Advertisement
ಕೇರಳಕ್ಕೆ ಗೋವಾ, ಮುಂಬಯಿ, ಬೆಂಗಳೂರು ಮೊದಲಾದೆಡೆಗಳಿಂದ ಮಂಗಳೂರು ಮಾರ್ಗ ವಾಗಿ ಎಂಡಿಎಂಎ ಡ್ರಗ್ಸ್ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ದಾರಿ ಮಧ್ಯೆ ಮಂಗಳೂರು ನಗರ ಸೇರಿದಂತೆ ದ.ಕ ಜಿಲ್ಲೆಯ ಹಲವೆಡೆ ಭಾರೀ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಇತರ ಕೆಲವು ಮಾದಕ ವಸ್ತುಗಳಿಗೆ ಹೋಲಿಸಿದರೆ ಎಂಡಿಎಂಎ ದುಬಾರಿ. ಇದಕ್ಕೆ ಮಾರುಕಟ್ಟೆಯಲ್ಲಿ ಗ್ರಾಂಗೆ 3ರಿಂದ 4 ಸಾವಿರ ರೂ. ಬೆಲೆ ಇದೆ. ಗಾಂಜಾದಂತಹ ಡ್ರಗ್ಸ್‌ಗಳು ಅಮಲು ಉಂಟು ಮಾಡಿದರೆ ಎಂಡಿಎಂಎ ಇದಕ್ಕೆ ವಿರುದ್ಧವಾಗಿ, ಅಂದರೆ ಹೆಚ್ಚು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಇದನ್ನು ಸೇವಿಸಿದವರಿಗೆ ನಿದ್ದೆಯೂ ಬರುವುದಿಲ್ಲ. ಇದು ಪಾರ್ಟಿ ಡ್ರಗ್ಸ್ ಆಗಿರುವುದರಿಂದ ನಗರ ಪ್ರದೇಶಗಳಲ್ಲಿ ಬೇಡಿಕೆ ಜಾಸ್ತಿ. ಕಳೆದ ಸುಮಾರು ಮೂರು ವರ್ಷಗಳಿಂದೀಚೆಗೆ ಮಂಗಳೂರಿನಲ್ಲಿ ಎಂಡಿಎಂಎ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬಂದಿದೆ ಎನ್ನುತ್ತಾರೆ ಡ್ರಗ್ಸ್ ಡಿ-ಎಡಿಕ್ಷನ್ ಸೆಂಟರ್‌ಗಳಲ್ಲಿ ಕೆಲಸ ಮಾಡುವ ತಜ್ಞರು. ಸ್ಥಳೀಯವಾಗಿಯೂ ಎಂಡಿಎಂಎ ತಯಾರಿ?
ಎಂಡಿಎಂಎ ಗಾಂಜಾದಂತೆ ಪ್ರಾಕೃತಿಕವಾಗಿ ಸಿಗುವ ಡ್ರಗ್ಸ್ ಅಲ್ಲ. ಅದು ಪೂರ್ಣ ರಾಸಾಯನಿಕಗಳಿಂದ ಕೂಡಿದ್ದು. ಭಾರೀ ಅಪಾಯಕಾರಿ. ಕೆಲವು ನಗರಗಳಲ್ಲಿ ಸಣ್ಣಪುಟ್ಟ ಲ್ಯಾಬ್‌ಗಳಲ್ಲಿಯೇ ಇದನ್ನು ತಯಾರಿಸಿರುವ ಪ್ರಕರಣಗಳು ಪತ್ತೆಯಾಗಿದೆ. ಇತ್ತೀಚೆಗೆ ನೋಯ್ಡಾದಲ್ಲಿ ಇಂತಹ ಲ್ಯಾಬ್ ಪತ್ತೆ ಹಚ್ಚಲಾಗಿತ್ತು. ಕೇರಳ ಮತ್ತು ಬೆಂಗಳೂರು ಪೊಲೀಸರು ಕೂಡ ಇದೇ ರೀತಿಯ ಲ್ಯಾಬ್‌ಗಳ ಬಗ್ಗೆ ತಪಾಸಣೆ ತೀವ್ರಗೊಳಿಸಿದ್ದರು. ಇದೀಗ ಮಂಗಳೂರು ನಗರ ಭಾಗದಲ್ಲಿಯೂ ಇಂತಹ ಡ್ರಗ್ಸ್‌ಗಳನ್ನು ತಯಾರಿಸುವ ಶಂಕೆ ವ್ಯಕ್ತವಾಗಿದ್ದು ಪೊಲೀಸ್ ಇಲಾಖೆ ವ್ಯಾಪಕ ತಪಾಸಣೆ ನಡೆಸುವ ಅವಶ್ಯಕತೆ ಇದೆ. ಕಳೆದ ತಿಂಗಳು ಮಣಿಪಾಲದಲ್ಲಿ ಎಂಡಿಎಂಎ ಸಹಿತ ಇಬ್ಬರು ಕೇರಳ ರಾಜ್ಯದ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು.
