾವೂ ಒಳಗೆ ದಾಟಿ, ಲಿಂಗನಿಗೆ ದೋಣಿ ಹತ್ತುವಂತೆ ಹೇಳಿ, ಒಂದು ಹುಟ್ಟು ತೆಗೆದುಕೊಂಡು ದೋಣಿಯ ತುದಿಯಲ್ಲಿ ಕುಳಿತರು. ಅಷ್ಟು ಹೊತ್ತಿಗೆ ಸೀತೆ ನಾಗಮ್ಮನವರನ್ನು ಕುರಿತು “”ಅವ್ವಾ ಸೋಮಕ್ಕೆಲ್ಲಿ?” ಎಂದು ಕೇಳಿದಳು. ಆಗಲೇ ಮನೆ ಮುರಿದು ಬಿದ್ದಂತಾಗಿ ಏನೋ ಒಂದು ಚೀತ್ಕಾರದ ಧ್ವನಿಯೂ ಕೇಳಿಬಂದಿತು. ಸೋಮಕ್ಕನ ಆಸೆಯನ್ನು ಅವಳ ಮಗಳು ದಾಸಮ್ಮ ಕೂಡ ಬಿಟ್ಟಳು.

ದೋಣಿ ಬಹಳ ಸಣ್ಣದು. ಐದಾರು ಜನರು ಕೂರುವಂತಾದ್ದು. ತುಂಬಿದ ನೆರೆಯಲ್ಲಂತೂ ಇಬ್ಬರೇ ಸರಿ. ಆಗಲೇ ಅದರೊಳಗೆ ಏಳು ಜನರಿದ್ದರು. ಸಾಲದಿದ್ದಕ್ಕೆ ಜೊತೆಗೆ ಎರಡು ಪೆಟ್ಟಿಗೆ ಬೇರೆ; ಲಿಂಗನಿಗೆ ಜಾಗವೇ ತೋರದೆ, ಬಗೆಯೇ ಹರಿಯದೆ, ಸುಮ್ಮನೆ ನಿಂತು ದೋಣಿ ಸುರಕ್ಷಿತವಾಗಿ ದಡ ಸೇರುವುದೇ ಎಂದು ಚಿಂತಿಸುತ್ತಿದ್ದ.

ಲಿಂಗ ತಡಮಾಡಿದ್ದನ್ನು ಕಂಡು ಗೌಡರು “”ಲಿಂಗಾ ಹೊತ್ತೇಕೊ? ಹತ್ತೋ!” ಎಂದು ಕಳವಳದಿಂದ ಕೂಗಿ ಗದರಿಸಿದರು.

ಲಿಂಗ “”ಅಯ್ನಾ, ಜಾಗವೇ ಇಲ್ಲವಲ್ಲ. ಈಗಾಗಲೇ ದೋಣಿಗೆ ಭಾರ ಹೆಚ್ಚಾಗಿದೆ. ನಾನೂ ಕೂತರೆ ದೋಣಿ ದಡ ಕಾಣುವ ಬಗೆ?” ಎಂದ.
“”ಹಾಗಾದರೆ ಈಗ ಮಾಡೋದೇನೋ? ಏನಾದರೂ ಆಗಲಿ ಹತ್ತು. ದೇವರು ಮಾಡಿಸಿದ್ದಾಯಿತು” ಎನ್ನುತ್ತಾ ಗೌಡರು ನದಿಯ ಕಡೆ ನೋಡಿದರು. ಅವರ ಮೈ ಸ್ವಲ್ಪ ನಡುಗಿತು.
ಲಿಂಗ “”ಹಾಗಾದರೆ ಅಯ್ನಾ, ಒಂದು ಕೆಲಸ ಮಾಡಿ, ನೀವೆಲ್ಲಾ ದಡ ಸೇರಿದ ಮೇಲೆ ದೋಣಿ ಕೊಟ್ಟು ಯಾರನ್ನಾದರೂ ಕಳ್ಸಿ. ಅಲ್ಲೀ ತನಕಾ ಇಲ್ಲೇ ಇರ್ತೇನೆ. ನಿಮಗೇನೂ ಭಯಬೇಡ” ಅಂದ.

