Advertisement

ಸೆ.1ರಿಂದ ಪ್ಲಾಸ್ಟಿಕ್‌ ಬಳಸಿದರೆ ಭಾರೀ ದಂಡ

01:24 PM Aug 28, 2019 | Suhan S |

ಮಂಡ್ಯ: ಪ್ಲಾಸ್ಟಿಕ್‌ ಬಳಕೆ ನಿಷೇಧವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿರುವ ನಗರಸಭೆ ಸೆ.1ರಿಂದ ಪ್ಲಾಸ್ಟಿಕ್‌ ಮಾರಾಟ ಮಾಡುವವರು ಹಾಗೂ ಕೊಳ್ಳುವವರಿಗೆ ದಂಡ ವಿಧಿಸಲು ತೀರ್ಮಾನಿಸಿದೆ.

Advertisement

ಈಗಾಗಲೇ ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ, ಪರ್ಯಾಯ ವಸ್ತುಗಳ ಬಳಕೆ ಕುರಿತು ಜಾಗೃತಿ ಮೂಡಿಸಲಾಗಿದೆ. ಆದರೂ, ಪರಿಣಾಮಕಾರಿಯಾಗಿ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಲು ಸಾಧ್ಯವಾಗಿಲ್ಲ. ಆ ಹಿನ್ನೆಲೆಯಲ್ಲಿ ಅಂತಿಮವಾಗಿ ದಂಡ ಪ್ರಯೋಗ ಅಸ್ತ್ರ ಬಳಸಲು ಮುಂದಾಗಿದೆ.

ವಿಷ ತ್ಯಾಜ್ಯ: ನಗರ ವ್ಯಾಪ್ತಿಯಲ್ಲಿರುವ ಸಗಟು ವ್ಯಾಪಾರಿಗಳು, ಹೋಟೆಲ್ಗಳು, ಕಲ್ಯಾಣ ಮಂಟಪಗಳು, ವರ್ತಕರು, ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ ಕರಪತ್ರಗಳನ್ನು ಹಂಚಿ, ಪ್ರಾತ್ಯಕ್ಷಿಕೆಯೊಂದಿಗೆ ಅವರಿಗೆ ತಿಳಿವಳಿಕೆ ನೀಡಲಾಗಿದೆ. ಪ್ಲಾಸ್ಟಿಕ್‌ ಬಳಸುವುದರಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿ, ವಿಷ ತ್ಯಾಜ್ಯ ಭೂಮಿ ಸೇರುತ್ತಿರುವುದರಿಂದ ಆಗುತ್ತಿರುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಿದೆ. ಇದರ ನಡುವೆಯೂ ಪ್ಲಾಸ್ಟಿಕ್‌ ಮಾರಾಟ ಹಾಗೂ ಬಳಕೆಯನ್ನು ಮುಂದುವರಿಸಿರುವುದು ಕಂಡುಬಂದಿದ್ದು ಇದೀಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಸಗಟು ವ್ಯಾಪಾರಿಗಳು ಕದ್ದು ಮುಚ್ಚಿ ಪ್ಲಾಸ್ಟಿಕ್‌ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ತರಕಾರಿ, ಮಾಂಸ ಮಾರಾಟಗಾರರು, ವರ್ತಕರೆಲ್ಲರು, ಹೋಟೆಲ್ ವ್ಯಾಪಾರಿಗಳು ಮೂರು ವರ್ಷಗಳಿಂದ ಪ್ಲಾಸ್ಟಿಕ್‌ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಅದನ್ನು ಯಾರೂ ಸಹ ಗಂಭೀರವಾಗಿ ಪರಿಗಣಿಸುವ ಗೋಜಿಗೆ ಹೋಗಿಲ್ಲ. ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಕಂಡುಬರುತ್ತಿದೆ. ಅದಕ್ಕಾಗಿ ಬಾಯಿ ಮಾತಿಗೆ ಬಗ್ಗದಿರುವವರನ್ನು ದಂಡ ಪ್ರಯೋಗದೊಂದಿಗೆ ದಂಡಿಸಲು ನಿರ್ಧರಿಸಿದೆ.

