Advertisement

ಅಪ್ಪನ ನೆನೆದು ಕಣ್ಣೀರು ಹಾಕಿದ ಚಿನ್ನದ ಹುಡುಗ!

12:36 PM Apr 25, 2017 | |

ಬೆಂಗಳೂರು: ಕೃಷಿಕರಾಗಿರುವ ಅಪ್ಪ, ಅಮ್ಮನ ಕಷ್ಟಕ್ಕೆ ಹೆಗಲು ಕೊಡಬೇಕು. ಭವಿಷ್ಯವನ್ನು ಹಸನ್ನು ಮಾಡಬೇಕೆಂಬ ಛಲದಲ್ಲಿಯೇ ಓದಿದ್ದ ಮಗ ರಘುವೀರ್‌, ಕೃಷಿ ಪದವಿಯಲ್ಲಿ 11 ಚಿನ್ನದ ಪದಕ ಗಳಿಸಿದ. ಆದರೆ, ಪದಕ ಸ್ವೀಕರಿಸುವ ಹೊತ್ತಿನಲ್ಲಿ ಆತನ ಕಣ್ಣುಗಳು ಒದ್ದೆಯಾಗಿದ್ದು ಸಂತೋಷಕ್ಕಲ್ಲ, ಬದಲಿಗೆ ಅದು ನೋವಿನ ಕಣ್ಣೀರಾಗಿತ್ತು.

Advertisement

ಕೃಷಿ ಪದವಿಯಲ್ಲಿ ಖಂಡಿತ ಒಂದಾದರೂ ಚಿನ್ನದ ಪದಕ ಸಿಕ್ಕುತ್ತದೆ ಎಂಬ ಭರವಸೆ ರಘುವೀರ್‌ಗೆ ಇತ್ತು. ಆದರೆ ಸಿಗಲಿದ್ದ ಆ ಚಿನ್ನದ ಪದಕವನ್ನು ತನ್ನ ತಂದೆಯೊಂದಿಗೆ ಸ್ವೀಕರಿಸಬೇಕೆಂಬ ಆತನ ಕನಸು ಕನಸಾಗಿಯೇ ಉಳಿದು ಹೋಗಿತ್ತು. ಒಂದಲ್ಲ ಹನ್ನೊಂದು ಚಿನ್ನದ ಪದಕ ಬಂದಿವೆ. ಆದರೆ, ಆತನ ಈ ಸಾಧನೆಗೆ ಹಗಲಿರುಳು ಬೆವರು ಸುರಿಸಿ, ಮಗನ ಓದಿನ ನೊಗಕ್ಕೆ ಹೆಗಲು ಕೊಟ್ಟಿದ್ದು ಅಪ್ಪ ಮಾತ್ರ. ಆದರೆ ಮಗನ ಸಾಧನೆ ನೋಡಲು ಅಪ್ಪ ಇಲ್ಲ.  

ಕೃಷಿ ವಿಶ್ವವಿದ್ಯಾಲಯದ 51ನೇ ಘಟಿಕೋತ್ಸವದಲ್ಲಿ 11 ಚಿನ್ನದ ಪದಕಗಳನ್ನು ಕೊಳ್ಳೆ ಹೊಡೆದ ಕೊಳ್ಳೆಗಾಲದ ಹುಡುಗ ರಘುವೀರ್‌ ಅವರ ತಂದೆ ಮಾದಪ್ಪ ಕಳೆದ ಜನವರಿಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಚಿನ್ನದ ಪದಕಗಳನ್ನು ಸ್ವೀಕರಿಸುವ ವೇಳೆ ಅಪ್ಪ ನೆನಪಾಗಿ, ಚಿನ್ನದ ಹುಡುಗನ ಕಣYಳು ತೇವಗೊಳ್ಳುವಂತೆ ಮಾಡಿತ್ತು.

ಪದಕ ಸ್ವೀಕರಿಸಿದ ಬಳಿಕ ತನ್ನ ಯಶಸ್ಸಿನ ಅನುಭವವನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡ ರಘುವೀರ್‌, ತಂದೆಯ ಆಸೆಯಂತೆ ಕೃಷಿ ಪದವಿಗೆ ಸೇರಿದ್ದೆ. ಕೊಳ್ಳೆಗಾಲ ತಾಲೂಕಿನ ಹನೂರು ಹೋಬಳಿಯ ನಂಜೇಒಡೆಯರ ದೊಡ್ಡಿ ಗ್ರಾಮದ ಚಿಕ್ಕ ಕುಟುಂಬ ನಮ್ಮದು. ಅಪ್ಪ ಮಾದಪ್ಪ, ತಾಯಿ ಭಾಗ್ಯಮ್ಮ. ಒಬ್ಬ ಸಹೋದರ ಇದ್ದಾನೆ. ನನ್ನ ಓದಿಗಾಗಿ ಅಪ್ಪ ತುಂಬಾ ಕಷ್ಟು ಪಟ್ಟಿದ್ದರು.

ಅವರಿಗೆ ಕಷ್ಟವಾಗಬಾರದು, ಅತ್ಯುತ್ತಮ ಅಂಕ ಗಳಿಸಿದರೆ, ಸ್ಕಾಲರ್‌ಶಿಪ್‌ ಸಿಗುತ್ತದೆ ಎಂಬ ಕಾರಣಕ್ಕೆ ಕಷ್ಟಪಟ್ಟು ಓದಿದ್ದೆ. 11 ಚಿನ್ನದ ಪದಕ ಸಿಗುತ್ತದೆ ಎಂದು ಖಂಡಿತ ಗೊತ್ತಿರಲಿಲ್ಲ. ಆದರೆ, ಒಂದಾದರೂ ಚಿನ್ನದ ಪದಕ ಸಿಗುತ್ತದೆ. ಅದನ್ನು ಅಪ್ಪನೊಂದಿಗೆ ಸ್ವೀಕರಿಸಬೇಕೆಂಬ ಆಸೆ ಇತ್ತು. ಈಗ ಮಗನ ಸಾಧನೆ ನೋಡಲು ಅಪ್ಪನೇ ಇಲ್ಲ…ಎನ್ನುವಾಗ ಮತ್ತೆ ರಘುವೀರ್‌ ಕಣ್ಣಲ್ಲಿ ನೀರು ಇಣುಕಿತು.