ಗೌಡರಿಗೆ ಸಿಟ್ಟು ಬಂತು. ಲಿಂಗನಿಗೆ ದೋಣಿ ಹತ್ತುವಂತೆ ಗಟ್ಟಿಯಾಗಿ ಕೂಗಿ ಅಪ್ಪಣೆ ಮಾಡಿದರು. ಲಿಂಗ ಮರುಮಾತಾಡದೆ ದೋಣಿಯ ಮತ್ತೂಂದು ತುದಿಯಲ್ಲಿ ಹುಟ್ಟು ಹಿಡಿದು ಕುಳಿತ. ಗೌಡರು ತಮ್ಮ ತೋಟಾಕೋವಿಯಿಂದ ಹತ್ತು-ಹನ್ನೆರಡು ಗುಂಡು ಹಾರಿಸಿದರು.

ದೋಣಿ ಹೊರಟಿತು. ಆ ಗಾಳಿ, ಆ ಮಳೆ, ಆ ಕತ್ತಲು ಇವುಗಳ ನಡುವೆ ಬಂದೂಕಿನ “ಢಂ ಢಂ’ ಶಬ್ದಗಳು ಗಂಭೀರವಾಗಿ ಹೊರಟು ಮಲೆನಾಡಿನ ಬೆಟ್ಟಗುಡ್ಡಗಳಿಂದ ಗಂಭೀರವಾಗಿ ಮರುದನಿಯಾದುವು. ದೂರದ ಹಳ್ಳಿಗಳಲ್ಲಿದ್ದ ಜನರು ಎಚ್ಚೆತ್ತು ಗುಂಡಿನ ಶಬ್ದಗಳನ್ನು ಕೇಳಿ ಬೆರಗಾದರು.
ಶಿವನೂರಿಗೆ ಎರಡು ಮೈಲಿ ದೂರದಲ್ಲಿದ್ದ ನುಗ್ಗೇಹಳ್ಳಿಯಲ್ಲಿ ಮನೆಯ ಜಗಲಿಯ ಮೇಲೆ ಮಲಗಿದ್ದ ರಾಮೇಗೌಡರಿಗೂ, ಅವರ ತಮ್ಮ ಸಿದ್ಧೇಗೌಡರಿಗೂ ಈಡಿನ ಶಬ್ದ ಕೇಲಿ ಎಚ್ಚರವಾಗಿ ಬೆರಗಿನಿಂದ ಎದ್ದು ಕುಳಿತರು.

ಸಿದ್ದೇಗೌಡರು ರಾಮೇಗೌಡರನ್ನು ಕುರಿತು, “”ಅಣ್ಣಾ , ಅದೇನೋ ಈಡು ಕೇಳಿಸಿದುವಲ್ಲ !” ಎಂದರು.
ರಾಮೇಗೌಡರು “”ಎತ್ತ ಮುಖದಿಂದ ಕೇಳಿಸಿದುವೋ” ಎಂದರು.

