ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ದಸರಾ ವಸ್ತುಪ್ರದರ್ಶನ ಉದ್ಘಾಟನೆಗೊಂಡು 15 ದಿನಗಳಾದರೂ ಪ್ರವಾಸಿಗರಿಗೆ ಅಪೂರ್ಣಗೊಂಡ ಮಳಿಗೆಗಳು ದರ್ಶನ ನೀಡುತ್ತಿವೆ. ನವರಾತ್ರಿ ಮತ್ತು ವಿಜಯ ದಶಮಿ ಮುಕ್ತಾಯಗೊಂಡು ಆರು ದಿನಗಳಾದರು ವಸ್ತುಪ್ರದರ್ಶನ ಆವರಣದಲ್ಲಿ ರಾಜ್ಯದ ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿಯಿಂದ ಆರಂಭವಾಗಬೇಕಿದ್ದ ಮಳಿಗೆಗಳು ಇನ್ನೂ ನಿರ್ಮಾಣ ಹಂತದಲ್ಲಿಯೇ ಇರುವುದು ಪ್ರವಾಸಿಗರಿಗೆ ಬೇಸರ ತರಿಸಿದೆ.
ಜಿಲ್ಲೆ, ಹೊರ ಜಿಲ್ಲೆ ಹಾಗೂ ವಿವಿಧ ಭಾಗಗಳಿಂದ ದಸರಾ ವಸ್ತುಪ್ರದರ್ಶನಕ್ಕೆ ಆಗಮಿಸುವ ಪ್ರವಾಸಿಗರಿಗೆ ಫುಡ್ ಕೋರ್ಟ್, ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳ ಸೇವೆ ಲಭ್ಯವಿದೆಯೇ ಹೊರತು ಸರ್ಕಾರಿ ಇಲಾಖೆ ಮತ್ತು ಜಿಪಂಗಳಿಂದ ನಿರ್ಮಾಣವಾಗುವ ಮಳಿಗೆಗಳ ಮಾಹಿತಿ ಇಲ್ಲವಾಗಿದೆ. ಅದ್ಧೂರಿ ದಸರಾ ಹಿನ್ನೆಲೆ ವಸ್ತುಪ್ರದರ್ಶನದಲ್ಲಿಯೂ ವಿಶಿಷ್ಟವಾಗಿ ಆಯೋಜಿಸಲು ಚಿಂತನೆ ನಡೆಸಿ, ಸರ್ಕಾರದ ವಿವಿಧ ಇಲಾಖೆಗಳು, ಜಿಪಂ, ನಿಗಮ-ಮಂಡಳಿಗಳ 41 ಮಳಿಗೆ ಹಾಗೂ ಇತರೆ 250 ಮಳಿಗೆಗಳನ್ನು ವಸ್ತು ಪ್ರದರ್ಶನದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಈ ಪೈಕಿ ವಾಣಿಜ್ಯ ಮಳಿಗೆಗಳು ಈಗಾಗಲೇ ಆರಂಭವಾಗಿದ್ದು, ಫುಡ್‌ಕೋರ್ಟ್, ಬಟ್ಟೆ ಮಾರಾಟ ಮಳಿಗೆ, ಅಮ್ಯೂಸ್‌ಮೆಂಟ್ ಪಾರ್ಕ್ ಸೇರಿದಂತೆ ಹಲವು ಮಳಿಗೆಗಳು ತಲೆ ಎತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ವಿವಿಧ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ, ಸರ್ಕಾರದ ವಿವಿಧ ಇಲಾಖೆಗಳು ಇನ್ನು ಕಾರ್ಯಾರಂಭ ಮಾಡದಿರುವುದು ಪ್ರವಾಸಿಗರಿಗೆ ನಿರಾಸೆ ತರಿಸಿದೆ.
ದಸರಾ ಮಹೋತ್ಸವ ಆರಂಭಕ್ಕೂ 15 ದಿನಗಳ ಮುನ್ನ ಸಂಪೂರ್ಣ ಮಳಿಗೆಗಳೊಂದಿಗೆ ವಸ್ತು ಪ್ರದರ್ಶನ ಉದ್ಘಾಟನೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಹಾದಿಯಾಗಿ ಅಧಿಕಾರಿಗಳು ತಿಳಿಸಿದ್ದರೂ ಅದು ಸಾಧ್ಯವಾಗಲಿಲ್ಲ. ದಸರಾ ಮಹೋತ್ಸವದ ಉದ್ಘಾಟನೆ ದಿನವೇ ಅಪೂರ್ಣ ವಸ್ತುಪ್ರದರ್ಶನ ಉದ್ಘಾಟನೆಗೊಳ್ಳುವ ಮೂಲಕ ಎಂದಿನಂತೆ ಹಳೇ ಚಾಳಿ ಮುಂದುವರಿದಿದೆ.