Advertisement

ಕೃಷಿ ಕ್ಷೇತ್ರದಲ್ಲಿಯೇ ಸಾಧನೆ ಮಾಡುವ ಆಸೆ ಇದೆ. ಅದಕ್ಕಾಗಿಯೇ ಧಾರವಾಡ ಕೃಷಿ ವಿವಿಯಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ್ದೇನೆ. ರೈತರಿಗೆ ಅನುಕೂಲವಾಗುವಂತ ಸಾಧನೆ ಮಾಡಬೇಕೆಂಬ ಆಸೆ ಇದೆ ಎಂದರು.

ಆರತಿಗೆ ಆರು ಚಿನ್ನದ ಪದಕ
ಕೃಷಿ ಅರ್ಥಶಾಸ್ತ್ರ ವಿಭಾಗದ ಎಂ.ಎಸ್ಸಿ ಪದವಿಯಲ್ಲಿ ಆರು ಚಿನ್ನದ ಪದಕ ಪಡೆದ ಆರತಿ, ತಮ್ಮ ನಾಲ್ಕು ವರ್ಷದ ಮಗುವಿನೊಂದಿಗೆ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಇವರು 2014ನೇ ಸಾಲಿನ ಕೆಪಿಎಸ್‌ಸಿಯಲ್ಲಿ ತಹಸೀಲ್ದಾರ್‌ ಆಗಿ ಆಯ್ಕೆಗೊಂಡಿರುವುದು ಮತ್ತೂಂದು ವಿಶೇಷ. ಈ ವೇಳೆ ಮಾತನಾಡಿದ ಆರತಿ, ಪಿಯುಸಿ ಮುಗಿದ ಕೂಡಲೇ ಮದುವೆ ಆಯ್ತು. ಈ ಸಾಧನೆಗೆ ಪತಿ ಮತ್ತು ಕುಟುಂಬದವರ ನೆರವು ಕಾರಣ ಎಂದರು.

953 ಮಂದಿಗೆ ಪದವಿ
ಈ ಬಾರಿ ಘಟಿಕೋತ್ಸವದಲ್ಲಿ 646 ಸ್ನಾತಕ ಪದವಿ, 234 ಸ್ನಾತಕೋತ್ತರ ಪದವಿ ಹಾಗೂ 73 ಡಾಕ್ಟೊರಲ್‌ ಪದವಿಗಳು ಸೇರಿದಂತೆ 953 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಕೃಷಿ ವಿವಿಯ ಸಹಕುಲಾಪತಿ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ಪದವಿ ಪ್ರದಾನ ಮಾಡಿದರು. ಕುಲಪತಿ ಡಾ. ಶಿವಣ್ಣ, ಕುಲಸಚಿವ ಡಾ. ಎಂ.ಬಿ.ರಾಜೇಗೌಡ, ಹೊಸದಿಲ್ಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಮಹಾ ನಿರ್ದೇಶಕ ಹಾಗೂ  ಕೃಷಿ ಸಂಶೋಧನೆ ಮತ್ತು ಶಿಕ್ಷಣ ವಿಭಾಗದ ಕಾರ್ಯದರ್ಶಿ ಡಾ.ತ್ರಿಲೋಚನ ಮಹಾಪಾತ್ರ  ಉಪಸ್ಥಿತರಿದ್ದರು.

ಯುವಕರನ್ನು ಕೃಷಿಗೆ ಸೆಳೆಯಲು ವಿಶೇಷ ಯೋಜನೆ
ಬೆಂಗಳೂರು:  ಕೃಷಿ ಕ್ಷೇತ್ರದಿಂದ ಯುವಜನತೆ ವಿಮುಖರಾಗುತ್ತಿದ್ದು, ಅವರನ್ನು ಆಕರ್ಷಿಸಲು ಸರ್ಕಾರ ಮತ್ತು ವಿವಿಗಳು ಯೋಜನೆ ರೂಪಿಸಬೇಕಿದೆ ಎಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಮಹಾನಿರ್ದೇಶಕ ಡಾ.ತ್ರಿಲೋಚನ ಮೋಹಪಾತ್ರ ಅಭಿಪ್ರಾಯಪಟ್ಟರು.

ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೃಷಿ ಅವಲಂಬಿತರ ಸಂಖ್ಯೆ ಶೇ.50ರಿಂದ 55ಕ್ಕೆ ಕುಸಿದಿದೆ. ಯುವ ಜನತೆಯನ್ನು ಕೃಷಿಯಲ್ಲಿ ತೊಡಗುವಂತೆ ಪ್ರೇರೇಪಿಸಲು ಈ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆಗಳನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಹೇಳಿದರು.

ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಕುಲಪತಿ ಡಾ. ಶಿವಣ್ಣ, ಕುಲಸಚಿವ ಡಾ. ಎಂ.ಬಿ ರಾಜೇಗೌಡ, ಮತ್ತಿತರರು ಘಟಿಕೋತ್ಸವದಲ್ಲಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next