ಹೈದರಾಬಾದ್: ಪಂಚರಾಜ್ಯಗಳ ಚುನಾವಣೆ ಪೈಕಿ ಕೊನೆಯ ಹಂತದಲ್ಲಿ, ನ.30ರಂದು ಮತದಾನ ನಡೆಯಲಿರುವ ತೆಲಂಗಾಣದಲ್ಲಿ ಮಂಗಳವಾರ ಬಹಿರಂಗ ಪ್ರಚಾರ ಮುಕ್ತಾಯವಾಗಿದೆ. ಕೊನೆಯ ಕ್ಷಣದಲ್ಲಿ ಆಡಳಿತಾರೂಡ ಬಿಆರ್‌ಎಸ್, ಕಾಂಗ್ರೆಸ್, ಬಿಜೆಪಿ, ಜನಸೇನಾ ಪಕ್ಷದ ಅಗ್ರೇಸರ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರು ಬಿರುಸಿನ ಪ್ರಚಾರ ನಡೆಸಿದ್ದರು.
ಇದೇ ವೇಳೆ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ತೆಲಂಗಾಣದ ಜನರು ನಮ್ಮ ಪಕ್ಷಕ್ಕೇ ಮತ ಚಲಾಯಿಸಬೇಕು.. ಈ ಮೂಲಕ ರಾಜ್ಯದಲ್ಲಿ ಬದಲಾವಣೆ ತರಲು ನೆರವಾಗಬೇಕು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ತೆಲಂಗಾಣದ ಜನರು ತಮಗೆ ಮತ್ತು ಕಾಂಗ್ರೆಸ್‌ಗೆ ತೋರಿದ ಪ್ರೀತಿಯ ಬಗ್ಗೆ ಋಣಿಯಾಗಿರುವುದಾಗಿ ಸೋನಿಯಾ ಹೇಳಿಕೊಂಡಿದ್ದಾರೆ. “ನೀವು ನನ್ನನ್ನು ಸೋನಿಯಾ ಅಮ್ಮಾ ಎಂದು ಕರೆದು ಗೌರವ ಸಲ್ಲಿಸಿದ್ದೀರಿ. ಅದಕ್ಕಾಗಿ ಯಾವತ್ತೂ ಋಣಿಯಾಗಿರುವೆ. ಪ್ರಚಾರಕ್ಕಾಗಿ ಬರಲು ಸಾಧ್ಯವಾಗಲಿಲ್ಲ. ಆದರೆ, ನೀವೆಲ್ಲರೂ ನನ್ನ ಹೃದಯಕ್ಕೆ ಹತ್ತಿರವಾಗಿದ್ದೀರಿ’ ಎಂದು ತಿಳಿಸಿದ್ದಾರೆ.
ದೇಶದಲ್ಲಿ ದ್ವೇಷ ಕೊನೆಗೊಳಿಸುವೆ: ದೇಶದಲ್ಲಿ ದ್ವೇಷದ ವಾತಾವರಣ ಕೊನೆಗೊಳಿಸುವೆ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ತೆಲಂಗಾಣದ ನಾಂಪಳ್ಳಿ ಎಂಬಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಹೇಳಿದ್ದಾರೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದರು..
“ಭಾರತ್ ಜೋಡೋ ಯಾತ್ರೆಯ ಅವಧಿಯಲ್ಲಿ ಕಾಂಗ್ರೆಸ್ ದ್ವೇಷದ ಮಾರುಕಟ್ಟೆಯಲ್ಲಿ ಪ್ರೇಮದ ಮಳಿಗೆ ಎಂಬ ಹೊಸ ಪದ ರೂಪಿಸಿತು. ಮೊದಲ ಬಾರಿಗೆ ಮಾನನಷ್ಟ ವಿಚಾರದಲ್ಲಿ ಮೊದಲ ಬಾರಿಗೆ ಲೋಕಸಭೆಯ ಸದಸ್ಯತ್ವವನ್ನು ರದ್ದು ಮಾಡಲಾಯಿತು’ ಎಂದರು. ನನ್ನ ವಿರುದ್ಧ ಇ.ಡಿ ಮತ್ತು ಸಿಬಿಐ ಯಾವತ್ತೂ ಸುತ್ತುತ್ತಿರುತ್ತವೆ. ಆದರೆ, ಸಂಸದ ಅಸಾದುದ್ದೀನ್ ಒವೈಸಿ ವಿರುದ್ಧ ಯಾಕೆ ತನಿಖಾ ಸಂಸ್ಥೆಗಳು ದನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಭಿವೃದ್ಧಿ; ಹುದ್ದೆಯಲ್ಲ: ನನಗೆ ರಾಜ್ಯದ ಅಭಿವೃದ್ಧಿಯೇ ಆದ್ಯತೆಯೇ ಹೊರತು ಹುದ್ದೆಯಲ್ಲ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ. ಗಜ್ವೆಲ್ ಮತ್ತು ವರಂಗಲ್‌ಗಳಲ್ಲಿ ಅವರು ಮಾತನಾಡಿದರು. ಇಂದಿರಾ ಗಾಂಧಿ ಮಾದರಿ ಆಡಳಿತ ಜಾರಿಗೊಳಿಸುತ್ತೇವೆ ಎಂಬ ಕಾಂಗ್ರೆಸ್ ವಾಗ್ಧಾನ ಟೀಕಿಸಿದರು. ಇಂದಿರಾ ಅವಧಿಯಲ್ಲಿ ಎನ್‌ಕೌಂಟರ್, ಕೊಲೆಗಳು ನಡೆದಿವೆ. ಕಾಂಗ್ರೆಸ್ ಗೆದ್ದರೆ ನಮ್ಮ ರಾಜ್ಯದಲ್ಲಿ ಅದು ಪುನರಾವರ್ತನೆ ಆಗಲಿದೆ ಎಂದು ದೂರಿದರು.