ಸಾಗರ: ರಜಾ ದಿನದಂದು ಮೋಜು ಮಸ್ತಿಯಲ್ಲಿ ಕಳೆಯದೆ ತಮ್ಮ ಸೈಕಲ್‌ನಲ್ಲಿ ತೀರ್ಥಹಳ್ಳಿಯಿಂದ ಶಿವಮೊಗ್ಗ, ಅಲ್ಲಿಂದ ಸಾಗರಕ್ಕೆ ಹಾಗೂ ಮತ್ತೆ ತೀರ್ಥಹಳ್ಳಿಗೆ ಒಬ್ಬಂಟಿಯಾಗಿ ಸೈಕಲ್‌ನಲ್ಲಿಯೇ ಒಂದೇ ದಿನ 225 ಕಿಮೀ ಸಂಚರಿಸುವ ಮೂಲಕ ಆರೋಗ್ಯ ಇಲಾಖೆಯ ನೌಕರರೊಬ್ಬರು ಉತ್ತಮ ಆರೋಗ್ಯದ ಪಾಠವನ್ನು ತಮ್ಮ ನಡವಳಿಕೆಯ ಮೂಲಕವೇ ಸಾರಿದ ವಿಶಿಷ್ಟ ಘಟನೆ ನಡೆದಿದೆ.
ತೀರ್ಥಹಳ್ಳಿ ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷರಾದ ಟಿ.ವಿ.ಸತೀಶ್ ಶೆಟ್ಟಿ ತಮ್ಮ ಹವ್ಯಾಸವಾದ ಸೈಕ್ಲಿಂಗ್ ಮೂಲಕ ಸಾಗರಕ್ಕೆ ಆಗಮಿಸಿದವರು, ರಜಾ ದಿನಗಳನ್ನು ನಾನೆಂದೂ ವ್ಯರ್ಥ ಮಾಡಿಕೊಳ್ಳುವುದಿಲ್ಲ. ಉತ್ತಮ ಹವ್ಯಾಸದಿಂದ ಮೈ ಮನಸ್ಸು ಚೈತನ್ಯ ಪಡೆದುಕೊಳ್ಳುತ್ತದೆ. ಪರಿಸರದ ನಡುವೆ ಸಾಗುವ ಸೈಕಲ್ ಪ್ರವಾಸ ಮನಸ್ಸಿಗೆ ಮುದ ನೀಡುತ್ತದೆ. ಮಲೆನಾಡಿನ ಭಾಗದಲ್ಲಿ ಸಂಚರಿಸುವಾಗ ಸಿಗುವ ಆನಂದವೇ ವಿಶಿಷ್ಟವಾಗಿದೆ. ಆರೋಗ್ಯ ಇಲಾಖೆಯ ನೌಕರರೇ ಸರಿಯಾಗಿ ಆರೋಗ್ಯ ಕಾಪಾಡಿಕೊಳ್ಳದಿದ್ದರೆ ನಮ್ಮ ಬಳಿ ಬರುವ ರೋಗಿಗಳಿಗೆ ಸಲಹೆ ಕೊಡಲು ನಮಗೆ ನೈತಿಕತೆ ಉಳಿದಿರುವುದಿಲ್ಲ. ಕಚೇರಿ, ಮನೆಗಳಲ್ಲಿ ಒತ್ತಡವಿದ್ದರೂ ಅದಕ್ಕೆ ಉತ್ತಮ ಹವ್ಯಾಸದಲ್ಲಿ ಪರಿಹಾರವಿದೆ ಎಂದು ಪ್ರತಿಪಾದಿಸಿದರು.
ಅವರನ್ನು ಅಭಿನಂದಿಸಿದ ಸಾಗರ ಆರೋಗ್ಯ ಇಲಾಖೆ ನೌಕರರ ಒಕ್ಕೂಟ ಅವರಿಂದ ಆಸ್ಪತ್ರೆ ಆವರಣದಲ್ಲಿ ಗಿಡ ನೆಡಿಸಿ ಸಂಭ್ರಮದಲ್ಲಿ ಭಾಗಿಯಾಯಿತು. ಒಕ್ಕೂಟದ ಅಧ್ಯಕ್ಷ ಲೋಹಿತ್ ಎನ್. ಮಾತನಾಡಿ, ಉತ್ತಮ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಸ್ಥಿರದಲ್ಲಿಟ್ಟುಕೊಳ್ಳಬಹುದು. ಶನಿವಾರ ಸರ್ಕಾರಿ ರಜಾ ದಿನವಾಗಿದ್ದರೂ ತಮ್ಮ ಸೈಕ್ಲಿಂಗ್ ಹವ್ಯಾಸದಿಂದ ತೀರ್ಥಹಳ್ಳಿಯಿಂದ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಸೈಕಲ್‌ನಲ್ಲಿ ಶೆಟ್ಟರು ಬಂದಿದ್ದಾರೆ. ಸದಾ ಒತ್ತಡದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ರಜಾ ದಿನಗಳನ್ನು ಉತ್ತಮ ಹವ್ಯಾಸಗಳನ್ನು ಬಳಸಿಕೊಳ್ಳಲು ರೂಢಿಸಿಕೊಳ್ಳುವುದು ಅನುಕರಣೀಯ ಎಂದರು.