“”ಕೆಮ್ಮಣ್ಣುಬ್ಬಿನ ಕಡೆಯಿಂದ ಅಂತ ಕಾಣ್ತದಪ್ಪಾ”
“”ಅಲ್ಲಾ, ನೋಡು, ನಂಗೇಕೋ ಸ್ವಲ್ಪ ಸಂಶಯಾನೆ. ಶಿವನೂರಿನ ಕಡೆಯಿಂದ ಕೇಳಿಸಿದ ಹಾಂಗಾಯ್ತು”.
“”ಎಲ್ಲಾದರೂ ಹೊಳೇಗಿಳೇ ಏರ್ತೇನೋ?”
“”ಏನೋ ಸಂಗತಿ ಇರಬೇಕಪ್ಪಾ , ಏನಾದ್ರಾಗಲಿ. ನಾಲ್ಕೈದು ಜನ ಕರಕೊಂಡು ಹೋಗೋಣ”.
ಸಿದ್ಧೇಗೌಡರು ಅವಸರದಿಂದ ಲಾಟೀನು ಹೊತ್ತಿಸಿದರು. ರಾಮೇಗೌಡರು ಮೂಲೆ ಹಿಡಿದು ಮಲಗಿ ಕೊರೆಯುತ್ತಿದ್ದ ರಂಗನನ್ನು ಎಬ್ಬಿಸಿ, ನಾಲ್ಕೈದು ಜನ ಗಟ್ಟದ ಕೆಳಗಿನವರನ್ನು ಕರೆತರುವಂತೆ ಹೇಳಿದರು.
.
.
“”ರಾಮಾ! ರಾಮಾ! ಎಂದು ಹೆಂಗಸರು ಮಕ್ಕಳ ಗೋಳಾಟವು ಪ್ರವಾಹದ ಅಲೆಗಳ ಸೆಳೆವಿನ ನಡುವೆ ಸಿಕ್ಕಿ ಏಳುತ್ತ ಬೀಳುತ್ತ ತೇಲುತ್ತ ದೋಣಿಯಿಂದ ಹೊರಟು ಗಾಳಿಯ ಭೋರಾಟದಲ್ಲಿ ಸೇರುತ್ತಿತ್ತು. ಸುಬ್ಬಣ್ಣ ಗೌಡರು, ಲಿಂಗ ಇಬ್ಬರೂ ಎದೆಗೆಡದೆ ಹುಟ್ಟು ಹಾಕುತ್ತಿದ್ದರು. ದೋಣಿಯ ನಡುವೆ ಇದ್ದ ಲಾಟೀನಿನ ಬೆಳಕು, ಕಗ್ಗತ್ತಲೆಗೆ ಹೆದರಿ ಮೂಲೆ ಸೇರಿತೋ ಏನೋ ಎನ್ನುವ ಹಾಗೆ, ತನ್ನ ಸುತ್ತಲೂ ಒಂದಡಿಯ ಜಾಗವನ್ನು ಮಾತ್ರ ಬೆಳಗುತ್ತಿದ್ದಿತು. ಭಾರದಿಂದ ದೋಣಿ ಈಗಲೋ ಆಗಲೋ ಮುಳುಗುವಂತೆ ತೋರುತ್ತಿತ್ತು.

ಗೌಡರು ದೋಣಿಯಲ್ಲಿದ್ದ ಎರಡು ಬೆಲೆಯುಳ್ಳ ಪೆಟ್ಟಿಗೆಗಳನ್ನೂ ತೆಗೆದು ಹೊಳೆಗೆ ಎಸೆದರು. ಆದರೂ ಭಾರ ಕಡಿಮೆಯಾಗಲಿಲ್ಲ. ಎಷ್ಟು ಹೇಳಿದರೂ ಕೇಳದೆ ಹೆಂಗಸರು, ಮಕ್ಕಳು “”ರಾಮ, ರಾಮ” ಎಂದು ಕೂಗಿ ಗೋಳಾಡುವುದನ್ನು ಬಿಡಲೇ ಇಲ್ಲ. ದಿಕ್ಕು ಕೆಟ್ಟ ಹುಚ್ಚನಂತೆ ದೋಣಿ ಅಲೆಯತೊಡಗಿತು. ಒಂದು ಸಾರಿ ಅದು ಮುಳುಗುವಂತಾಗಿ ಸ್ವಲ್ಪ ನೀರೂ ಒಳಗೆ ನುಗ್ಗಿತು. ಮತ್ತೆ “”ರಾಮಾ, ರಾಮಾ” ಎಂದು ಬೊಬ್ಬೆ ಹಾಕಿದರು.

