Advertisement

ಅಶಕ್ತರ ನೆರವಿಗೆ ಬಾಟಲ್‌ ನೀರು ಮಾರುವ ಯುವಕರ ತಂಡ

10:14 AM Dec 16, 2019 | Team Udayavani |

ಬಂಟ್ವಾಳ: ಬೆಳ್ತಂಗಡಿ ತಾ|ನಲ್ಲಿ ಹುಟ್ಟಿಕೊಂಡಿರುವ ರಾಜಕೇಸರಿ ಸಂಘಟನೆ ಕುಡಿಯುವ ನೀರಿನ ಬಾಟಲ್‌(ಮಿನರಲ್‌ ವಾಟರ್‌) ಮಾರಾಟ ಮಾಡಿ, ಲಾಭಾಂಶವನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಈಗಾಗಲೇ 4 ಕಡೆಗಳಲ್ಲಿ ಮಿನರಲ್‌ ವಾಟರ್‌ ಮಾರಾಟ ಮಾಡಿ ಯಶಸ್ವಿಯಾ ಗಿದೆ. 5ನೇ ಕಾರ್ಯಕ್ರಮವಾಗಿ ಬಾಲಕಿಗೆ ನೆರವಾಗಲು ಡಿ. 15ರಂದು ಬಿ.ಸಿ. ರೋಡ್‌ ಬಸ್‌ ನಿಲ್ದಾಣದಲ್ಲಿ ಮಿನರಲ್‌ ವಾಟರ್‌ ಮಾರಾಟ ಮಾಡಲಿದೆ. ಸಂಘಟನೆ ನೀರು ಮಾರಾಟ ಮಾಡಿ ಬಂದ ಆದಾಯವನ್ನು ರೋಗಿಗಳಿಗೆ ನೀಡಿ ಚಿಕಿತ್ಸೆಗೆ ನೆರವಾಗುತ್ತಿದೆ.

Advertisement

4 ಕಡೆ ಯಶಸ್ವಿ ಕಾರ್ಯ
ರಾಜಕೇಸರಿ ಸಂಘಟನೆ ಪ್ರಥಮ ಬಾರಿಗೆ ಬೆಳ್ತಂಗಡಿಯಲ್ಲಿ ಈ ಕಾರ್ಯ ಮಾಡಿದ್ದು, ಮುಂಡಾಜೆಯ ಬಾಲಕಿ ಯೊಬ್ಬಳಿಗೆ 40 ಸಾವಿರ ರೂ. ನೆರವು ನೀಡಿದೆ. 2ನೇ ಹಂತದಲ್ಲಿ ಉಡುಪಿ ಸರ್ವೀಸ್‌ ಬಸ್‌ ನಿಲ್ದಾಣದಲ್ಲಿ ಈ ಕಾರ್ಯ ಮಾಡಿದ್ದು, ಕಣ್ಣು ಕಾಣದ ವ್ಯಕ್ತಿ, ಅಪಘಾತದ ಗಾಯಾಳು, ಕ್ಯಾನ್ಸರ್‌ ಪೀಡಿತ ವ್ಯಕ್ತಿಗೆ ತಲಾ 20 ಸಾವಿರ ರೂ. (ಒಟ್ಟು 60 ಸಾ. ರೂ.) ನೆರವು ನೀಡಿದೆ. 3ನೇ ಹಂತದಲ್ಲಿ ಮೂಡುಬಿದಿರೆ ಪೇಟೆಯಲ್ಲಿ ಈ ಕಾರ್ಯ ಮಾಡಿದ್ದು, ಒಟ್ಟು 44,444 ರೂ.ಗಳನ್ನು ಪಣಪಿಲ ಗ್ರಾಮದ 3 ವರ್ಷ ಪ್ರಾಯದ ಮಗುವಿನ ಚರ್ಮ ರೋಗದ ಚಿಕಿತ್ಸೆಗೆ ನೆರವಾಗಿದೆ. ಬಳಿಕ 4ನೇ ಹಂತದಲ್ಲಿ ಬೆಳ್ತಂಗಡಿಯಲ್ಲಿ ಮತ್ತೆ ಈ ಕಾರ್ಯ ಮಾಡಿ, ಕಡಿರುದ್ಯಾವರ ಗ್ರಾಮದ ನಿವಾಸಿಯೊಬ್ಬರಿಗೆ 20 ಸಾವಿರ ರೂ.ಗಳನ್ನು ನೆರವಿನ ರೂಪದಲ್ಲಿ ನೀಡಿದೆ.

ಬಾಲಕಿಗೆ ನೆರವು
ಡಿ. 15ರಂದು ಬಿ.ಸಿ. ರೋಡ್‌ನ‌ಲ್ಲಿ ರಾಜಕೇಸರಿ ದ.ಕ. ಜಿಲ್ಲಾ ಘಟಕ, ಬಂಟ್ವಾಳ ತಾ|ನ ನೆಲ್ಲಿಗುಡ್ಡೆ ಬಸವನಬೈಲು ಘಟಕದ ಸಹಯೋಗದೊಂದಿಗೆ ರಾಜ ಕೇಸರಿಯ ಸಂಸ್ಥಾಪಕ ದೀಪಕ್‌ ಜಿ. ಮುಂದಾಳತ್ವದಲ್ಲಿ ಘಟಕದ ಅಧ್ಯಕ್ಷ ಪ್ರದೀಪ್‌ ಪೂಜಾರಿ, ಸಂಚಾಲಕ ಸಂದೇಶ್‌ ಶೆಟ್ಟಿ ನೇತೃತ್ವದಲ್ಲಿ ಬಾಟಲ್‌ ನೀರು ಮಾರಾಟ ಮಾಡಲಿದೆ.

ಬಂಟ್ವಾಳ ತಾ|ನ ರುಕ್ಮಯ್ಯ ನಾಯ್ಕ ಅವರ ಪುತ್ರಿ ಚೈತ್ರಾ ಅನಾರೋಗ್ಯದಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ನೆರವಾಗಲು ಬಿ.ಸಿ. ರೋಡ್‌ ಬಸ್‌ ನಿಲ್ದಾಣದಲ್ಲಿ ಈ ಕಾರ್ಯ ಮಾಡಲಿದೆ. ಸುಮಾರು 40 ಮಂದಿ ಯುವಕರು ಪಾಲ್ಗೊಳ್ಳಲಿದ್ದು, 30 ಸಾವಿರ ರೂ. ನೆರವಾಗುವ ಉದ್ದೇಶವಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.

ಅರ್ಧ ಲೀಟರ್‌ ಬಾಟಲ್‌
ಸಂಘಟನೆ ಪ್ರತಿಯೊಂದು ಕಡೆಯೂ ಅರ್ಧ ಲೀ. ನೀರಿನ ಬಾಟಲ್‌ ಮಾರಾಟ ಮಾಡಿದ್ದು, ಬಾಟಲ್‌ಗ‌ಳನ್ನು ರಖಂ ದರದಲ್ಲಿ ಪಡೆದು ಬಳಿಕ ಅದನ್ನು 10 ರೂ.ಗಳಿಗೆ ಮಾರಾಟ ಮಾಡುತ್ತದೆ. ಖರ್ಚನ್ನು ಕಳೆದು ಉಳಿಕೆ ಹಣದಲ್ಲಿ ನೆರವಿನ ಕಾರ್ಯ ಮಾಡುತ್ತದೆ.

Advertisement

ಉತ್ತಮ ಬೆಂಬಲ
ಬಾಟಲ್‌ ನೀರು ಮಾರಿ ಅಶಕ್ತರಿಗೆ ನೆರವಾಗುವ ಕಾರ್ಯವನ್ನು ನಮ್ಮ ಸಂಘಟನೆ ಮಾಡುತ್ತಿದ್ದು, ಈಗಾಗಲೇ 4 ಕಡೆಗಳಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಉದ್ದೇಶವನ್ನು ತಿಳಿಸಿ ಜನರ ಬಳಿ ಹೋದಾಗ ಉತ್ತಮ ಬೆಂಬಲ ವ್ಯಕ್ತಪಡಿಸಿದ್ದಾರೆ.
 - ದೀಪಕ್‌ ಜಿ. ರಾಜಕೇಸರಿ ಸಂಘಟನೆ ಸಂಸ್ಥಾಪಕರು

Advertisement

Udayavani is now on Telegram. Click here to join our channel and stay updated with the latest news.

Next