Advertisement

ದರ್ಶನ ಇಲ್ಲದಿದ್ರೂ ಸಿಗಂದೂರಲ್ಲಿ ಭಕ್ತರ ದಂಡು

01:22 PM Jun 30, 2020 | mahesh |

ಸಾಗರ: ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದಾದ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ನಿರ್ಬಂಧ ಮುಂದುವರೆದಿದ್ದರೂ ರಾಜ್ಯದ ಬೇರೆ ಬೇರೆ ಸ್ಥಳಗಳಿಂದ ಭಕ್ತರು, ಪ್ರವಾಸಿಗರು ಖಾಸಗಿ ವಾಹನಗಳಲ್ಲಿ ಆಗಮಿಸುತ್ತಿದ್ದಾರೆ. ಇದು ಸ್ಥಳೀಯರ ಆತಂಕ ಹೆಚ್ಚಿಸಿದೆ. ರಾಜ್ಯದಲ್ಲಿ ಕೊರೊನಾ ಭಯ ತೀವ್ರವಾಗುತ್ತಿದ್ದರೂ ಲಾಕ್‌ಡೌನ್‌ ಸಡಿಲಿಕೆಯಾಗಿದ್ದರಿಂದ ಎಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಲೇ ಇದ್ದಾರೆ. ಕೆಲ ದಿನಗಳ ಹಿಂದೆ ಈ ತುಮರಿ ದ್ವೀಪದ ಹಳ್ಳಿಯೊಂದರಲ್ಲಿ ಯುವಕನೋರ್ವನಿಗೆ ಕೊರೊನಾ ಸೋಂಕು ತಗುಲಿದ್ದರೂ, ಆತ ಬೇರೆ ರಾಜ್ಯದಿಂದ ಬಂದು ಕ್ವಾರಂಟೈನ್‌ ಆಗಿದ್ದ ಹಿನ್ನೆಲೆಯಲ್ಲಿ ಸೋಂಕು ಪಸರಿಸಿರಲಿಲ್ಲ. ಆದರೆ ಈಗ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಸಿಗಂದೂರು ಪ್ರದೇಶವನ್ನು ಸೂಕ್ಷ್ಮವಾಗಿಸಿದೆ.

Advertisement

ಈಗಾಗಲೇ ತಾಲೂಕಿನ ವರದಪುರದಲ್ಲಿ ಸರ್ಕಾರದ ಸಡಿಲಿಕೆಯ ಅವಕಾಶದ ಹೊರತಾಗಿಯೂ ಶ್ರೀಧರರ ಸಮಾಧಿ ದರ್ಶನ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ನಡುವೆ ಸಿಗಂದೂರಿನಲ್ಲಿಯೂ ಭಕ್ತರಿಗೆ ನಿಷೇಧ ಮುಂದುವರಿಸಿದ್ದನ್ನು ಕ್ಷೇತ್ರದ ವ್ಯವಸ್ಥಾಪಕರಾದ ರವಿಕುಮಾರ್‌ ಕೆಲ ದಿನಗಳ ಹಿಂದೆ ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರೂ ಜನ ಸಿಗಂದೂರಿನತ್ತ ಧಾವಿಸುತ್ತಿದ್ದಾರೆ. ಜನರ ಒತ್ತಡಕ್ಕೆ ಮಣಿದು ಸಿಗಂದೂರಿನ ಚೌಡೇಶ್ವರಿಯ ದರ್ಶನ, ಪೂಜೆ, ಸೇವೆಗಳಿಗೆ ಯಾವುದೇ ರೀತಿಯಲ್ಲಿ ಅವಕಾಶ ಕೊಡಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈಗಿನ ಪರಿಸ್ಥಿತಿಯನ್ನು ಸೂಕ್ತವಾಗಿ ಅವಲೋಕಿಸಿ, ಶರಾವತಿ ಹಿನ್ನೀರಿನಲ್ಲಿ ತುಮರಿ ಭಾಗಕ್ಕೆ ಸಂಚರಿಸಲು ಸ್ಥಳೀಯರಿಗೆ ಮಾತ್ರ ಲಾಂಚ್‌ನಲ್ಲಿ ಅವಕಾಶ ಕಲ್ಪಿಸುವ ಷರತ್ತನ್ನು
ಜಿಲ್ಲಾಡಳಿತ ಜಾರಿಗೆ ತಂದು ಕೋವಿಡ್ ಆಪತ್ತಿನಿಂದ ಸ್ಥಳೀಯರನ್ನು ಕಾಪಾಡಬೇಕು ಎಂದು ತುಮರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಅವರು
ಡಿಸಿಯವರಿಗೆ ಮನವಿ ಮಾಡಿದ್ದಾರೆ.

ನಾನು ಊರಿಗೆ ಬರುವಾಗ ಬೆಂಗಳೂರು ರಿಜಿಸ್ಟ್ರೇಷನ್‌ ಇರುವ ಬಹಳಷ್ಟು ವಾಹನಗಳು ಲಾಂಚಿನಲ್ಲಿದ್ದವು. ನಿಜಕ್ಕೂ ಅಂಜಿಕೆಯಾಗುತ್ತಿದೆ. ಬೆಂಗಳೂರು ಈಗ ಅತಿ ಹೆಚ್ಚು ಕೊರೊನಾ ಸೋಂಕಿತರ ಹೊಂದಿರುವ ನಗರವಾಗಿದೆ. ಅಲ್ಲಿಂದ ಬಂದವರೊಂದಿಗೆ ಪ್ರಯಾಣಿಸುವಾಗ ಅತೀ ಎಚ್ಚರ ಅಗತ್ಯ. ಈ ಪ್ರವಾಸಿಗರು ಮಾಸ್ಕ್ ಸಹ ಧರಿಸುತ್ತಿಲ್ಲ. ತಾಲೂಕು ಆಡಳಿತದ ಗಮನ ಈ ಕಡೆ ಬಹು ಮುಖ್ಯವಾಗಿದೆ. ರಾಮಸ್ವಾಮಿ ಕಳಸವಳ್ಳಿ, ಸ್ಥಳೀಯ ಹಾಗೂ ಸಾಗರ ಬಳಕೆದಾರರ ವೇದಿಕೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next