ಸಿನಿಮಾ ನಿರ್ಮಾಣ ಮಾಡಬೇಕು ಎಂದು ಕೃಷ್ಣ ಮಾಸ್ಟರ್ ನಿರ್ಧರಿಸಿದಾಗ, ಅವರ ಒಬ್ಬೊಬ್ಬರೇ ಸ್ನೇಹಿತತರು ದೂರವಾಗತೊಡಗಿದರಂತೆ. ಎಲ್ಲಿ ಅವರು ಬಂದು ಸಾಲ ಕೇಳುತ್ತಾರೋ? ಹಾಗೆ ಪಡೆದ ಸಾಲವನ್ನು ವಾಪಸ್ಸು ಕೊಡುತ್ತಾರೋ ಇಲ್ಲವೋ? ಎಂಬ ಭಯದಿಂದ ದೂರಾದರಂತೆ. ಕೃಷ್ಣ ಮಾಸ್ಟರ್‌ಗೆ ಚಾಲೆಂಜ್ ಎನಿಸಿದ್ದೇ ಆಗ. ಈಗ ಅವರು ಆ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿ ಸ್ವೀಕರಿಸಿ, ಸಿನಿಮಾ ಮುಗಿಸಿದ್ದಾರೆ. ಇನ್ನು ಚಿತ್ರ ಗೆದ್ದುಬಿಟ್ಟರೆ ಇನ್ನೂ ಖುಷಿ ಎನ್ನುತ್ತಾರೆ ಕೃಷ್ಣ ಮಾಸ್ಟರ್.
ಅಂದಹಾಗೆ, ಅವರು ನಿರ್ಮಿಸಿರುವ ಚಿತ್ರದ ಹೆಸರು “ಟ್ರಿಗರ್’. ಚೇತನ್ ಗಂಧರ್ವ, ಜೀವಿಕಾ, “ಉಗ್ರಂ’ ರವಿ ಮುಂತಾದವರು ನಟಿಸಿರುವ ಈ ಚಿತ್ರ ಇದೇ ವಾರ ಬಿಡುಗಡೆಯಾಗುತ್ತಿದೆ. ಇದೇ ವಿಷಯವಾಗಿ ಚಿತ್ರತಂಡದವರು ಚಿತ್ರದ ಬಗ್ಗೆ ಮಾತಾಡುವುದಕ್ಕೆ ಮಾಧ್ಯಮದವರೆದುರು ಬಂದಿದ್ದರು.
ಈ ಚಿತ್ರಕ್ಕೆ ವಿಜ¿… ಪಾಳೇಗಾರ್ ಎನ್ನುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅವರು ಮೂಲತಃ ಕಲಾ ನಿರ್ದೇಶಕರಂತೆ. ಕಾಡಿನಲ್ಲಿ ಸೆಟ್ ಹಾಕುವುದಕ್ಕೆ ಒಮ್ಮೆ ಹೋದಾಗ, ಹೊಳೆದ ಕಥೆಯನ್ನು ಅವರು ಚಿತ್ರ ಮಾಡಿದ್ದಾರೆ. ಇಲ್ಲಿ ನಾಯಕ ಸಹ ಒಬ್ಬ ಕಲಾ ನಿರ್ದೇಶಕನ ಸಹಾಯಕ. ಕಾಡಿನಲ್ಲಿ ಚಿತ್ರವೊಂದರ ಸೆಟ್ ಹಾಕುವುದಕ್ಕೆ ಹೋದಾಗ ಏನೆಲ್ಲಾ ಕಷ್ಟಗಳು ಎದುರಾಗುತ್ತದೆ ಮತ್ತು ನಾಯಕ ಅದನ್ನು ಹೇಗೆಲ್ಲಾ ಎದರಿಸುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರಂತೆ.
ಇಲ್ಲಿ ಕಾಡಿನ ಸಮಸ್ಯೆಗಳು, ಅರಣ್ಯ ಒತ್ತುವರಿ, ಅರಣ್ಯವಾಸಿಗಳ ಒಕ್ಕಲೆಬ್ಬಿಸುವಿಕೆ … ಈ ತರಹದ ಯಾವುದಾದರೂ ಗಂಭೀರ ವಿಷಯ ಎಂದರೆ ಖಂಡಿತಾ ಇಲ್ಲ ಎಂದರು ಚೇತನ್ ಗಂಧರ್ವ. “ಇಲ್ಲಿ ಯಾವುದೇ ಸಾಮಾಜಿಕ ಸಮಸ್ಯೆಗಳಿಲ್ಲವಂತೆ. ಒಬ್ಬ ಸೆಟ್ ಹುಡುಗ, ಕಾಡಿಗೆ ಹೋದಾಗ ಏನೆಲ್ಲಾ ಎದುರಿಸುತ್ತಾನೆ ಎನ್ನುವುದು ಚಿತ್ರದ ಕಥೆ. ಇಲ್ಲಿ ಒಂದು ಲವ್ ಸ್ಟೋರಿ ಸಹ ಇದೆ. ಒಂದು ಸರಳ ಮತ್ತು ಸುಂದರವಾದ ಚಿತ್ರವನ್ನು ಮಾಡುವ ಪ್ರಯತ್ನ ಮಾಡಿದ್ದೇವೆ’ ಎಂದರು ಚೇತನ್.
ಅವರಿಗೆ ನಾಯಕಿಯಾಗಿ ಜೀವಿಕಾ ಮತ್ತು ಖಳನಾಯಕನಾಗಿ “ಉಗ್ರಂ’ ರವಿ ಇದ್ದಾರೆ. ಇಬ್ಬರೂ ತಮ್ಮ ಪಾತ್ರಗಳ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಚಂದ್ರು ಓಬಯ್ಯ ಹಾಡುಗಳ ಬಗ್ಗೆ ಮಾತಾಡಿದರು. ಇನ್ನು ಕೃಷ್ಣ ಮಾಸ್ಟರ್ ಜ್ಞಾನಭಾರತಿ ಹೈಸ್ಕೂಲ್ ಎಂಬ ಶಾಲೆ ಕಟ್ಟಿ, ಪ್ರಿನ್ಸಿಪಾಲ್ ಆಗಿದ್ದರಂತೆ. ಚಿತ್ರ ನಿರ್ಮಾಣ ಮಾಡುತ್ತಿರುವುದರಿಂದ, ಆ ಜವಾಬ್ದಾರಿಯನ್ನು ಬೇರೆಯವರಿಗೆ ಬಿಟ್ಟು ಚಿತ್ರ ಮಾಡುತ್ತಿರುವುದಾಗಿ ಹೇಳಿದರು. ಚಿತ್ರೀಕರಣ ಸಂದರ್ಭದಲ್ಲಿ ಪ್ರಾಂಶುಪಾಲರ ತರಹ ಸ್ಟ್ರಿಕ್ಟ್ ಆಗಿದ್ದರಿಂದ, ಕೆಲವು ಜನರಿಂದ ದೂರ ಆಗಿದ್ದಾಗಿಯೂ ಹೇಳಿಕೊಂಡರು.