ಹೊಸದಿಲ್ಲಿ : ಈಗಷ್ಟೇ ಮುಗಿದಿರುವ ಸಂಸತ್ತಿನ ಚಳಿಗಾಲದ ಅಧಿವೇಶನ ಅತ್ಯಂತ ಫಲಪ್ರದವಾಗಿತ್ತು ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದ್ದಾರೆ.
ಈ ಅಧಿವೇಶನದಲ್ಲಿ ಲೋಕಸಭೆ ಕಾರ್ಯಫಲ ಶೇ.91.28 ಆಗಿದ್ದರೆ ರಾಜ್ಯಸಭೆಯದ್ದು ಶೇ.56.29 ಆಗಿತ್ತು ಎಂದವರು ಹೇಳಿದರು.
ಈ ಅಧಿವೇಶನದಲ್ಲಿ ಲೋಕಸಭೆ ಒಟ್ಟು 13 ಮಸೂದೆಗಳನ್ನು ಪಾಸ್ ಮಾಡಿತು; ರಾಜ್ಯಸಭೆ 9 ಮಸೂದೆಗಳನ್ನು ಪಾಸ್ ಮಾಡಿತು. ಚಳಿಗಾಲದ ಅಧಿವೇಶ ಒಟ್ಟು 13 ದಿನಗಳ ಕಾಲ ನಡೆಯಿತು ಎಂದು ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಅನಂತ ಕುಮಾರ್ ಹೇಳಿದರು.
ಈ ಅಧಿವೇಶನದಲ್ಲಿ 17 ಮಸೂದೆಗಳನ್ನು ಪರಿಚಯಿಸಲಾಯಿತು; 12 ಮಸೂದೆಗಳು ಉಭಯ ಸದನದಲ್ಲಿ ಪಾಸಾದವು; ಆ ಮೂಲಕ ಚಳಿಗಾಲದ ಈ ಅಧಿವೇಶನವನ್ನು ಅತ್ಯಂತ ಫಲಪ್ರದವಾಗಿ ನಡೆಸಿಕೊಟ್ಟ ಉಭಯ ಸದನಗಳ ಎಲ್ಲ ಸದಸ್ಯರಿಗೆ ನನ್ನ ಕೃತಜ್ಞತೆಗಳು’ ಎಂದು ಅನಂತ ಕುಮಾರ್ ಹೇಳಿದರು.
ತ್ರಿವಳಿ ತಲಾಕನ್ನು ಅಪರಾಧೀಕರಿಸುವ ಮಸೂದೆ ಲೋಕಸಭೆಯಲ್ಲಿ ಪಾಸಾದರೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಅದನ್ನು ದಿನಕ್ಕೊಂದು ನೆಪಗಳನ್ನು ಮುಂದಿಟ್ಟುಕೊಂಡು ತಡೆಹಿಡಿಯಿತು ಎಂದು ಕುಮಾರ್ ಹೇಳಿದರು.
ಚಳಿಗಾಲದ ಅಧಿವೇಶನ ಡಿ.15ರಂದು ಪ್ರಾರಂಭಗೊಂಡು ಜನವರಿ 5ರ ವರೆಗೆ ನಡೆಯಿತು. ಒಟ್ಟು 22 ದಿನಗಳ ಅವಧಿಯಲ್ಲಿ 13 ಬೈಠಕ್‌ಗಳು ಸಾಗಿದವು; ಎರಡೂ ಸದನಗಳನ್ನು ಇಂದು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು ಎಂದವರು ಹೇಳಿದರು.