“ಏ ಇವನದೇನು ಕರ್ಮ ಸ್ವಲ್ಪ ಮೆಲ್ಲನೆ ಬ್ರೇಕ್ ಹಾಕೋಕೆ ಆಗಲ್ವಾ?’ ಈ ಮಾತುಗಳು ಬಸ್‌ಗಳಲ್ಲಿ ಸರ್ವೇ ಸಾಮಾನ್ಯ. ಆದರೆ ಆ ಬ್ರೇಕ್ ಒತ್ತದಿದ್ದರೆ ಮುಂದಾಗಬಹುದಾಗಿದ್ದ ಅನಾಹುತದ ಬಗ್ಗೆ ಮನಸ್ಸು ಚಿಂತಿಸುವುದಿಲ್ಲ. ಆ ಕ್ಷಣದ ಮಟ್ಟಿಗೆ ತಮ್ಮ ಅಸಹನೆಯನ್ನು ಹೊರಹಾಕಿದರಾಯಿತಷ್ಟೆ.
ಚಾಲಕರು ಯಾವ ಕಾರಣಕ್ಕೆ ಬ್ರೇಕ್ ಒತ್ತಿದರೆಂಬುದನ್ನು ಚಿಂತಿಸುವ ಗೊಡವೆಗೆ ಹೋಗದ ಬಹಳಷ್ಟು ಜನರು ಕಾಣಸಿಗುತ್ತಾರೆ. ಚಾಲನ ವೃತ್ತಿ ಎಂದರೆ, ನೋಡುಗರಿಗೆ ಸ್ಟೇರಿಂಗ್ ತಿರುಗಿಸಿ, ಗೇರ್ ಅನ್ನು ಬದಲಾಯಿಸಿ, ಕ್ಲಚ್ ಬಿಟ್ಟು, ಆಕ್ಸಿಲೇಟರ್ ಮೇಲಿನ ಒತ್ತಡ ಹೆಚ್ಚಿಸುವುದು ಇಷ್ಟೇ. ಆದರೆ ಚಾಲಕ/ಚಾಲಕಿ ತನ್ನೆಲ್ಲಾ ಗಮನವನ್ನು ರಸ್ತೆಯತ್ತ ಹಾಗೂ ತನ್ನ ಎಡಬಲ ದಿಕ್ಕುಗಳತ್ತ ಹಾಯಿಸಿಕೊಂಡು ರಸ್ತೆಯಲ್ಲಿ ಸಂಚರಿಸುವುದು, ಇನ್ನಿತರ ಎಂಜಿನಿಯರಿಂಗ್, ಆಫೀಸ್ ಕೆಲಸಗಳಂತೆಯೇ. ಎಲ್ಲರಿಗೂ ಈ ಚಾಲನ ವೃತ್ತಿಯಲ್ಲಿ ಚಾಕಚಕ್ಯತೆ ಸಿದ್ಧಿಸುವುದಿಲ್ಲ.
ಗಂಟೆಗಟ್ಟಲೆ ಕುಳಿತಲ್ಲೇ ಒಂದೇ ಆಯಾಮದಲ್ಲಿ ಕುಳಿತು, ತನ್ನ ಹಿಂದೆ ಕುಳಿತ ಪ್ರಯಾಣಿಕರನ್ನು ಗಮ್ಯ ತಲುಪಿಸುವಲ್ಲಿ ತನ್ನ ಸಂಪೂರ್ಣ ಶ್ರಮವನ್ನು ಹೂಡುತ್ತಾರೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಬರುವ ಇತರ ವಾಹನಗಳ ನಡುವೆ ತನ್ನ ವಾಹನವನ್ನು ಸುರಕ್ಷಿತವಾಗಿ ದಡ ಮುಟ್ಟಿಸುವ ಚಾಲಕ, ಚಾಲಕಿಯರು ನಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ.
