ಪ್ರತಿ ಹೆಣ್ಣಿನ ಜೀವನದಲ್ಲಿ ಅದೆಷ್ಟೋ ಪುರುಷ ಪಾತ್ರಗಳು ಬಂದು ಹೋಗುತ್ತವೆ. ಆದರೆ, ಎಲ್ಲ ಪಾತ್ರಗಳಿಗಿಂತ ವಿಶೇಷವಾದಂಥದ್ದು ತಂದೆಯ ಪಾತ್ರ ಮಾತ್ರ. ಅವಳಿಗೆ ಅಪ್ಪ ಪ್ರೀತಿಯ ಕಣಜ. ಕತ್ತಲ ದಾರಿಗೆ ದೀಪವಾಗುವ ದಾರಿಹೋಕ. ಒಡಲತುಂಬೆಲ್ಲ ದುಃಖ ತುಂಬಿಕೊಂಡು ತುಟಿಯಂಚಲಿ ನಗು ಚೆಲ್ಲುವ ಮನ್ಮಥ. ತನ್ನ ಕಪ್ಪು ಬದುಕಿನ ಮಧ್ಯೆ ಮಕ್ಕಳಿಗೆ ಬಣ್ಣ ಬಣ್ಣದ ಬದುಕು ಕಟ್ಟಿಕೊಡುವ ಕರ್ಣ. ಮನೆಯವರೆಲ್ಲರ ತುತ್ತಿಗಾಗಿ ಮೈ ಸುಲಿಯುವಂತೆ ದುಡಿಯುವ ಕೂಲಿಕಾರ ಅಂತೆಲ್ಲ ವರ್ಣಿಸುವ ಈ ಮುದ್ದುಮಗಳ ಅಕ್ಕರೆ ಎಷ್ಟು ಸಿಹಿಯೆಂಬುದನ್ನು, ಈ ಆಪ್ತ ಅಕ್ಷರಗಳ ಮೂಲಕ ಆಸ್ವಾದಿಸಿ…
ಆಗಷ್ಟೆ ಧಾರವಾಡ ರಾತ್ರಿಯು ಎರಡನೇ ಜಾವಕ್ಕೆ ಕಾಲಿಡುತ್ತಿತ್ತು. ಇಡೀ ಪೇಟೆ ಮೌನವನ್ನು ಹೊದ್ದು ಮಲಗಿತ್ತು. ಅವತ್ತು ನಾನು ಮಾತ್ರ ಸಣ್ಣಗೆ ತೆರದಿದ್ದ ಕಿಟಕಿಯ ಎದುರು ಹಿತವೆನ್ನಿಸುವಂತೆ ಬೀಸಿಬರುತ್ತಿದ್ದ ಗಾಳಿಗೆ ಮುಖ ಮುಂದೆ ಮಾಡಿ ಕುಳಿತಿದ್ದೆ. ಕಿವಿಗೆ ಕೇಳುತ್ತಿದ್ದ “ಚೌಕ’ ಸಿನಿಮಾದ ಹಾಡು ಊರಲ್ಲಿರುವ ನನ್ನ ಅಪ್ಪನನ್ನು ನೆನಪುಮಾಡಿಸಿತು. ಗೊತ್ತಿಲ್ಲದಂತೆ ಕಣ್ಣಲ್ಲಿ ನೀರಪೊರೆಯ ನಾವೆ ತೇಲಿತು.
