ಮಂಗಳೂರು: ದೇಶಾದ್ಯಂತ ಕೋವಿಡ್-19 ಸೋಂಕಿನ ಕಾರಣದಿಂದ ಎಲ್ಲಡೆ ಆತಂಕ ಸೃಷ್ಟಿಯಾಗಿದೆ. ಜನ ಸಾಮಾನ್ಯರಿಗೆ ಊಟಕ್ಕೂ ಕಷ್ಟವಾಗಿದೆ. ಕೆಲ ದಾನಿಗಳು, ಸಂಘಸಂಸ್ಥೆಗಳು ಅಗತ್ಯ ಇರುವ ಜನರಿಗೆ ಊಟ ಇತ್ಯಾದಿ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ. ಹೋಟೆಲ್, ಶಾಲಾ ಬಳಿ ಸಿಗುತ್ತಿದ್ದ ಆಹಾರದಿಂದ ಹಸಿವು ನೀಗಿಸಿಕೊಳ್ಳುತ್ತಿದ್ದ ಬೀದಿ ಬದಿ ನಾಯಿಗಳು ಈಗ ಹಸಿವಿನಿಂದಿವೆ. ಬೀದಿ ನಾಯಿಗಳ ಮೂಕ ವೇದನೆಗೆ ಮಂಗಳೂರಿನ ಯುವಕರ ತಂಡವೊಂದು ಸ್ಪಂದಿಸುತ್ತಿದೆ.
ನಗರದ ಐವರ ತಂಡ ಬಿದಿನಾಯಿಗಳಿಗೆ ಪ್ರತೀ ದಿನ ಊಟ ಹಾಕಿ ಅವುಗಳ ಹೊಟ್ಟೆ ತಣಿಸುವ ಕೆಲಸ ಮಾಡುತ್ತದೆ. ನಗರದ ವಿನ್ಯಾಸ್ ಶೆಟ್ಟಿ, ಕಿರಣ್ ರಾಜ್, ನಿಶಾಲ್ ಪೂಜಾರಿ, ಪವನ್, ಮೋಹನ್ ದಾಸ್ ಎಂಬ ಐವರು ಯುವಕರ ತಂಡ ಈ ಕೆಲಸ ಮಾಡುತ್ತಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಲಾಕ್‌ಡೌನ್ ದಿನದಿಂದ ದಿನವೊಂದಕ್ಕೆ 25 ಕೆಜಿಯಷ್ಟು ಬಾಸ್ಮತಿ ಅಕ್ಕಿಯ ಅನ್ನ ಹಾಗೂ 25 ಕೆಜಿಯಷ್ಟು ಕೋಳಿ ಸಾರು ಮಾಡಿ ನಾಯಿಗಳ ಹೊಟ್ಟೆ ತಣಿಸುವ ಕಾರ್ಯ ಮಾಡುತ್ತಿದೆ. ಅಲ್ಲದೆ ದಾರಿಯಲ್ಲಿ ದೊರಕುವ ದನಗಳಿಗೂ ಗಂಜಿ ತಿಳಿ, ಕಲಗಚ್ಚುಗಳನ್ನೂ ನೀಡುತ್ತಿದ್ದಾರೆ.
ಯುವಕರ ತಂಡವನ್ನು ಕಂಡಾಗ ಬೀದಿನಾಯಿಗಳು ನಾಯಿಗಳು ಓಡೋಡಿ ಬಂದು ಇವರು ಹಾಕುವ ಊಟಕ್ಕೆ ಮುಗಿ ಬೀಳುತ್ತವೆ. ಮಂಗಳೂರು ಹೊರವಲಯದ ತೊಕ್ಕೊಟ್ಟು, ಒಳಪೇಟೆ, ಪಿಲಾರ್, ಕೊಲ್ಯ, ಕೋಟೆಕಾರು, ಮಾಡೂರು, ಕೆ.ಸಿ.ರೋಡ್, ತಲಪಾಡಿ, ಉಚ್ಚಿಲ, ಸೋಮೇಶ್ವರ, ಉಳ್ಳಾಲ ಮುಂತಾದ ಕಡೆಗೆ ಕಾರಿನಲ್ಲಿ ಮೂಲಕ ತೆರಳುವ ತಂಡ ಅಲ್ಲಿನ ಬೀದಿ ಬದಿಯ ನಾಯಿಗಳಿಗೆ ಬಾಡೂಟ ನೀಡುತ್ತಿದ್ದಾರೆ.