ಬೆಳಗಾವಿ: ಬೇಸಿಗೆ ಆರಂಭವಾದಾಗಿನಿಂದ ಕಾಡು ಬರಿದಾಗುತ್ತಿದ್ದಂತೆ ಆಹಾರ ಹುಡುಕಿಕೊಂಡು ನಾಡಿಗೆ ಬಂದ ಕಾಡೆಮ್ಮೆಗಳ ಹಿಂಡು ತಾಲೂಕಿನ ತುಮ್ಮರಗುದ್ದಿ ಮಾರಿಹಾಳ ಮಾರ್ಗದಲ್ಲಿರುವ ಕೆಂಪದಿನ್ನಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಮಾವಿನ ತೋಟಕ್ಕೆ ನುಗ್ಗಿ ಹಾನಿ ಮಾಡುತ್ತಿರುವುದರಿಂದ ಮಾವು ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
ಬೆಳಗಾವಿ ತಾಲೂಕಿನ ಕೆಂಪದಿನ್ನಿ ಗ್ರಾಮದಲ್ಲಿರುವ ಗಡ್ಡೆ ಫಾರ್ಮಹೌಸ್‌ನ ಮಾವಿನ ತೋಟಕ್ಕೆ ನುಗ್ಗಿದ್ದ ಕಾಡೆಮ್ಮೆಗಳು ಹಿಂಡು ಮಾವಿನ ಗಿಡಗಳನ್ನು ಮುರಿದು ಹಾನಿ ಮಾಡುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ವಿಪರೀತ ಹಾವಳಿ ನಡೆಸಿದ್ದು, ಕೊಯ್ಲಿಗೆ ಬಂದ ಮಾವಿನ ಕಾಯಿಗಳನ್ನು ತಿಂದು ರೈತರಿಗೆ ನಷ್ಟ ಉಂಟು ಮಾಡುತ್ತಿವೆ.
ಕೆಂಪದಿನ್ನಿಯ ಗಡ್ಡೆ ಫಾರ್ಮಹೌಸ್ ನಲ್ಲಿ ರವಿವಾರ ಮಧ್ಯಾಹ್ನದ ಹೊತ್ತಿಗೆ ಬಂದ ಕಾಡೆಮ್ಮೆಗಳ ಹಿಂಡು ಮಾವಿನ ಗಿಡಗಳನ್ನು ನಾಶ ಮಾಡಿವೆ. ಅಲ್ಲಿಯೇ ಇದ್ದ ತೋಟದ ಮಾಲೀಕ ತುಷಾರ ಗಡ್ಡೆ ಹಾಗೂ ಆಚಾರ್ಯ ಹಿರೇಮಠ ಅವರ ಮೊಬೈಲ್‌ನಲ್ಲಿ ಕಾಡೆಮ್ಮೆಗಳ ಹಿಂಡುಗಳು ಓಡಾಡುತ್ತಿರುವುದು ಸೆರೆಯಾಗಿದೆ. ಈ ಪ್ರದೇಶದಲ್ಲಿರುವ ಅನೇಕ ಮಾವಿನ ತೋಟಗಳಿಗೆ ನುಗ್ಗಿ ಗಿಡ ಮರಗಳನ್ನು ಹಾನಿ ಮಾಡಿ ನಂತರ ಮಾವಿನ ಕಾಯಿಗಳನ್ನು ತಿಂದಿರುವುದರಿಂದ ಮಾವು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.
ಗುಂಫು ಕಟ್ಟಿಕೊಂಡು ಬಂದ ಕಾಡೆಮ್ಮೆಗಳ ಹಾವಳಿಯಿಂದ ಮಾವಿನ ತೋಟಗಳಲ್ಲಿ ಹಾನಿ ಆಗುತ್ತಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆಸಿರುವ ಗಿಡಗಳು ಮುರಿದು ಬಿದ್ದು ಮಾವಿನ ಕಾಯಿಗಳು ನಷ್ಟವಾಗಿದ್ದರಿಂದ ರೈತರು ಚಿಂತೆಗೀಡಾಗಿದ್ದಾರೆ. ಕೂಡಲೇ ಸಂಬಂಧಿಸಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಕಾಡೆಮ್ಮೆಗಳನ್ನು ಕಾಡಿಗೆ ಕಳುಹಿಸಬೇಕು. ಹಾನಿಗೊಳಗಾದ ಮಾವು ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಮಾವಿನ ತೋಟದ ಮಾಲೀಕ ತುಷಾರ ಗಡ್ಡೆ ಆಗ್ರಹಿಸಿದ್ದಾರೆ.