ಹುಟ್ಟು ಹಾಕುತ್ತಲಿದ್ದ ಲಿಂಗನು ಹೆಂಗಸರು ಮಕ್ಕಳ ಗೋಳನ್ನು ಕಂಡು ಎದೆಮರುಗಿದನು. ದೋಣಿ ಭಾರದಿಂದ ಮುಳುಗುವುದು ಖಂಡಿತವೆಂದೇ ಅವನು ನಿಶ್ಚಯಿಸಿದನು. ಭಾರವನ್ನು ಕಡಿಮೆಮಾಡುವ ದಾರಿಯನ್ನು ಯೋಚಿಸಿದನು; ಬಗೆಯೇ ಹರಿಯಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ ಇದ್ದಕ್ಕಿದ್ದ ಹಾಗೆ ಅವನ ಮುಖ ಗಂಭೀರವಾಯಿತು. ಹುಟ್ಟು ಹಾಕುವುದನ್ನು ನಿಲ್ಲಿಸಿ. ಸುತ್ತಲೂ ನೋಡಿದ. ಮಳೆಯ ಭರದಲ್ಲಿ ಒಬ್ಬರಿಗೊಬ್ಬರು ಕಾಣುತ್ತಲೇ ಇರಲಿಲ್ಲ. ಕಾಣುವ ಹಾಗಿದ್ದರೂ ಯಾರೂ ನೋಡುವ ಸ್ಥಿತಿಯಲ್ಲಿರಲಿಲ್ಲ. ತಾನೂ ಹೊಳೆಗೆ ಹಾರಿದರೆ ಭಾರ ಕಡಿಮೆಯಾಗಿ, ದೋಣಿ ಸುರಕ್ಷಿತವಾಗಿ ದಡಕ್ಕೆ ಹೋಗುವುದೆಂದು ಹಾರೈಸಿದ. ತನ್ನನ್ನು ಲೋಕವೇ ಕಳ್ಳನೆಂದು ದೂರಮಾಡಿದಾಗ, ಅನ್ನ ಬಟ್ಟೆ ಕೊಟ್ಟು ಸಾಕಿದವರ ಬಳಗವನ್ನು ಹೇಗಾದರೂ ಉಳುಹಬೇಕೆಂದು ಮಹಾಯೋಚನೆ ಮಾಡಿದ. ಹುಟ್ಟನ್ನು ದೋಣಿಯ ಒಳಗಿಟ್ಟು , ಹೊಳೆಗೆ ಹಾರಲು ಸಿದ್ಧನಾದ.

ಇನ್ನೇನು ಹಾರಬೇಕು! ಅಷ್ಟರಲ್ಲಿಯೇ ತನ್ನ ಮಗನ ನೆನಪಾಯಿತು. ಎದೆ ನಡುಗಿ ಹಿಂಜರಿಯಿತು. ಹಾಗೆಯೇ ನಿಂತ.
ಅಷ್ಟರಲ್ಲಿಯೇ ದೋಣಿ ಮುಳುಗುವಂತಾಗಿ ತನ್ನ ಮಗನ ನೆನಪಾಯಿತು. ಎದೆ ನಡುಗಿ ಹಿಂಜರಿಯಿತು. ಹಾಗೆಯೇ ನಿಂತ.

ಅಷ್ಟರಲ್ಲಿಯೇ ದೋಣಿ ಮುಳುಗುವಂತಾಗಿ, “”ರಾಮ! ರಾಮ!! ಅಯ್ಯೋ!” ಎಂದು ಕೂಗಿಕೊಂಡರು.
ಲಿಂಗ ಬಿಸುಸುಯ್ದ. ಎಲ್ಲರೂ ಇದ್ದಂತೆಯೇ ದೋಣಿ ಸೇರಬಾರದೇಕೆ? ಎಂದು ಯೋಚಿಸಿದ. ಮತ್ತೆ ಅದು ಆತ್ಮವಂಚನೆಯ ಆಲೋಚನೆ ಎಂದು ತಿಳಿದ.
“”ಅಯ್ಯೋ!” ಎಂದು ಮತ್ತೆ ರೋದಿಸಿದರು.