ಬೆರಳೆಣಿಕೆಯಷ್ಟು ಮಳಿಗೆ ಮಾತ್ರ ಆರಂಭ: ಸರ್ಕಾರದ 41 ಇಲಾಖೆ, ಜಿಪಂ, ನಿಗಮ-ಮಂಡಳಿಗಳ ಮಳಿಗೆಗಳ ಪೈಕಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಳಿಗೆ, ಕೈಗಾರಿಕ ಮತ್ತು ವಾಣಿಜ್ಯ ಇಲಾಖೆ ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ, ಅರಣ್ಯ ಇಲಾಖೆ ಸೇರಿದಂತೆ ಕೆಲ ಇಲಾಖೆಯ ಮಳಿಗೆಗಳು ಮಾತ್ರ ಸಂಪೂರ್ಣ ಪೂರ್ಣಗೊಂಡು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿವೆ. ಕಾಪೋಸ್ಟ್ ಅಭಿವೃದ್ಧಿ ನಿಗಮ, ಮಂಡ್ಯ ಜಿಲ್ಲಾ ಪಂಚಾಯಿತಿ, ಮೈಲಾಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೃಷಿ ಇಲಾಖೆ, ಕಾವೇರಿ ನೀರಾವರಿ ನಿಗಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಲ ಸಂಪನ್ಮೂಲ ಇಲಾಖೆ ಸೇರಿದಂತೆ ಇನ್ನು ಹತ್ತಾರು ಇಲಾಖೆ, ನಿಗಮ, ಮಂಡಳಿಗಳ ಮಳಿಗೆಗಳು ಸಿದ್ಧವಾಗಬೇಕಿದೆ.
ಮಾಹಿತಿ ನೀಡುವ ಉದ್ದೇಶ: ದಸರಾ ವಸ್ತು ಪ್ರದರ್ಶನದಲ್ಲಿ ವಿವಿಧ ಇಲಾಖೆ, ಜಿಪಂ, ನಿಗಮ-ಮಂಡಳಿಗಳ ಮಳಿಗೆ ತೆರೆದು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಆಯಾಯಾ ಇಲಾಖೆಗಳು, ನಿಗಮ ಹಾಗೂ ಮಂಡಳಿಗಳು ತಮ್ಮ ಇಲಾಖೆಯ ಪ್ರಮುಖ ಯೋಜನೆಗಳ ಮಾಹಿತಿಗಳನ್ನು ವಸ್ತು ಪ್ರದರ್ಶನ ಆವರಣದಲ್ಲಿ ತೆರೆಯುವ ಮಳಿಗೆಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ. ದಸರಾ ವಸ್ತು ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರ ಸದರಿ ಮಳಿಗೆಗಳಿಗೆ ಭೇಟಿ ನೀಡುವ ಮೂಲಕ ಸರ್ಕಾರದ ಸಕಲ ಯೋಜನೆಗಳ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದರು. ವಸ್ತು ಪ್ರದರ್ಶನ ಉದ್ಘಾಟನೆಗೊಂಡು ಈಗಾಗಲೇ 15 ದಿನ ಕಳೆದರೂ ಬಹುತೇಕ ಸರ್ಕಾರಿ ಇಲಾಖೆಗಳ ಮಳಿಗೆಗಳು ಕಾರ್ಯಾರಂಭ ಮಾಡಿಲ್ಲ. ಇನ್ನೂ ಸಿದ್ಧತಾ ಹಂತದಲ್ಲಿಯೇ ಇವೆ. ಒಟ್ಟಾರೆ ಎಲ್ಲ ಸರ್ಕಾರಿ ಮಳಿಗೆಗಳು ಉದ್ಘಾಟನೆಯಾಗಲೂ ಕನಿಷ್ಠ 20ರಿಂದ 25 ದಿನಗಳು ಬೇಕಿದೆ.
ದಸರಾ ವಸ್ತು ಪ್ರದರ್ಶನದಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಜಿಪಂ, ನಿಗಮ-ಮಂಡಳಿಗಳ 41 ಮಳಿಗೆ ಸ್ಥಾಪನೆಗೆ ಅವಕಾಶ ನೀಡಲಾಗಿದ್ದು, ಇದರಲ್ಲಿ ಬಹುತೇಕ ಮಳಿಗೆಗಳು ಸಿದ್ಧಗೊಂಡಿವೆ. ಉಳಿದ ಮಳಿಗೆಗಳು ಕೂಡ ಆದಷ್ಟು ಬೇಗ ಪೂರ್ಣಗೊಳ್ಳಲಿವೆ. ವಾಣಿಜ್ಯ ಮಳಿಗೆಗಳನ್ನು ಪೂರ್ಣಗೊಂಡು ಸೇವೆ ನೀಡುತ್ತಿವೆ. ● ಕೆ.ರುದ್ರೇಶ್, ಸಿಇಒ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ.
– ಸತೀಶ್ ದೇಪುರ