Advertisement

Mangaluru ಹಳೆ ಬಂದರಿನಲ್ಲಿ “ಹಡಗು ಟರ್ಮಿನಲ್‌’ಗೆ ಹಸುರು ನಿಶಾನೆ

11:42 PM Nov 06, 2023 | Team Udayavani |

ಮಂಗಳೂರು: ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಮತ್ತು ಮಂಗಳೂರಿನ ನಡುವಿನ ವಾಣಿಜ್ಯ ವ್ಯವಹಾರ ಸಂಬಂಧವನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ನಗರದ ಹಳೆ ಬಂದರಿನಲ್ಲಿ ಸುಸಜ್ಜಿತ ಹಡಗು ಟರ್ಮಿನಲ್‌ ನಿರ್ಮಿಸಲು ಹಸುರು ನಿಶಾನೆ ದೊರೆತಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.

Advertisement

ಕೇಂದ್ರ ಸರಕಾರ ಹಾಗೂ ಲಕ್ಷದ್ವೀಪ ಆಡಳಿತ ಸಮೂಹದ ವತಿಯಿಂದ 65 ಕೋ.ರೂ. ವೆಚ್ಚದಲ್ಲಿ ಹಳೆ ಬಂದರಿನ ಉತ್ತರ ದಕ್ಕೆಯ 300 ಮೀಟರ್‌ ವ್ಯಾಪ್ತಿಯಲ್ಲಿ ನೂತನ ವಾಣಿಜ್ಯ ಜೆಟ್ಟಿ ನಿರ್ಮಾಣವಾಗಲಿದೆ. ಇಲ್ಲಿ ಕಾರ್ಗೋ ಜೆಟ್ಟಿ ಜತೆಗೆ 80 ಮೀ.ನ ಹಾಲಿ ಜೆಟ್ಟಿಯಲ್ಲಿ ಪ್ರಯಾಣಿಕರಿಗೆ ಸುಸಜ್ಜಿತ ಟರ್ಮಿನಲ್‌, 1 ಗೋದಾಮು ಕೂಡ ಇರಲಿದೆ.

ಏನು ಲಾಭ?
ಲಕ್ಷದ್ವೀಪದ ಬಳಕೆಗೆಂದೇ ನಿರ್ಮಿಸುವ ಈ ಜೆಟ್ಟಿ ಸರಕು ಸಾಗಾಟಕ್ಕೂ ಮಂಗಳೂರು-ಲಕ್ಷದ್ವೀಪದ ಜನರ ಪ್ರಯಾಣಕ್ಕೂ ಹೆಚ್ಚು ಅನುಕೂಲಕರ. ಸಣ್ಣ ಧಾರಣಾ ಶಕ್ತಿಯ “ಮಂಜಿ’ಗಳು ಈಗ ಹಳೆ ಬಂದರಿಗೆ ಬರುತ್ತಿದ್ದು, ಸುಸಜ್ಜಿತ ಜೆಟ್ಟಿ ನಿರ್ಮಾಣದ ಬಳಿಕ ಅಧಿಕ ಸಾಮರ್ಥ್ಯದ ಹಡಗುಗಳು ಬರುವ ಸಾಧ್ಯತೆ ಇರುವುದರಿಂದ ಎರಡೂ ಪ್ರದೇಶಗಳ ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ನಿರೀಕ್ಷಿಸಬಹುದು.

ಹಲವು ವರ್ಷಗಳ ಇತಿಹಾಸ: ಸುಮಾರು 365 ಕಿ.ಮೀ. ದೂರದಲ್ಲಿ ಇರುವ ಲಕ್ಷದ್ವೀಪ ಸಮೂಹಕ್ಕೂ ಮಂಗಳೂರಿಗೂ ವಾಣಿಜ್ಯ ವ್ಯವಹಾರದಲ್ಲಿ ನೂರಾರು ವರ್ಷಗಳ ಇತಿಹಾಸವಿದೆ. ಅಲ್ಲಿನವರು ಪ್ರಮುಖ ಆವಶ್ಯಕತೆಗಳಿಗೆ ಮುಖ್ಯವಾಗಿ ಆಶ್ರಯಿಸುವುದು ಕೇರಳದ ಕೊಚ್ಚಿ ಹಾಗೂ ಕರ್ನಾಟಕದ ಮಂಗಳೂರನ್ನು. ವ್ಯಾಪಾರಿಗಳು ಮಂಜಿ (ನೌಕೆ)ಯಲ್ಲಿ ಮಂಗಳೂರಿಗೆ ಬಂದು ಕಲ್ಲು, ಮಣ್ಣು, ಜಲ್ಲಿ, ಸಿಮೆಂಟ್‌, ಇಟ್ಟಿಗೆ, ಬ್ಲಾಕ್‌, ಸ್ಟೀಲ್‌ ಸಹಿತ ಕಟ್ಟಡ ಸಾಮಗ್ರಿ, ಅಕ್ಕಿ, ತರಕಾರಿ, ಸಂಬಾರ ಪದಾರ್ಥ ಸಹಿತ ಜೀವನಾವಶ್ಯಕ ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾರೆ. ಅಂತೆಯೇಅಲ್ಲಿಂದ ಕೆಲವು ಉತ್ಪನ್ನಗಳನ್ನು ಇಲ್ಲಿಗೆ ತರಲಾಗುತ್ತಿದೆ.