ಆತ್ಮೀಯರೊಬ್ಬರು ನೂತನವಾಗಿ ನಿರ್ಮಿಸಿದ ಮನೆಯ ಗೃಹ ಪ್ರವೇಶ ಸಮಾರಂಭದ ಸಲುವಾಗಿ ಮಡಿಕೇರಿಯಿಂದ ಒಂದು ಚಿಕ್ಕ ಪಟಾಲಾಂನೊಂದಿಗೆ ಬೇಲೂರಿಗೆ ಹೋಗಿದ್ದೆವು. ಕಿರಿಕ್ ಸ್ನೇಹಿತರು ಜತೆಗಿದ್ದಾಗ ಮಾಮೂಲಿ ಮಂಗಾಟಗಳು ಸಾಮಾನ್ಯ. ಬೆಳಗ್ಗೆ ಆರೂವರೆಗೆ ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಸವಾರಿ ಹೊರಟು ಫಂಕ್ಷನ್ ಇರೋ ಮನೆ ತಲ್ಪಿ, ಜನಸಾಗರದ ಮಧ್ಯೆ ಕಾದು, ಕೊನೆ ಪಂಕ್ತಿಯಲ್ಲಿ ಸಸ್ಯಹಾರಿ ಊಟ ಮಾಡಿ ಆಯ್ತು. ಅಲ್ಲಿಂದ ಹೊರಟು ಬರುವಾಗ ಬಸ್ ರಶ್‌ಯಿದ್ದು ಡ್ರೈವರ್ ಹತ್ತಿರದ ಸೀಟ್‌ಗಳು ಮಾತ್ರ ಖಾಲಿ ಇದ್ದಿದ್ದರಿಂದ ನಾವು ಅಲ್ಲಿ ಕುಳಿತೆವು. ಆವಾಗ ಅರಿವಾಗಿದ್ದು ಬಸ್ ಚಾಲನೆಯ ಹೊಸ ಅನುಭವ. ಮುಂಭಾಗದ ಗಾಜಿಗೆ ಹತ್ತಿರವಾಗಿ ಕುಳಿತ ನಮಗೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಾಯಿಸುವ, ಹಾರನ್ ಕಿವಿ ಹಿಂಡಿದರೂ ಜಡ ಸ್ವಭಾವದ ಜನ ದಾರಿ ಬಿಡದಿರುವುದು, ತಾನೂ ಹೋಗಲಾರ-ಹೋಗುವವರನ್ನೂ ಬಿಡಲಾರದವರು ಹೀಗೆ ವಿಚಿತ್ರ ವಿಚಿತ್ರ ಹೊಸ ಅನುಭವಗಳು.
ನಾವು ಸಂಚರಿಸುತ್ತಿದ್ದ ಬಸ್‌ನ ಚಾಲಕ ಶಂಕರ ಕಾಂಬ್ಳಿ ಸರ್. ಅದೆಷ್ಟು ತಾಳ್ಮೆಯಿಂದ ಬಸ್ ಚಾಲನೆ ಮಾಡುತ್ತಿದ್ದರೆಂದರೆ, ಬಸ್‌ನಲ್ಲಿರುವ ಅಷ್ಟೂ ಜನರ ಸುರಕ್ಷತೆಯ ದೃಷ್ಟಿಯಿಂದ, ರಸ್ತೆಯಲ್ಲಿ ಇತರ ವಾಹನಗಳು ತಮ್ಮ ಸುಗಮ ಸಂಚಾರಕ್ಕೆ ಅಡೆತಡೆ ಮಾಡಿದಾಗ ಯಾವುದೇ ರೀತಿ ಕೋಪಗೊಳ್ಳದೆ, ನಿರ್ಲಕ್ಷ್ಯ ಮಾಡದೆ ತಾಳ್ಮೆ ಹಾಗೂ ಶ್ರದ್ಧೆಯಿಂದ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ನಾನು ಗಮನಿಸಿದಂತೆ ಸರಕಾರಿ ವಾಹನವೆಂದು ಬಸ್‌ಅನ್ನು ಯದ್ವಾತದ್ವಾ ಚಲಾಯಿಸದೆ ತಮ್ಮದೇ ಸ್ವಂತ ವಾಹನವೆಂಬ ರೀತಿಯಲ್ಲಿ ಚಾಲನೆ ಮಾಡುತ್ತಿದ್ದರು.