Related Articles
ಕೇರಳದ ಕರಾವಳಿ ಭಾಗದಲ್ಲಿ ಎರಡು ತಿಂಗಳುಗಳ ಹಿಂದೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಪತ್ತೆಯಾದ ಅನಂತರ ಅಲ್ಲಿನ ಪೊಲೀಸರು ವಿಶೇಷ ನಿಗಾ ವಹಿಸಿದ್ದು ಅದರ ಪರಿಣಾಮವಾಗಿ ಡ್ರಗ್ಸ್ ಪೆಡ್ಲರ್‌ಗಳು ಮಂಗಳೂರಿನಲ್ಲಿ ತಮ್ಮ ಮಾರುಕಟ್ಟೆ ಭದ್ರಪಡಿಸಲು ಮುಂದಾಗಿದ್ದರು. ಇದೀಗ ಮಂಗಳೂರು ಪೊಲೀಸರು ಕೂಡ ಪೆಡ್ಲರ್‌ಗಳ ಬೆನ್ನು ಬಿದ್ದಿದ್ದು ಪೆಡ್ಲರ್‌ಗಳ ಜಾಲವನ್ನು ಭೇದಿಸುತ್ತಿದ್ದಾರೆ. ಇತ್ತೀಚೆಗೆ ಇಂತಹ ಒಂದು ಗ್ಯಾಂಗ್‌ನ್ನು ವಶಕ್ಕೆ ಪಡೆಯಲಾಗಿದೆ. ಇಂತಹ ಪೆಡ್ಲರ್‌ಗಳು ಹಲವು ತಂಡಗಳಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಎಲ್ಲಿ ಅಧಿಕ ಬೆಲೆ ಸಿಗುತ್ತದೋ ಅಲ್ಲಿ ಹೆಚ್ಚು ವ್ಯವಹಾರ ನಡೆಸಲು ಜಾಲ ಬೆಳೆಸಿಕೊಂಡಿರುವುದು ಬೆಳಕಿಗೆ ಬಂದಿದೆ.
Advertisement
7 ತಿಂಗಳಲ್ಲಿ 88 ಪೆಡ್ಲರ್‌ಗಳ ಸೆರೆ ಕಳೆದ ಜನವರಿಯಿಂದ ಜು.30ರವರೆಗೆ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 596.800 ಗ್ರಾಂ ಎಂಡಿಎಂಎ (ಅಂದಾಜು 28.96 ಲ.ರೂ.ಮೌಲ್ಯ), 184.532 ಕೆ.ಜಿ ಗಾಂಜಾ(46,21,350 ರೂ.), 11.30 ಗ್ರಾಂ ಗಾಂಜಾ ವೀಡ್ ಆಯಿಲ್ (7,000 ರೂ.ಮೌಲ್ಯ), 500 ಗ್ರಾಂ ಚರಸ್ (1 ಲ.ರೂ. ಮೌಲ್ಯ), 2 ಗ್ರಾಂ ಹಶಿಸ್(750 ರೂ. ಮೌಲ್ಯ) ಸೇರಿದಂತೆ ಒಟ್ಟು 75,00,600 ರೂ. ಮೌಲ್ಯದ ಡ್ರಗ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು 88 ಮಂದಿ ಡ್ರಗ್ಸ್ ಮಾರಾಟಗಾರರನ್ನು(ಪೆಡ್ಲರ್) ಬಂಧಿಸಲಾಗಿದೆ. ಡ್ರಗ್ಸ್ ಸೇವಿಸಿದ 233 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.