ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ನಾನು ಸ್ವಯಂಸೇವಕನಾಗಿದ್ದೆ. ಸ್ವಯಂಸೇವಕರ ಲಿಸ್ಟಲ್ಲಿ ನನ್ನ ಹೆಸರಿದ್ದಿದ್ದು ನನಗೇ ಗೊತ್ತಿರಲಿಲ್ಲ. ಸ್ನೇಹಿತರು ನನಗೆ ತಿಳಿಯದಂತೆ ನನ್ನ ಹೆಸರನ್ನು ಸೇರಿಸಿಬಿಟ್ಟಿದ್ದರು. ಅವರಿಗೆ ಬೈದುಕೊಂಡೇ ಅಲ್ಲಿಗೆ ಹೋದರೆ, ಅಲ್ಲಿ ಬೆಳ್ಳಂಬೆಳಗ್ಗೆಯೇ ಚೆಂದ ಚೆಂದದ ಸ್ವಯಂಸೇವಕ ಹುಡುಗಿಯರು ನೆರೆದಿದ್ದರು. ಅವರನ್ನೆಲ್ಲಾ ನೋಡಿ, ಅವರ ಜೊತೆ ಕೆಲಸ ಮಾಡುವ ನನ್ನ ಭಾಗ್ಯವನ್ನು ನೆನೆದು ನನ್ನ ಕಾಲುಗಳು ನೆಲದ ಮೇಲೆ ನಿಲ್ಲಲೇ ಇಲ್ಲ.
ನನ್ನಲ್ಲಾ ಆಸೆಗಳಿಗೆ ತಣ್ಣೀರೆರಚುವಂತೆ ಅಲ್ಲಿ ನನ್ನ ಜೊತೆ ಕೆಲಸ ಮಾಡಲು ಸಿಕ್ಕ ಪಾರ್ಟ್‌ನರ್ ಹುಡುಗನಾಗಿದ್ದ. ನಾನೂ ಬೇಸರದಿಂದಲೇ ಕೆಲಸ ಮಾಡತೊಡಗಿದೆ. ಹುಡುಗಿಯರೆಲ್ಲಾ ಅತ್ತ ಕಡೆ ಕಿಲ ಕಿಲ ನಗುತ್ತಾ ಓಡಾಡುತ್ತಿದ್ದರೆ ನಾನು ಮಾತ್ರ ಇವನ ಜೊತೆ ಏಗುತ್ತಿದ್ದೆ. ಅಷ್ಟರಲ್ಲಿ ಆಪತಾºಂಧವನಂತೆ ಬಂದ ಒಬ್ಬ ನನ್ನ ಕೈಗೆ ಕ್ಯಾಮೆರಾ ಕೊಟ್ಟು “ಇನ್ನು ನಿನಗೆ ದಿನವಿಡೀ ಫೋಟೋ ತೆಗೆಯುವುದಷ್ಟೇ ಕೆಲಸ’ ಎಂದು ಹೇಳಿ ಪ್ರಮೋಷನ್ ನೀಡಿದ. ಆ ಮಹಾನುಭಾವನಿಗೆ ಮನದಲ್ಲೇ ವಂದಿಸಿ ಕ್ಯಾಮೆರಾ ನೇತು ಹಾಕಿಕೊಂಡು ಹೊರಟೆ. ಅಲ್ಲಿಯವರೆಗೆ ನಾನು ಕ್ಯಾಮೆರಾ ಬಳಸಿದ್ದೇ ಇಲ್ಲ. ಅದೇ ಮೊದಲ ಬಾರಿಯಾದರೂ ಏನೋ ದೊಡ್ಡ ಫೋಟೋಗ್ರಾಫರ್ ಎಂಬಂತೆ ಪೋಸು ಕೊಡುತ್ತಾ ಅತ್ತಿಂದಿತ್ತ ಅಡ್ಡಾಡಿದೆ.
ಸಿಕ್ಕ ಸಿಕ್ಕ ಫೋಟೋಗಳನ್ನು ಕ್ಲಿಕ್ಕಿಸತೊಡಗಿದ್ದ ಸಂದರ್ಭದಲ್ಲಿ ಕಣ್ಣಿಗೆ ಬಿದ್ದಳು ನೋಡಿ ಒಬ್ಬಳು ಸ್ವಯಂಸೇವಕ ಸುಂದರಿ! ಆ ಕ್ಷಣಕ್ಕೆ ನನ್ನ ಹೃದಯಬಡಿತವೇ ನಿಂತುಹೋಯಿತು. ಏನಾದರೂ ಆಗಲಿ, ನನ್ನ ಕೈಯಿಂದ ಕ್ಯಾಮೆರಾ ಕಿತ್ತುಕೊಂಡರೂ ಚಿಂತೆಯಿಲ್ಲ, ಅವಳ ಫೋಟೋಗಳನ್ನೇ ನಾನು ಕ್ಲಿಕ್ಕಿಸುತ್ತೇನೆ ಎಂದು ಪಣ ತೊಟ್ಟೆ. ಮೊದಲು ಅವಳ ಪರಿಚಯ ಮಾಡಿಕೊಳ್ಳಬೇಕಲ್ಲ… ಬಳಿಗೆ ಹೋಗಿ ಮಾತನಾಡಿಸಿದೆ. ಅವಳು ಸಾಫ್ಟ್ವೇರ್ ಕಂಪನಿ ಉದ್ಯೋಗಿಯೆಂದು ಗೊತ್ತಾಯಿತು. ಒಂದೆರಡು ಚಟಾಕಿಯನ್ನೂ ಹಾರಿಸಿದೆ. ಅವಳು ಮನಸೋ ಇಚ್ಚೆ ನಕ್ಕಳು.
