ಬೆಂಗಳೂರು: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವಿನ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಸ್ತೂರಿನಗರ ನಿವಾಸಿ ಯೋಗೇಂದ್ರ ಸಿಂಗ್(26) ಕೊಲೆಯಾದವ. ಕೃತ್ಯ ಎಸಗಿದ ಆತನ ಸ್ನೇಹಿತ ಉಮೇಶ್(28) ಎಂಬಾತನನ್ನು ಬಂಧಿಸಲಾಗಿದೆ.ಈ ಸಂಬಂಧ ಮೃತನ ತಂದೆ ವಿಶ್ವನಾಥ್ ಸಿಂಗ್ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ದೂರುದಾರ ವಿಶ್ವನಾಥ್ ಸಿಂಗ್, ಪತ್ನಿ ಪುಷ್ಪಬಾಯಿ ಮತ್ತು ಇಬ್ಬರು ಮಕ್ಕಳ ಜತೆ ಕಸ್ತೂರಿನಗರದಲ್ಲಿ ವಾಸವಾಗಿದ್ದಾರೆ. ಪುತ್ರಿಗೆ ಮದುವೆಯಾಗಿದ್ದು, ದಂಪತಿ ಶ್ರೀರಾಮಪುರದಲ್ಲಿ ವಾಸವಾಗಿದ್ದಾರೆ. ವಿಶ್ವನಾಥ್ ಸಿಂಗ್ ಆಟೋ ಚಾಲಕನಾಗಿದ್ದು, ಪುಷ್ಪಬಾಯಿ ಗೃಹಿಣಿಯಾಗಿದ್ದಾರೆ. ಕೊಲೆಯಾದ ಪುತ್ರ ಯೋಗೇಂದ್ರ ಸಿಂಗ್ ಎಸ್‌ಎಸ್‌ಎಲ್‌ಸಿ ಓದಿದ್ದು, ಆಟೋ ಚಾಲನೆ ಮಾಡಿಕೊಂಡಿದ್ದ. 20 ದಿನಗಳ ಹಿಂದಷ್ಟೇ ಕೋಲಾರದ ನರಸಾಪುರದಲ್ಲಿರುವ ಸಾಫ್ಟ್ ವೇರ್ ಕಂಪನಿಯ ಮಿನಿ ಬಸ್ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದು, ಅಲ್ಲಿಯೇ ವಾಸವಾಗಿದ್ದ.
ದಸರಾ ರಜೆ ನಿಮಿತ್ತ ಅ.12ರಂದು ಮನೆಗೆ ಬಂದಿದ್ದಾನೆ. ಅ.13ರ ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದ ಯೋಗೇಂದ್ರ ಸಿಂಗ್, ರಾತ್ರಿ 9.30ರ ಸುಮಾರಿಗೆ ಮನೆಗೆ ವಾಪಸ್ ಬಂದಿದ್ದಾನೆ. ಆ ವೇಳೆ ತಾಯಿ ಪುಷ್ಪಾಬಾಯಿ ಆತನಿಗೆ ಬುದ್ಧಿವಾದ ಹೇಳಿ ನಾಳೆಯಿದ ನೀನು ಡ್ನೂಟಿಗೆ ಹೋಗಬೇಕು. ತಕ್ಷಣ ಕೋಲಾರಕ್ಕೆ ಹೊರಡು ಎಂದಿ ದ್ದಾರೆ. ಆಗ ಯೋಗೇಂದ್ರಸಿಂಗ್, ಟಿಂಬರ್ ಯಾರ್ಡ್ ನಲ್ಲಿ ಕಂಪನಿಯ ಬಸ್ ನಿಲ್ಲಿಸಿದ್ದೇನೆ. ಬಸ್‌ನಲ್ಲಿ ಮಲಗಿ, ಬೆಳಗ್ಗೆ ಎದ್ದು ಹೋಗುತ್ತೇನೆ ಎಂದಿದ್ದಾನೆ.
ಈ ಮಧ್ಯೆ ಮನೆ ಸಮೀಪದ ಶಿವಣ್ಣ ಎಂಬುವರು, ಪುಷ್ಪಬಾಯಿಗೆ, ನಿಮ್ಮ ಮಗ ಕಲಾ ವೈನ್ಸ್ ಬಳಿ ಗಲಾಟೆ ಮಾಡಿಕೊಳ್ಳುತ್ತಿದ್ದಾನೆ ಎಂದು ಮಾಹಿತಿ
ನೀಡಿದ್ದಾರೆ. ಕೂಡಲೇ ಪರಿಚಯಸ್ಥ ಸಂತೋಷ್ ಎಂಬುವರ ಆಟೋದಲ್ಲಿ ವೈನ್ಸ್ ಸ್ಟೋರ್‌ಗೆ ಹೋದಾಗ ಯೋಗೇಂದ್ರಸಿಂಗ್ ರಕ್ತದ
ಮಡುವಿನಲ್ಲಿ ಬಿದ್ದಿದ್ದ. ಬಳಿಕ ತಂದೆ ವಿಶ್ವನಾಥ್ ಸಿಂಗ್ ಕೂಡ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ವೈನ್ಸ್ ಸ್ಟೋರ್‌ನ ಕ್ಯಾಶಿಯರ್ ಬಳಿ ವಿಚಾರಿಸಿದಾಗ ಉಮೇಶ್ ಎಂಬಾತ ಮದ್ಯದ ಬಾಟಲಿಯಿಂದ ಕೊಲೆಗೈದಿದ್ದಾನೆ ಎಂದು ಮಾಹಿತಿ ನೀಡಿದ್ದರು.