ಡ್ರೆಜ್ಜಿಂಗ್‌ಗೆ ಮೀನಮೇಷ
ಮೀನುಗಾರರಿಗೆ ಹಾಗೂ ಹಡಗುಗಳಿಗೆ ನಿತ್ಯ ಸಮಸ್ಯೆ ಆಗಿರುವ ಮಂಗಳೂರಿನ ಅಳಿವೆಬಾಗಿಲು (ನೇತ್ರಾವತಿ ಹಾಗೂ ಫಲ್ಗುಣಿ ನದಿ ಸಂಗಮಿಸಿ ಸಮುದ್ರ ಸೇರುವ ಸ್ಥಳ) ವ್ಯಾಪ್ತಿಯಲ್ಲಿ ತುಂಬಿರುವ ಹೂಳನ್ನು ಪೂರ್ಣ ಪ್ರಮಾಣದಲ್ಲಿ ಮೇಲಕ್ಕೆತ್ತುವ (ಡ್ರೆಜ್ಜಿಂಗ್‌) 29 ಕೋ.ರೂ.ಗಳ ಬಹು ನಿರೀಕ್ಷಿತ ಯೋಜನೆ ಟೆಂಡರ್‌ ಹಂತದಲ್ಲೇ ಬಾಕಿಯಾಗಿದೆ. 8 ಬಾರಿ ಟೆಂಡರ್‌ ಆಗಿದ್ದರೂ ಕಾನೂನಾತ್ಮಕ ಹಾಗೂ ತಾಂತ್ರಿಕ ಕಾರಣದಿಂದ ಕಾಮಗಾರಿ ಸಾಧ್ಯವಾಗಿಲ್ಲ. 7 ಮೀ. ಆಳಕ್ಕೆ ಡ್ರೆಜ್ಜಿಂಗ್‌ (ಹೂಳೆತ್ತುವುದು) ಈ ಯೋಜನೆಯ ಉದ್ದೇಶ. ಈಗ ಸಾಮಾನ್ಯವಾಗಿ 4 ಮೀ. ಆಳಕ್ಕೆ ಮಾತ್ರ ಡ್ರೆಜ್ಜಿಂಗ್‌ ಮಾಡಲಾಗುತ್ತಿದೆ. ದೊಡ್ಡ ಹಡಗು ಅಳಿವೆಬಾಗಿಲು ದಾಟಿ ಬರಬೇಕಾದರೆ 7 ಮೀ. ಡ್ರೆಜ್ಜಿಂಗ್‌ ಅಗತ್ಯ.

Advertisement

70 ಸಾವಿರಕ್ಕೂ ಅಧಿಕ
ಟನ್‌ ಸಾಮಗ್ರಿ ಸಾಗಾಟ
ಹಳೆಬಂದರಿನಿಂದ ಲಕ್ಷದ್ವೀಪಕ್ಕೆ ಪ್ರತೀ ವರ್ಷ ಸೆ. 15ರಿಂದ ಮೇ 15ರ ವರೆಗೆ (ಮೇ 16ರಿಂದ ಸೆ. 14ರ ವರೆಗೆ ನಿಷೇಧ) ಸರಕು ಸಾಗಾಟಕ್ಕೆ ಅವಕಾಶವಿದೆ. ಪ್ರತೀ ವರ್ಷ 70 ಸಾವಿರಕ್ಕಿಂತಲೂ ಅಧಿಕ ಟನ್‌ ಸಾಮಗ್ರಿಗಳನ್ನು ಇಲ್ಲಿಂದ ಕಳುಹಿಸಲಾಗುತ್ತದೆ.

ಲಕ್ಷದ್ವೀಪ ಹಾಗೂ ಮಂಗಳೂರು ನಡುವೆ ವಾಣಿಜ್ಯ ವ್ಯವಹಾರಕ್ಕೆ ಪೂರಕವಾಗುವ ನೆಲೆಯಲ್ಲಿ ಒಟ್ಟು 65 ಕೋ.ರೂ. ವೆಚ್ಚದಲ್ಲಿ ಹೊಸ ಜೆಟ್ಟಿ ನಿರ್ಮಾಣಕ್ಕೆ ಈಗಾಗಲೇ ಟೆಂಡರ್‌ ಆಗಿದೆ. ಪರಿಸರ, ಸಿಆರ್‌ಝಡ್‌ ಅನುಮತಿ ಸಿಕ್ಕಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು.
– ಕ್ಯಾ| ಸ್ವಾಮಿ, ನಿರ್ದೇಶಕರು, ಬಂದರು ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next