ಅವಳ ಮೊಬೈಲ್ ನಂಬರ್ ಕೇಳ್ಳೋಣ ಅಂದುಕೊಂಡೆ. ಆಮೇಲೆ ಹಿಂಜರಿದೆ. ನಾನಾಗಿಯೇ ಕೇಳಿ ಸುಮ್ಮನೆ ನನ್ನ ಸ್ಕೋಪು ಕಳೆದುಕೊಳ್ಳೋದು ಬೇಡಾ ಅಂತ. ಅದೂ ಅಲ್ಲದೆ ಅಷ್ಟು ಚೆಂದಕ್ಕಿರುವ ಹುಡುಗಿಯನ್ನು ಈ ಹಿಂದೆ ಅದೆಷ್ಟು ಮಂದಿ ಹುಡುಗರು ಅಪ್ರೋಚ್ ಮಾಡಿರುತ್ತಾರೋ ಎಂದೂ ಯೋಚಿಸಿದೆ. ಅದಕ್ಕೇ ನನ್ನ ಕೇಸ್‌ನಲ್ಲಿ ಅವಳೇ ನನ್ನ ನಂಬರ್ ಕೇಳಿ ಪಡೆದುಕೊಳ್ಳುವಂತೆ ಮಾಡಬೇಕು ಅಂತ ಡಿಸೈಡ್ ಮಾಡಿದೆ.
ಅದಕ್ಕೇ ಅವಳಿಗೆ ತಿಳಿಯದಂತೆ ಅವಳ ಫೋಟೋ ಕ್ಲಿಕ್ಕಿಸಿದೆ. ತುಂಬಾ ಚೆನ್ನಾಗಿ ಮೂಡಿಬಂದ ಪೋಟೋವನ್ನು ಅವಳಿಗೆ ತೋರಿಸಲೇಬೇಕು ಅಂದುಕೊಂಡೆ. ಆದರೆ ಅವಳಿಗೆ ಗೊತ್ತಿಲ್ಲದಂತೆ ತೆಗೆದಿದ್ದರಿಂದ ಅವಳೆಲ್ಲಿ ಬೈದುಬಿಡುತ್ತಾಳ್ಳೋ ಅಂತ ಅದಕ್ಕೂ ಸಿದ್ಧನಾಗಿಯೇ ಅವಳ ಹತ್ತಿರ ಹೋಗಿ ಫೋಟೋ ತೋರಿಸಿದೆ. ಅವಳು “ವ್ಹಾವ್’ ಎಂದು ಕುಣಿದಾಡಿದಳು. ಅವಳೇ ಖುಷಿ ಪಟ್ಟ ಮೇಲೆ ಮೇಲಿಂದ ಮೇಲೆ ಪೋಟೋಗಳನ್ನು ಕ್ಲಿಕ್ಕಿಸತೊಡಗಿದೆ. ಅನೇಕ ಸಲ ಗ್ರೂಪ್ ಪೋಟೋ ಅಂತ ಹೇಳಿ ಸ್ವಯಂಸೇವಕರನ್ನೆಲ್ಲಾ ನಿಲ್ಲಿಸಿ ಬರಿ ಅವಳನ್ನು ಮಾತ್ರ ಸೆರೆಹಿಡಿಯುತ್ತಿದ್ದೆ.
ಅವಳ ಫೋಟೋಗಳನ್ನು ನೋಡಿ ಅವಳು ಅವುಗಳನ್ನು ವಾಟ್ಸಾಪ್ ಮಾಡುವಂತೆ ದುಂಬಾಲು ಬಿದ್ದಳು. ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲಪ್ಪಾ ಅಂದುಕೊಂಡೆ. ಫೋಟೋಗಳನ್ನು ಕೊಡಲು ಕ್ಯಾಮೆರಾ ನನ್ನದಲ್ಲವಲ್ಲ, ಆದರೆ ಕ್ಯಾಮೆರಾ ನನ್ನದೇ ಎಂದುಕೊಂಡಿದ್ದ ಅವಳಿಗೆ ನಿರಾಸೆ ಮಾಡಲು ಮನಸ್ಸಾಗಲಿಲ್ಲ. ಅದಕ್ಕೇ ಆ ವಿಷಯ ಅಲ್ಲಿಗೆ ಮುಚ್ಚಿಟ್ಟು ನನ್ನದೇ ಮೊಬೈಲಿನಲ್ಲಿ ಫೋಟೋ ಕ್ಲಿಕ್ಕಿಸಲು ಶುರುಮಾಡಿದೆ. ಆ ಪೋಟೋಗಳನ್ನೂ ಅವಳು ಮೆಚ್ಚಿಕೊಂಡಳು. ಈಗ ಅವಳೇ ನನ್ನ ನಂಬರ್ ಕೇಳಿ ಪಡೆದು, ಒಂದು ಮಿಸ್‌ಕಾಲ್ ಕೊಟ್ಟು ನಂಬರ್ ಸೇವ್ ಮಾಡಿಕೊಳ್ಳುವಂತೆ ಹೇಳಿದಳು. ಅಂತೂ ಅವಳೇ ನನ್ನ ನಂಬರ್ ಕೇಳುವಂತೆ ಮಾಡುವಲ್ಲಿ ನಾನು ಸಫಲನಾಗಿದ್ದೆ.
ಅವಳೀಗ ನನ್ನ ಬೆಸ್ಟ್ ಫ್ರೆಂಡ್!
– ಮೋಹನ ಬಿ.ಎಂ., ಮೈಸೂರು