ಲಿಂಗ ಹಿಂದು ಮುಂದು ನೋಡದೆ “”ರಾಮ! ರಾಮ!!” ಎಂದು ಕೂಗಿ ಹೊಳೆಗೆ ಹಾರಿದ.
ಅವನು ಹಾರಿದ್ದು ಆ ಕಗ್ಗತ್ತಲಲ್ಲಿ, ಆ ಗಾಳಿಮಳೆ ಹೊಳೆಗಳ ಭೋರಾಟದಲ್ಲಿ. ಯಾರಿಗೂ ತಿಳಿಯಲಿಲ್ಲ. ದೋಣಿಯ ಭಾರ ಕಡಿಮೆಯಾಗಿ ಮೊದಲಿಗಿಂತಲೂ ಸ್ವಲ್ಪ ಸರಾಗವಾಗಿ ಹೋಗತೊಡಗಿತು.
ಗೌಡರು, “”ಲಿಂಗಾ, ದೋಣಿ ಸ್ವಲ್ಪ ಸರಾಗವಾಗಿ ಹೋಗುತ್ತಿದೆಯೋ, ಭಗವಂತನ ದಯೆಯಿಂದ” ಎಂದರು. ಲಿಂಗನ ದಯೆಯೂ ಜೊತೆಗೆ ಸೇರಿತ್ತೆಂದು ಅವರಿಗೆ ತಿಳಿದಿರಲಿಲ್ಲ.

ಅಷ್ಟರಲ್ಲಿಯೇ ಹೆಂಗಸರು ಮಕ್ಕಳೆಲ್ಲ “”ದೀಪ! ದೀಪ!” ಎಂದು ಕೂಗಿದರು. ಸುಬ್ಬಣ್ಣಗೌಡರು ತಿರುಗಿ ನೋಡಲು, ಬಳಿಯಾದ ಹೊಳೆಯ ದಡದಲ್ಲಿ ಐದಾರು ದೀಪಗಳು ಕಂಡುಬಂದುವು. ದೀಪದ ಬೆಳಕಿನಲ್ಲಿ ಹತ್ತು-ಹದಿನೈದು ಜನರು ಸುಳಿದಾಡುತ್ತಿದ್ದುದನ್ನೂ ಕಂಡರು. ಅಂಚಿನಿಂದ ನಾಲ್ಕೈದು ಬಂದೂಕಿನ ಶಬ್ದಗಳೂ ಕೇಳಿಸಿದುವು. ಮೆಲ್ಲಮೆಲ್ಲನೆ ತೇಲುತ್ತಾ ದೋಣಿ ದಡ ಮುಟ್ಟಿತು.

ನುಗ್ಗೇಹಳ್ಳಿಯ ರಾಮೇಗೌಡರೂ ಸಿದ್ಧೇಗೌಡರೂ ಓಡಿಬಂದು ಹೆಂಗಸರು ಮಕ್ಕಳನ್ನೆಲ್ಲಾ ಎಚ್ಚರಿಕೆಯಿಂದ ದೋಣಿಯಿಂದ ಇಳಿಸಿದರು. ಸುಬ್ಬಣ್ಣ ಗೌಡರೂ ಉಸ್ಸೆಂದು ಇಳಿದರು. ಎಲ್ಲರಿಗೂ ದಡ ಸೇರಿದೆವಲ್ಲಾ ಬದುಕಿದೆವಲ್ಲಾ ಎಂಬುದೊಂದೇ ಯೋಚನೆ. ಆ ಆನಂದದ ಸಡಗರದಲ್ಲಿ ಲಿಂಗನ ನೆನಪು ಆಗದಿದ್ದುದು ಏನೂ ಅತಿಶಯವಲ್ಲ. ಆದರೆ ನಾಗ ಮಾತ್ರ ಅಳುತ್ತಿದ್ದ. ಅದನ್ನು ನೋಡಿ ನುಗ್ಗೇಹಳ್ಳಿಯ ಸಿದ್ದೇಗೌಡರು “”ಯಾಪಪ್ಪಾ ಅಳ್ತೀಯೆ? ಏನಾಯೊ¤?” ಎಂದು ಕೇಳಿದರು.

