ಒಟ್ಟಾರೆ, ನಮ್ಮ ವ್ಯಾಟ್ಸ್ ಆ್ಯಪ್ ಗ್ರೂಫ್ ನ ಸದಸ್ಯರೊಬ್ಬರಿಗೆ ಪ್ರಶಸ್ತಿಯೋ ಸನ್ಮಾನವೋ ದೊರೆತು ಬಿಟ್ಟಿತು. ಅವರು ಫೋಟೊ ಸಹಿತ ಪುಟ್ಟ ಟಿಪ್ಪಣಿ ಬರೆದು, ಗ್ರೂಪಿಗೆ ಹಾಕಿದರು. ಕೆಲವೇ ನಿಮಿಷಗಳಲ್ಲಿ ಶುರುವಾಯ್ತು ನೋಡಿ ಅಭಿನಂದನೆಗಳ ಸುರಿಮಳೆ. ಅವರು ಉಳಿದೆಲ್ಲ ಗ್ರೂಫ್ ಗಳಿಗೆ ಫಾರ್ವರ್ಡ್ ಮಾಡಿ ಮರಳಿ ಈ ಗ್ರೂಫ್ ಗೆ ಬಂದರೆ ಧನ್ಯವಾದ ಸಲ್ಲಿಸಲು ಜಾಗವೇ ಇರಲಿಲ್ಲ. ನಿಧಾನಕ್ಕೆ ಒಂದೊಂದೇ ಅಭಿನಂದನೆಗಳನ್ನು ಒತ್ತಿ, ಅದರಡಿಗೆ ಧನ್ಯವಾದ ಅಂಟಿಸುತ್ತಾ ಹೋದರು. ಅತ್ತ ಅಭಿನಂದನೆಗಳು, ಇತ್ತ ಧನ್ಯವಾದಗಳು. ಇಲ್ಲಿ ಬರಗಾಲವಿಲ್ಲದ ವ್ಯಾಟ್ಸ್ ಆ್ಯಪ್ ವಿಕೋಪ! ಯಾರೋ ಒಬ್ಬರು ಥಟ್ಟನೇ ಇಲ್ಲ, ಹೀಗೆಲ್ಲ ಆಗೋದು ಬೇಡ. ಸನ್ಮಾನಿತರಿಗೆ ಅಥವಾ ಪ್ರಶಸ್ತಿ ಪುರಸ್ಕೃತರಿಗೆ ಗ್ರೂಫ್ ನ ಪರವಾಗಿ ಯಾರಾದರೂ ಒಬ್ಬರು ಅಭಿನಂದನೆ ಸಲ್ಲಿಸಿದರೆ ಸಾಕು ಅಥವಾ ಅವರಿಗೆ ವೈಯಕ್ತಿವಾಗಿ ಅಭಿನಂದನೆ ಸಲ್ಲಿಸುವುದು ಒಳಿತು. ಗ್ರೂಫ್ ನಲ್ಲಿ ಕಿರಿಕಿರಿ ತಪ್ಪುತ್ತೆ. ಜೊತೆಗೆ ಗ್ರೂಪ್‌ನ ಮುಖ್ಯ ಆಶಯ ಕೂಡ ಈಡೇರುತ್ತದೆ ಅಂತ ಮೆಸೇಜ್ ಹಾಕಿದರು.