ಪ್ರತಿ ಹೆಣ್ಣಿನ ಜೀವನದಲ್ಲಿ ಅದೆಷ್ಟೋ ಪುರುಷ ಪಾತ್ರಗಳು ಬಂದು ಹೋಗುತ್ತವೆ. ಆದರೆ, ಎಲ್ಲ ಪಾತ್ರಗಳಿಗಿಂತ ವಿಶೇಷವಾದಂಥದ್ದು ತಂದೆಯ ಪಾತ್ರ ಮಾತ್ರ. ಅವಳಿಗೆ ಅಪ್ಪ ಪ್ರೀತಿಯ ಕಣಜ. ಕತ್ತಲ ದಾರಿಗೆ ದೀಪವಾಗುವ ದಾರಿಹೋಕ. ಒಡಲತುಂಬೆಲ್ಲ ದುಃಖ ತುಂಬಿಕೊಂಡು ತುಟಿಯಂಚಲಿ ನಗು ಚೆಲ್ಲುವ ಮನ್ಮಥ. ತನ್ನ ಕಪ್ಪು ಬದುಕಿನ ಮಧ್ಯೆ ಮಕ್ಕಳಿಗೆ ಬಣ್ಣ ಬಣ್ಣದ ಬದುಕು ಕಟ್ಟಿಕೊಡುವ ಕರ್ಣ. ಮನೆಯವರೆಲ್ಲರ ತುತ್ತಿಗಾಗಿ ಮೈ ಸುಲಿಯುವಂತೆ ದುಡಿಯುವ ಕೂಲಿಕಾರ. ನನಗೆ ಅಪ್ಪಅನ್ನುವ ಗಂಡು ಜೀವ ಬೆಲೆ ಕಟ್ಟಲಾಗದಂಥ ಬಂಧು. ಭಾವಗಳ ರಾಶಿ.
ನಮ್ಮನೆಗೊಬ್ಬ ಹೊಸ ಅತಿಥಿ ಬಂದಿದ್ದಾನೆ. ಅಪ್ಪನ ಮೂಗಿನ ಮೇಲೊಂದು ಕನ್ನಡಕ ಬಂದು ಕೂತಿದೆ. ಮುದ್ದಿಸುತ್ತಿದ್ದ ಅಪ್ಪಮೂಲೆ ಸೇರುವ ಹೊತ್ತು ಹತ್ತಿರ ಬರುತ್ತಿದೆ. ಏಕೆಂದರೆ, ಅಪ್ಪನಿಗೆ ವಯಸ್ಸಾಗುತ್ತಿದೆ. ಬೆನ್ನಿಗೆ ನಾನು ಬೆಳೆದು ನಿಂತಿದ್ದೇನೆ. ಎಷ್ಟೆಂದರೆ, ಅಪ್ಪನಿಗೆ ತಿರುಗಿ ಮಾತಾಡುವಷ್ಟು ಬೆಳೆದು ಬಿಟ್ಟಿದ್ದೇನೆ.
ಎಲ್ಲಾ ಅಪ್ಪಂದಿರಂತೆ ನನ್ನ ಅಪ್ಪ ಒಂದು ದಿನವೂ ನನ್ನನ್ನು ಮುದ್ದು ಬಂಗಾರಿ, ಜಾಣ, ಕಂದ, ಗಿಣಿಮರಿ ಎಂದು ಮುದ್ದು ಮಾಡಿದವನಲ್ಲ. ತನ್ನೆಲ್ಲ ಪ್ರೀತಿಯನ್ನು ಎದೆಯೊಳಗೆ ಹುದುಗಿಕೊಂಡು ಎದುರು ಗದರುವ ಮೀಸೆಗಾರನಾಗಿಯೇ ಇದ್ದಾನೆ. ಹೆಸರೇ ಇರದ ಭಾವೈಕ್ಯತೆ ಅವನೊಳಗಿದೆ. ಆ ವ್ಯಕ್ತಿ ಕೆಲವೊಮ್ಮೆ ಮಾತ್ರ ಕಾಣಿಸುತ್ತಾನೆ. ಎಸ್ಸೆಸ್ಸೆಲ್ಸಿಯಲ್ಲಿ ಫೇಲ್ ಆಗಿ ಬರಿಗೈಲಿ ಅಪ್ಪನೆದುರು ನಿಂತಾಗ ಬೆನ್ನು ತಟ್ಟಿ ಭವಿಷ್ಯದ ದಾರಿ ತೋರಿಸಿಕೊಟ್ಟ. ಪದವಿಯಲ್ಲಿ ಮೊದಲ ಸ್ಥಾನ ಪಡೆದಾಗ ಒಳಗೊಳಗೆ ಹಿಗ್ಗಿ ಮೀಸೆ ತಿರುವಿದ. ಅವತ್ತು ಸೋತು ಕೈ ಕಟ್ಟಿ ಕುಸಿದವಳಿಗೆ ಬದುಕನ್ನು ಗೆಲ್ಲುವಂತೆ ಮಾಡಿದ್ದು ಕೇವಲ ಅಪ್ಪಮಾತ್ರ. ಅಪ್ಪನೊಂದಿಗೆ ಕಳೆದಿರುವ ಕೆಲವೊಂದು ಅದ್ಭುತವಾದ ಸಂತೋಷದ ನೆನಪುಗಳನ್ನು ಪುಟ್ಟ ಜೋಳಿಗೆಯ ತುಂಬೆಲ್ಲ ತುಂಬಿಕೊಂಡಿದ್ದೇನೆ. ಹೇಳ ಹೊರಟರೆ ಅಂತ್ಯವೇ ಇಲ್ಲ. ಅಪ್ಪ ಎತ್ತಿಕೊಂಡರೆ ಕಾಲು ನೆಲಕ್ಕೆ ತಾಗುತ್ತಿತ್ತು. ಅಷ್ಟು ದೊಡ್ಡವಳಾಗುವವರೆಗೂ ನಾನು ಅಡುಗೆ ಒಲೆಯ ಮುಂದೆಯೇ ನಿದ್ದೆ ಮಾಡುತ್ತಿದ್ದೆ. ಅಪ್ಪನೇ ಎತ್ತಿಕೊಂಡು ಹಾಸಿಗೆಯಲ್ಲಿ ಮಲಗಿಸಿ ನೆತ್ತಿ ಸವರುತ್ತಿದ್ದಿದ್ದು, ಅದೆಷ್ಟೋ ಭಾರಿ ಅಪ್ಪಎತ್ತಿಕೊಳ್ಳಲೆಂದೇ ನಾಟಕದ ನಿದ್ದೆ ಮಾಡುತ್ತಿದ್ದೆ. ಅಮ್ಮ, ಅಜ್ಜನ ಮನೆಗೆ ಹೋದಾಗ ಬೈತಲೆ ತೆಗೆದು ಎರಡು ಜಡೆ ಹಾಕಿ ಶಾಲೆಗೆ ಕಳುಹಿಸಿದ್ದು, ನಾಗರ ಪಂಚಮಿಯಂದು ರಾತ್ರಿಯಿಡೀ ಕುಳಿತು ಮದರಂಗಿ ಹಚ್ಚಿಸಿಕೊಂಡಿದ್ದು, ನನಗೆ ಕೋಲು ಹಿಡಿದು ಬಾರಿಸಲು ಬಂದ ಅಮ್ಮನಿಗೆ ಅದೇಕೋಲಿನಿಂದ ಅಪ್ಪ ಹೆದರಿಸಿದಾಗ, ನಾನು ಕೊಟ್ಟಿಗೆ ತುಂಬಾ ಕುಣಿದಿದ್ದು… ಇದಾವುದನ್ನೂ ಮರೆತಿಲ್ಲ.
ನನಗೆ ನಾಳೆ ಕಾಲೇಜ್ ಡೇ, ನನಗೊಂದು ಗ್ರಾÂಂಡ್ ಡ್ರೆಸ್ ಬೇಕು. ದೀಪಾವಳಿಗೆ ರೇಷ್ಮೆ ಸೀರೆ ಬೇಕು. ಮೊಬೈಲ್, ಲ್ಯಾಪ್‌ಟಾಪ್ ಬೇಕು. ಎಂ.ಎ. ಮಾಡುತೀನಿ, ಮೂರು ದಿನದೊಳಗೆ ದುಡ್ಡು ಬೇಕು. ದುಡ್ಡು ಕೊಡದಿದ್ದರೆ ಊಟ ಬಿಡುತ್ತೇನೆ. ನನ್ನ ಬೇಕು ಬೇಡಗಳ ಮಧ್ಯೆ ಅಪ್ಪ, ಅವನ ಬೇಕುಗಳನೆಲ್ಲ ಮರೆತು ಬಿಟ್ಟು, ಕೇಳಿದ್ದೆಲ್ಲವನ್ನೂ ಕೊಡಿಸಿದ.