ಅವನು ಬಿಕ್ಕಿ ಬಿಕ್ಕಿ ಅಳುತ್ತ “”ಅಪ್ಪ!” ಎಂದ.
ಸುಬ್ಬಣ್ಣಗೌಡರು “”ಏನದು, ಸಿದ್ದೇಗೌಡ್ರೇ?” ಎಂದರು.
“”ಈ ಹುಡುಗ ಅಪ್ಪಾ ಎಂದು ಅಳ್ತಾನೆ” ಎಂದರು.
ಸುಬ್ಬಣ್ಣ ಗೌಡರ ಮುಖ ಬೆಳ್ಳಗಾಗಿ ತಟಕ್ಕನೆ ಎದ್ದು ನಿಂತು “”ಲಿಂಗಾ! ಲಿಂಗಾ!” ಎಂದು ಕರೆದರು. ಕಾಡಿನಿಂದ “”ಲಿಂಗಾ! ಲಿಂಗಾ!” ಎಂದು ಮರುದನಿಯಾಯಿತು. ಲಿಂಗ ಎಲ್ಲಿಯೂ ಕಾಣಲಿಲ್ಲ. ದೋಣಿಗೆ ಓಡಿದರು; ಅಲ್ಲಿಯೂ ಇರಲಿಲ್ಲ. ಘೋರವಾದ ಕಗ್ಗತ್ತಲನ್ನು ಹೊದೆದುಕೊಂಡು ಗಂಭೀರವಾಗಿಯೂ ಭೀಕರವಾಗಿಯೂ ವಿಶಾಲವಾಗಿಯೂ ಹರಿಯುವ ಕ್ರೂರ ನದಿಯನ್ನು ದಿಟ್ಟಿಸಿ ನೋಡಿದರು. ಅವರ ಎದೆ ನಡುಗಿತು. ಕಣ್ಣೀರು ಸುರಿಯಿತು. “”ಲಿಂಗಾ! ಲಿಂಗಾ!” ಎಂದು ರೋದಿಸಿದರು. ನಾಗನೂ ಬಿದ್ದು ಬಿದ್ದು ಅಳುತ್ತಿದ್ದನು. ತಿಮ್ಮು, ಸೀತೆ ಇಬ್ಬರೂ ಅಳಲಾರಂಭಿಸಿದರು.
“”ನಮ್ಮ ಮನೆಯ ಒಂದು ಬೆಳಕೇ ಹೋಯಿತು” ಎಂದು ಸುಬ್ಬಣ್ಣಗೌಡರು ಅಲ್ಲಿದ್ದವರೊಡನೆ ಹೇಳಿಕೊಂಡು ಗೋಳಿಟ್ಟರು. ಲಿಂಗನ ಆಕಸ್ಮಿಕವಾದ ಅನಿರೀಕ್ಷಿತ ಮರಣಕ್ಕಾಗಿ ಎಲ್ಲರೂ ಶೋಕಿಸಿದರು. ಗೌಡರು ನಾಗನನ್ನು ಬಹಳವಾಗಿ ಸಂತೈಸಿದರೂ ಅವನು ಅಳುವುದನ್ನೂ “”ಅಪ್ಪಾ ! ಅಪ್ಪಾ!” ಎಂದು ಕರೆಯುವುದನ್ನೂ ಬಿಡಲೇ ಇಲ್ಲ.
ಲಿಂಗ ಹೊಳೆಯ ಪಾಲಾದುದು ಹೇಗೆ ಎಂಬುದು ಮಾತ್ರ ಒಬ್ಬರಿಗೂ ಬಗೆಹರಿಯಲಿಲ್ಲ.

ಕುವೆಂಪು

Advertisement

Udayavani is now on Telegram. Click here to join our channel and stay updated with the latest news.

Next