ವಾತಾವರಣ ಮಲಿನ: ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಒಟ್ಟು ಕಸದಲ್ಲಿ ಶೇ.60ರಷ್ಟು ಪ್ಲಾಸ್ಟಿಕ್‌ ತ್ಯಾಜ್ಯವಿರುವುದು ಕಂಡುಬಂದಿದೆ. ಇದರಿಂದಾಗಿ ಕಾಂಪೋಸ್ಟ್‌ ಗೊಬ್ಬರ ತಯಾರಿಸಲು ಸಾಧ್ಯವಾಗುತ್ತಿಲ್ಲ. ಈ ಪ್ಲಾಸ್ಟಿಕ್‌ ಮರು ಬಳಕೆ ಮಾಡುವುದಕ್ಕೂ ಯೋಗ್ಯವಿಲ್ಲದಂತಾಗಿದೆ. ಇದರಿಂದ ನಗರದಿಂದ ಹೊರಬೀಳುತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯ ಭೂಮಿಯನ್ನು ಸೇರುತ್ತಿರುವುದರಿಂದ ನಗರದ ಸುತ್ತಲಿನ ವಾತಾವರಣವೂ ಮಲಿನಗೊಳ್ಳುತ್ತಿದೆ.

Advertisement

ದೃಢೀಕರಿಸಿಕೊಳ್ಳಲು ಸೂಚನೆ: ಕಲ್ಯಾಣಮಂಟಪಗಳು, ಹೋಟೆಲ್ಗಳು ಸೇರಿದಂತೆ 100 ಕೆಜಿಗಿಂತ ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪತ್ತಿಯಾದರೆ ಅಂತಹವರು ಸ್ವಂತ ಸಂಸ್ಕರಣಾ ಘಟಕವನ್ನು ಸ್ಥಾಪಿಸಿಕೊಳ್ಳುವಂತೆ ನಗರಸಭೆ ಸೂಚನೆ ನೀಡಿದೆ. ಈ ಬಗ್ಗೆ ನಗರಸಭೆಗೆ ಸಂಬಂಧಿಸಿದವರು ದೃಢೀಕರಣ ಪತ್ರ ಸಲ್ಲಿಸಬೇಕು.

ಸದ್ಯ ಎಲ್ಲಾ ಸಗಟು ಮಾರಾಟಗಾರರು, ವರ್ತಕರು, ಕಲ್ಯಾಣಮಂಟಪ, ಹೋಟೆಲ್ ಮಾಲೀಕರು ಹಾಗೂ ವ್ಯಾಪಾರಿಗಳೆಲ್ಲರೂ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಒಮ್ಮೆ ಕಳ್ಳತನದ ಮೂಲಕ ಮಾರಾಟ ಮಾಡುವವರು ದಂಡ ಶಿಕ್ಷೆಯೂ ಸೇರಿದಂತೆ ಕಾರಾಗೃಹ ಶಿಕ್ಷೆಗೂ ಒಳಗಾಗಬೇಕಾಗುತ್ತದೆ ಎಂದು ನಗರಸಭೆ ಪರಿಸರ ಅಭಿಯಂತರೆ ಮೀನಾಕ್ಷಿ ಎಚ್ಚರಿಸಿದ್ದಾರೆ.

ಕಳೆದ 11 ಮಾರ್ಚ್‌ 2016ರಲ್ಲೇ ಪ್ಲಾಸ್ಟಿಕ್‌ ನಿಷೇಧ ಕಾನೂನು ಜಾರಿಯಾದರೂ ಇಂದಿಗೂ ಅದನ್ನು ಜಾರಿಗೊಳಿಸುವಲ್ಲಿ ವಿಫ‌ಲರಾಗಿದ್ದೇವೆ. ಸಾರ್ವಜನಿಕರು ಹಾಗೂ ಮಾರಾಟಗಾರರಲ್ಲಿ ನಿರಂತರವಾಗಿ ಜಾಗೃತಿ, ಅರಿವು ಮೂಡಿಸುತ್ತಿದ್ದರೂ ಅವರಿಂದ ಪೂರ್ಣ ಪ್ರಮಾಣದ ಸಹಕಾರ ದೊರಕಿಲ್ಲ.

ಮೂರ್‍ನಾಲ್ಕು ದಿನಗಳ ಹಿಂದೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರೂ ಸಹ ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕರಿಗೆ, ಮಾರಾಟಗಾರರಿಗೆ ಪ್ಲಾಸ್ಟಿಕ್‌ ಬಳಕೆ ನಿಷೇಧದ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಲಾದರೂ ನಗರ ನಾಗರಿಕರು ಎಚ್ಚೆತ್ತುಕೊಂಡು ಪ್ಲಾಸ್ಟಿಕ್‌ ನಿಷೇಧಕ್ಕೆ ಸಹಕರಿಸಬೇಕು ಎಂದು ಮೀನಾಕ್ಷಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next