ರಸ್ತೆಯಲ್ಲಿ ಕುರಿಮಂದೆಯನ್ನು ಕರೆತರುತ್ತಿದ್ದ ಹಳ್ಳಿಗರೋರ್ವರು ತಮ್ಮ ಕುರಿಗಳ ಗುಂಪನ್ನು ನಿಯಂತ್ರಿಸಲಾಗದೆ ದೂರದಿಂದಲೇ ನಿಲ್ಲಿಸಿ ಎನ್ನುವುದನ್ನು ಗುರುತಿಸಿ ಕುರಿಗಳು ರಸ್ತೆ ದಾಟಿದ ಅನಂತರ ಆ ವ್ಯಕ್ತಿಗೆ ಏನನ್ನೂ ಹೇಳದೆ ಮುಂದೆ ಸಾಗಿದರು. ಪ್ರಯಾಣದುದ್ದಕ್ಕೂ ನನಗೆ ಹಿಡಿಸಿದ್ದು ಅವರ ತಾಳ್ಮೆ ಮತ್ತು ಡ್ರೈವಿಂಗ್ ಮೇಲಿನ ಹಿಡಿತ.
ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಈ ರೀತಿಯ ಸಿಬಂದಿ ಕಡಿಮೆ. ಬಹಳಷ್ಟು ಸಿಬಂದಿ ಪ್ರಯಾಣದ ವಿವರಗಳನ್ನು ವಿಚಾರಿಸಿದಾಗ ಸಿಡುಕು ಮೋರೆಯಿಂದ ಉತ್ತರಿಸುವ ದಿನಗಳಲ್ಲಿ, ಯಾವುದೇ ರೀತಿಯ ಸಿಡುಕುತನ ತೋರದ, ಸೌಮ್ಯವಾಗಿ, ಮನಮುಟ್ಟುವಂತೆ ಸಂಭಾಷಣೆ ನಡೆಸುವ ಶಂಕರ ಅವರು ಬಹಳ ವಿಶೇಷ. ಇವರಂತೆ ಸೌಜನ್ಯವಾಗಿ ವರ್ತಿಸುವ ಸಿಬಂದಿ ಎಲ್ಲ ಕಡೆ ಇದ್ದಲ್ಲಿ ಪ್ರಯಾಣಿಕರು ಕೂಡ ಬಹಳ ನಿರ್ಮಲ ಮನಸ್ಸಿನಿಂದ ಪ್ರಯಾಣಿಸಬಹುದೇನೋ. ಕೊನೆಗೆ ನಮ್ಮ ಗಮ್ಯ ತಲುಪಿ, ಮಡಿಕೇರಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಶಂಕರ್ ಅವರಿಗೆ ಸುರಕ್ಷಿತವಾಗಿ ತಲುಪಿಸಿದ್ದಕ್ಕೆ ಧನ್ಯವಾದವನ್ನರ್ಪಿಸಿ ನಮ್ಮ ನಮ್ಮ ಜೋಪಡಿ ಸೇರಲು ಮಳೆಯಲ್ಲೇ ನೆನೆಯುತ್ತ ಸಾಗಿದ್ದೂ ಆಯಿತು.
ನಿಮ್ಮ ಪ್ರಯಾಣ ಸುಖಕರವಾಗಿ ಗಮ್ಯ ತಲುಪಿದ್ದರೆ ಅದಕ್ಕೆ ಕಾರಣ ಚಾಲಕರು. ಅವರಿಗೆ ಧನ್ಯವಾದ ತಿಳಿಸಲು ಮರೆಯದಿರಿ.
-ಚಂದನ್ ನಂದರಬೆಟ್ಟು
ಮಡಿಕೇರಿ