ತಾನು ಮಾತ್ರ ಅದೇ ಹಳೇ ಪ್ಯಾಂಟನ್ನು ಮೂಲೆಯಲ್ಲಿ ಕುಳಿತು ಹೊಲಿದು ಕೊಳ್ಳುತ್ತಾನೆ. ಬರಗಾಲದ ಭೂಮಿಯಂತೆ ಸೀಳು ಬಿಟ್ಟ ಪಾದದಲ್ಲಿ ಅಪ್ಪ ಕಷ್ಟಪಟ್ಟು ನಡೆಯುತ್ತಿದ್ದರೆ. ಉಗುರುಗಳಿಗೆ ಬಣ್ಣವನ್ನು ಮೆತ್ತಿಕೊಂಡು ಶೋಕಿ ಮಾಡುತ್ತೀನಿ ನಾನು. ಸಕ್ಕರೆಯೇ ಇಲ್ಲದ ಪಾಯಸ ಅಪ್ಪನ ಜೀವನ.
ಇವತ್ತು ಮನೆತುಂಬ ಸಂಭ್ರಮ ತುಂಬಿತ್ತು. ಈಗಷ್ಟೆ ಅಕ್ಕನ ಮದುವೆ ಮುಗಿದಿತ್ತು. ಅಪ್ಪ ಮಾತ್ರ ಮಂಕಾಗಿದ್ದ. “ಅಪ್ಪ, ನಾನು ಬರುತ್ತೀನಿ’ ಅಂತ ರಂಪಮಾಡುತ್ತಿದ್ದವಳು, “ಇಂದು ಹೋಗಿ ಬರುತ್ತೀನಿ’ ಅಂತಿದ್ದಾಳೆ. ತನ್ನ ಕೈ ಬೆರಳು ಹಿಡಿದುಕೊಳ್ಳುತ್ತಿದ್ದ ಕೈಗಳು, ಇಂದು ಮದರಂಗಿಯಿಂದ ಕೆಂಪಾಗಿದೆ. ನನ್ನ ಗಟ್ಟಿಯಾಗಿ ಹಿಡಿದುಕೊಂಡು ಹೆಜ್ಜೆ ಹಾಕುತ್ತಿದ್ದಾಗ, ಹೆಜ್ಜೆಯ ನಿನಾದಕ್ಕೆ ಕಂಪಿಸುತ್ತಿದ್ದೆ. ಆದರೆ, ಇಂದು ಗಂಡನ ಕೈ ಹಿಡಿದು ಸಪ್ತಪದಿ ತುಳಿದಾಗ ಮಾತ್ರ… ಹೇಳುತ್ತಾ ಅಮ್ಮನೆದುರು ಕಣ್ಣೀರಾಗಿಬಿಟ್ಟಿದ್ದ ಕೆಲವೇ ವರ್ಷ ಇನ್ನೊಂದು ಮಗಳನ್ನು ಮತ್ತೆ ಹೀಗೆ ಕಳುಹಿಸಬೇಕು ಎನ್ನುತ್ತಾ ಅತೀ ಭಾವಕನಾಗಿಬಿಟ್ಟ. ಆಗ ನಾನು ಅಕ್ಷರಶಃ ಕಣ್ಣೀರಾಗಿಬಿಟ್ಟೆ. ಜೀವನದುದ್ದಕ್ಕೂ ಮರೆಯಲಾಗದ ಸನ್ನಿವೇಶವದು. ಇವುಗಳನ್ನು ಅಪ್ಪನ ಕೈ ಹಿಡಿದು ಮಡಿಲಲ್ಲಿ ತಲೆ ಇಟ್ಟು ಮಲಗಿ ಹೇಳುವ ಆಸೆ. ಆದರೆ, ಆಗುತ್ತಿಲ್ಲ.
ನಮಗೆ ತುತ್ತು ಕೊಡುವ ಅಮ್ಮ ಗ್ರೇಟ್ ಅನಿಸುತ್ತಾಳೆ. ತುತ್ತು ಸಂಪಾದಿಸುವ ಅಪ್ಪ ಯಾಕೆ ಗ್ರೇಟ್ ಆಗೊದೇ ಇಲ್ಲ? ಅವನು ಎಲ್ಲರಿಗೂ ಬೆದರೋ ಬೊಂಬೆ. ಅಷ್ಟೇ.
– ಕಾವ್ಯಾ ಭಟ್ಟ, ಜಕ್ಕೊಳ್ಳಿ