ಸಿರುಗುಪ್ಪ: ತಾಲೂಕಿನ ಎಚ್.ಹೊಸಳ್ಳಿ ಗ್ರಾಮದ ಗ್ರಾಮಪಂಚಾಯಿತಿ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ 2-3 ದಿನಕ್ಕೊಮ್ಮೆ ಕೆಟ್ಟು ನಿಲ್ಲುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವುದು ಸಾಮಾನ್ಯವಾಗಿದೆ. ಈ ಗ್ರಾಮದಲ್ಲಿರುವ ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಕುಡಿಯುವ ನೀರಿಗಾಗಿ ಕೆರೆಯನ್ನು ಮತ್ತು ಒಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕೆರೆಯಲ್ಲಿ ನೀರು ಖಾಲಿಯಾಗಿದ್ದು, ಇರುವ ಒಂದು ಶುದ್ಧ ಕುಡಿಯುವ ನೀರಿನ ಘಟಕದಿಂದಲೇ ನೀರನ್ನು ತಂದು ಬಳಕೆ ಮಾಡುತ್ತಾರೆ. ಆದರೆ ಈ ಘಟಕವು ಕಳೆದ 2 ತಿಂಗಳಿಂದ 2-3ದಿನಕ್ಕೊಮ್ಮೆ ಕೆಟ್ಟು ನಿಲ್ಲುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ 5 ಕಿಮೀ ದೂರದಲ್ಲಿರುವ ಕರೂರು ಅಥವಾ ದರೂರು ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ತಂದು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶುದ್ಧ ಕುಡಿಯುವ ನೀರು ಪಡೆಯಲು ಗ್ರಾಮಸ್ಥರು ರೂ. 5ಗಳ ಬಿಲ್ಲೆಯನ್ನು ಹಾಕಿದರೆ ಮಾತ್ರ ನೀರು ಬರುತ್ತವೆ. ಹಲವು ಬಾರಿ ರೂ. 5 ಬಿಲ್ಲೆ ಹಾಕಿದರೂ ನೀರು ಬರುತ್ತಿಲ್ಲ. ಮತ್ತೂಮ್ಮೆ ರೂ. 5 ಹಾಕಿದರೆ ನೀರು ಬರುತ್ತವೆ. ಇದರಿಂದಾಗಿ ಕೆಲವು ಬಾರಿ ಕಾಯಿನ್ ಹಾಕಿದರೂ ನೀರು ಬಾರದೆ ತಾಂತ್ರಿಕ ಸಮಸ್ಯೆ ಇದ್ದರೂ
ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಪದೇ ಪದೆ ಘಟಕ ಕೆಟ್ಟು ನಿಲ್ಲುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಘಟಕವನ್ನು ಸರಿಯಾಗಿ ರಿಪೇರಿ ಮಾಡಿಸಿ ಸತತವಾಗಿ ಶುದ್ಧ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಎಚ್. ಹೊಸಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ರಿಪೇರಿ ಮಾಡಿಸಿ ಶುದ್ಧ ನೀರೊದಗಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಾಪಂ ಇ.ಒ. ಶಿವಪ್ಪ ಸುಬೇದಾರ್ ತಿಳಿಸಿದ್ದಾರೆ.