ಹೊಸದಿಲ್ಲಿ: ವಿಪಕ್ಷಗಳ “ಐಎನ್‌ಡಿಐಎ ಒಕ್ಕೂಟದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ. ಉತ್ತರಪ್ರದೇಶ, ಬಿಹಾರ, ತಮಿಳುನಾಡಿನ ಬಳಿಕ ಈಗ ಪಶ್ಚಿಮ ಬಂಗಾಲದಲ್ಲೂ ಮಿತ್ರಪಕ್ಷಗಳ ನಡುವೆ ಒಡಕು ಮೂಡಿದ್ದು, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕಿಡಿಕಾರಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ದೀದಿ ಮತ್ತು ಕಾಂಗ್ರೆಸ್ ನಡುವೆ ತಿಕ್ಕಾಟ ಆರಂಭವಾಗಿದೆ. ಪ. ಬಂಗಾಲದಲ್ಲಿ ಕಾಂಗ್ರೆಸ್‌ಗೆ ಕೇವಲ 2 ಸೀಟುಗಳನ್ನು ನೀಡುವುದಾಗಿ ಟಿಎಂಸಿ ಹೇಳಿರುವುದೇ ಈ ವಾಗ್ಯುದ್ಧಕ್ಕೆ ಕಾರಣ ಎನ್ನಲಾಗಿದೆ.
ಗುರುವಾರ ಮಮತಾ ವಿರುದ್ಧ ಕಿಡಿಕಾರಿದ ಅಧೀರ್ ರಂಜನ್, ವಿಪಕ್ಷಗಳ ಒಕ್ಕೂಟವನ್ನು ಬಲಪಡಿಸುವ ಬದಲಾಗಿ ಬಂಗಾಲದಲ್ಲಿ ಆಡಳಿತಾರೂಢ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರ ಸೇವೆಯಲ್ಲಿ ತೊಡಗಿದೆ. ಕಾಂಗ್ರೆಸ್ ಪಕ್ಷವು ಸೀಟಿಗಾಗಿ ಟಿಎಂಸಿ ಮುಂದೆ ಭಿಕ್ಷೆ ಬೇಡುವುದಿಲ್ಲ ಎಂದಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಟಿಎಂಸಿ, ಬಾಯಿಗೆ ಬಂದಂತೆ ಮಾತನಾಡುವ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆ ಅಸಾಧ್ಯ ಎಂದಿದೆ.
ವಿಪಕ್ಷಗಳ ಒಕ್ಕೂಟ ಬಲಪಡಿಸುವ ಬದಲಾಗಿ ಟಿಎಂಸಿ ಪಕ್ಷವು ಪ್ರಧಾನಿಯ ಸೇವೆಯಲ್ಲಿ ತೊಡಗಿದೆ. ಕಾಂಗ್ರೆಸ್ ಸೀಟಿಗಾಗಿ ಟಿಎಂಸಿ ಮುಂದೆ ಭಿಕ್ಷೆ ಬೇಡದು.
-ಅಧೀರ್ ರಂಜನ್