ಈ ವಿಚಾರವನ್ನು ಎಲ್ಲರೂ ಅನುಮೋದಿಸುತ್ತಿದ್ದಾಗ ಗ್ರೂಫ್ ಇನ್ನೊಬ್ಬರು ನಮ್ಮ ನಮ್ಮಲ್ಲಿ ಕಿರಿಕಿರಿ ಅಂತೇನಿಲ್ಲ. ಅಭಿನಂದಿಸಿದರೆ ಅವರಿಗೂ ಸ್ಫೂರ್ತಿ ಸಿಕ್ಕಂಗಲ್ವ? ಅಂತ ಪ್ರಶ್ನೆ ಮಾಡಿದರು. ಅದೂ ಸರಿಯೇ ಅನಿಸಿತು. ಎಲ್ಲದರ ಬದಲಾಗಿ ಯಾವುದಾದರೂ ಒಂದು ಕವಿತೆಯ ಆಶಯ, ಅದರ ಪ್ರತಿಮೆ, ವಸ್ತು ವಿಚಾರವನ್ನು ಚರ್ಚಿಸುವುದು ಚೆನ್ನಾಗಿರುತ್ತೆ. ಇದೇ ಮೂಲ ಆಶಯ ಅಂತೆಲ್ಲ ಪ್ರಶ್ನೋತ್ತರಗಳ ಪರ, ವಿರೋಧ ಆದ ಮೇಲೆ ಇದ್ದಕ್ಕಿದ್ದಂತೆ ಚರ್ಚೆ ನಿಂತೇ ಹೋಯಿತು.
ಮಲಗಿದ್ದ ಆಶಯವನ್ನು ಎಬ್ಬಿಸಲು ಮರುದಿನದವರೆಗೂ ಆಗೊಂದು ಈಗೊಂದರಂತೆ ಸುರಿವ ಕವಿತೆಗಳ ಮಳೆಹನಿಗಳ ನಡುವೆ ಗ್ರೂಫ್ ನಲ್ಲಿ ಮೂರು ಮತ್ತೂಂದು ಕವನಗಳು ಬಿದ್ದವು. ಈಗ ಬೇರೊಂದು ರೂಪದ ಮೆಸೇಜ್‌ಗಳು, ಇವು ಗುಡುಗು ಮಿಂಚಿನಂತೆ ಪದಗಳಿಲ್ಲದ ಸೌಂಡ್‌ಗಳು. ಅಂಗೈನ ಹೊಟ್ಟೆಗೆ ನಾಲ್ಕು ಬೆರಳನ್ನು ಅದುಮಿ, ಹೆಬ್ಬೆರಳನ್ನು ಮೇಲೆತ್ತುವ ಹಾಗೂ ಹೆಬ್ಬೆರಳು ಮತ್ತು ತುದಿ ಬೆರಳುಗಳ ತುದಿ ಅಂಟಿಸಿ ಸೂಪರ್ ಅನ್ನುವ, ಮೊಬೈಲ್ ಮೇಲೆ ರೊಟ್ಟಿ ಬಡಿದಂತೆ ಚಪ್ಪಾಳೆ ತಟ್ಟುವ ಸಂಕೇತಗಳು ಒಡಾಡುತ್ತಿವೆ.
ಒಂದು ಗ್ರೂಫ್ ಹುಟ್ಟಿದಾಗ ಹೀಗೆಲ್ಲ ಮಾಡಬಾರದೆಂಬ ನಿಯಮ ರೂಪಿಸಿದ ಅಡ್ಮಿನ್ ಕೊನೆಗೆ ಗ್ರೂಪ್‌ನಿಂದ ತಾವೇ ಎಕ್ಸಿಟ್ ಆಗಿಹೋದರು. ಗ್ರೂಫ್ ಗೆ ಇಟ್ಟ ಹೆಸರು ಆಗಾಗ ಈ ಚಟುವಟಿಕೆಗಳನ್ನು ಕಂಡು ತನ್ನ ತಾನೇ ನೋಡಿಕೊಂಡು ಪರೀಕ್ಷಿಸಿಕೊಳ್ಳ ತೊಡಗಿತು. ಇಷ್ಟು ವಿಷಯವನ್ನು ಈಗ ಗ್ರೂಪ್ ನಲ್ಲಿ ಹಾಕಿದರೆ, ಮತ್ತೆ ಶುರು ಅಭಿನಂದನೆಗಳು. ನಾನು ಧನ್ಯವಾದಗಳನ್ನು ಹೇಳಲು ಸಮಯ ಬೇಕು. ಆಮೇಲೆ ಸಿಗುತ್ತೇನೆ.
-ಸೋಮು ಕುದರಿಹಾಳ