ಬಹುತೇಕ ಸರ್ಕಾರಿ ನೌಕರರು ರಜೆ ಬಂದರೆ ಮೋಜಿಗಾಗಿ ಪ್ರವಾಸಕ್ಕೆ ತೆರಳುವುದು, ನೆಂಟರಿಷ್ಟರ ಮನೆಗೆ ಹೋಗುವುದು ಸಾಮಾನ್ಯ. ಆದರೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಟ್ರಕ್ಕಿಂಗ್, ಕ್ರೀಡೆ, ಸಾಹಸ, ಅಧ್ಯಯನ ಪ್ರವಾಸ ಇತ್ಯಾದಿಗಳನ್ನು ರೂಢಿಸಿಕೊಳ್ಳುವುದಕ್ಕೆ ರಜೆಯನ್ನು ಬಳಸಿಕೊಳ್ಳುವುದು ವಿರಳ. ಆದರೆ ಸತೀಶ್ ಶೆಟ್ಟಿಯವರು ರಜಾ ದಿನಗಳನ್ನು ಉತ್ತಮ ಹವ್ಯಾಸಗಳಿಂದಲೇ ಕಳೆಯುತ್ತಾರೆ ಎನ್ನುವುದು ವಿಶೇಷ ಎಂದರು.
ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಪರಪ್ಪ ಕೆ. ಮಾತನಾಡಿ, ಆಸ್ಪತ್ರೆಯಲ್ಲಿ ಕೆಲಸ ಮಾಡುವವರೆಲ್ಲ ಒಂದೇ ಕುಟುಂಬದವರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲಿ ಯಾರೂ ಮೇಲು ಕೀಳು ಎಂಬ ಭೇದವಿಲ್ಲ. ಬರುವ ಎಲ್ಲ ಉಳ್ಳವ, ಬಡವ, ದೀನ ದಲಿತರಿಗೆಲ್ಲ ಸಮಾನ ಚಿಕಿತ್ಸೆ ಲಭ್ಯವಿದೆ. ನಾವು ಸಂಘಟಿತರಾಗಿ ಕೆಲಸ ಮಾಡಿದಾಗ ಮಾತ್ರ ಆಸ್ಪತ್ರೆಗೆ ಉತ್ತಮ ಹೆಸರು ಬರುತ್ತದೆ ಎಂದರು.
ನಿವೃತ್ತ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಒತ್ತಡದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡರೆ ಭವಿಷ್ಯದ ಬದುಕನ್ನು ಸಂತೋಷದಿಂದ ಕಳೆಯಲು ಸಾಧ್ಯ. ಆದರೆ ಬಹುತೇಕ ನೌಕರರು ಸಿಗುವ ವೇತನ, ಭತ್ಯೆ ಹಾಗೂ ಬ್ಯಾಂಕಿನಲ್ಲಿರುವ ಹಣದ ಜಮಾ ಖರ್ಚುಗಳ ಕುರಿತೇ ಯೋಚಿಸುವುದು ವಿಪರ್ಯಾಸ. ಕರ್ತವ್ಯ ನಿರ್ವಹಿಸುವ ದಿನಗಳಲ್ಲಿ ಕ್ರೀಡೆ, ವ್ಯಾಯಾಮ, ವಾಕಿಂಗ್, ಸಾಂಸ್ಕೃತಿಕವಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ಮುಂದೆ ನಿವೃತ್ತ ಜೀವನವನ್ನು ಸಂತೋಷದಿಂದ ಕಳೆಯಬಹುದು. ಒತ್ತಡರಹಿತ ಜೀವನವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಪುಷ್ಪ, ಹಿರಿಯ ಶುಶ್ರೂಷಕಿ ಜುಬೇದ ಅಲಿ, ಕ್ಷಕಿರಣ ವಿಭಾಗದ ಮುಖ್ಯಸ್ಥ ರಾಜಶೇಖರ್ ಇಳಿಗೇರ್, ಕೀರ್ತನ, ತ್ರಿವೇಣಿ, ಆಕಾಶ್, ಸುನಿತಾ ಹಾಜರಿದ್ದರು.